Sunday 29 September 2013

ಆರೋಗ್ಯಕ್ಕಾಗಿ ಅತ್ತುಬಿಡಿ ...!

’ನಕ್ಕರೆ ಅದೇ ಸ್ವರ್ಗ’ ಅನ್ನೋ ಮಾತು ಕೆಳಿರ‍್ತಿರಾ.. ಮನಸ್ಸು ಬಿಚ್ಚಿ ನಕ್ಕರೆ ದೇಹದ ಆರೊಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತೆ. ಉತ್ತಮ ಆರೋಗ್ಯ ನಮ್ಮದಾಗುತ್ತೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹೌದು, ಮನುಷ್ಯ ಭಾವನಾ ಜೀವಿ. ಪ್ರತಿನಿತ್ಯ ನಗು, ಅಳು ಮಾಮೂಲಿ. ಅದೇ ಜೀವನ. ಬದುಕಿನಲ್ಲಿ ಕಹಿ ಇಲ್ಲದಿದ್ದರೆ ಸಿಹಿಯ ಅನುಭವ ಆಗುವುದಾದರೂ ಹೇಗೆ? ಹಾಗೆ, ಎಲ್ಲ ದಿನಗಳೂ ಭಾನುವಾರವಾಗಿರುವುದಿಲ್ಲ. ಜೀವನದಲ್ಲಿ ಕೆಲವು ಬಾರಿ, ಕೆಲವು ಘಟನೆಗಳು ದುಃಖವನ್ನು ಹೊತ್ತು ತಂದು ಬಿಡುತ್ತವೆ. ಅದಕ್ಕೆ ಕಾರಣ ಏನೇ ಇರಬಹುದು. ಮನಸ್ಸು ದುಃಖದಲ್ಲಿ ಮುಳುಗಿದಾಗ ಆ ಕ್ಷಣದಲ್ಲಿ  ಉಕ್ಕಿ ಬರುವ ದುಃಖವನನ್ನು ಮನಸ್ಸಿನೊಳಗೆ ಬಚ್ಚಿಡದೇ ಹೊರಹಾಕಿ ಬಿಡುವುದು ಒಳ್ಳೆಯದು. ಏಕೆಂದರೆ, ನಿಮಗೆ ಗೊತ್ತೇ ಅತ್ತರೆ ಆರೋಗ್ಯ ವೃಧ್ಧಿಯಂತೆ..! ಹೌದು, ಮನಸ್ಸಿಗೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ಅತಿಯಾದ ದುಃಖವನ್ನು ಮನದಲ್ಲಿಟ್ಟುಕೊಂಡರೆ ಅದು ಒಳಗೊಳಗೆ ಆರೋಗ್ಯವನ್ನು ತಿಂದು ಹಾಕಿಬಿಡುತ್ತದೆ. ಅದೇ ದುಃಖವನ್ನು ಆ ಕ್ಷಣದಲ್ಲಿ ಕಣ್ಣೀರಾಗಿ ಕರಗಿಸಿ ಹೊರಹಾಕಿಬಿಟ್ಟರೆ, ಅಥವಾ ಇತರೊಂದಿಗೆ ಮನದಾಳವನ್ನು ಹಂಚಿಕೊಂಡು ಮನಪೂರ್ತಿಯಾಗಿ ಅತ್ತುಬಿಟ್ಟರೆ ಮನಸ್ಸು ಹಗುರವಾಗುತ್ತದೆ. ಆಗ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಅಳುವುದರಿಂದ ದೇಹದಲ್ಲಿನ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಳುವುದರಿಂದ ಮನಸ್ಸು ಕೂಡ ಹಗುರವಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಮನಗಂಡಿರಬಹುದು. ಕೆಲವೊಂದು ಸಂಶೋಧನೆಗಳಿಂದ ಕೂಡ ಇದು ದೃಢಪಟ್ಟಿದೆ. ದುಃಖದಿಂದ ಅಥವಾ ಆನಂದದಿಂದ ಅಳುವುದರಿಂದ ಮನಸ್ಸಿನಲ್ಲಿರುವ ಭಾವನೆಗಳೆಲ್ಲವೂ ಹೊರಬರುತ್ತವೆ. ಕೇವಲ ಇಷ್ಟು ಮಾತ್ರವಲ್ಲದೆ ಇದರಿಂದ ಆರೋಗ್ಯಕ್ಕೂ ಹಲವಾರು ಲಾಭಗಳಿವೆ. ಕಣ್ಣೀರು ಸುರಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳಿವೆ. 
ನೀವು ತುಂಬಾ ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದರೆ ಒಮ್ಮೆ ಅತ್ತುಬಿಡಿ,  ಅಳುವುದರಿಂದ ಆಗ ಸಮಾಧಾನದ ಭಾವನೆ ಮೂಡುತ್ತದೆ. ಕಣ್ಣೀರು ಸುರಿಸಿದ ಬಳಿಕ ನಿಮ್ಮ ಮೆದುಳು, ಹೃದಯ ಮತ್ತು ಅಂಗಾಂಗ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯಾ ನಿರ್ವಹಿಸಲಾರಂಬಿಸುತ್ತದೆ ಹಾಗೂ ನಿಮಗೆ ಹಿತಕರ ಭಾವನೆಯುಂಟಾಗುತ್ತದೆ. ಇನ್ನೊಮ್ಮೆ ನಿಮ್ಮ ಹೃದಯ ಭಾರವಾಗಿ ಕಣ್ಣೀರು ಬಂದರೆ ಆಗ ನೀವು ಇದೊಂದು ದುರ್ಬಲತೆಯ ಲಕ್ಷಣವೆಂದು ಭಾವಿಸಬೇಡಿ. ಇದರಿಂದ ಹಲವಾರು ಲಾಭಗಳಿರುವ ಕಾರಣ ಕಣ್ಣೀರು ಸುರಿಸುವುದು ಕೆಟ್ಟದೇನಲ್ಲ. 
ಭಾವನಾತ್ಮಕ ಕಾರಣಗಳಿಂದ ಬಿಡುಗಡೆಯಾಗುವ ಕಣ್ಣೀರಿನಲ್ಲಿ ಶೇ. ೨೪ರಷ್ಟು ಆಲ್ಬುಮಿನ್ ಪ್ರೊಟೀನ್‌ನನ್ನು ಒಳಗೊಂಡಿರುತ್ತದೆ. ಇದು ದೇಹದ ಚಯಾಪಚಯ ವ್ಯವಸ್ಥೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅತಿಯಾದ ಒತ್ತಡದಿಂದ ಬರುವಂತಹ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹ ರೋಗಗಳ ವಿರುದ್ಧ ಹೋರಾಡಲು ಅಳು ನೆರವಾಗುತ್ತದೆ.
ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಯಾಕೆ ಬರುತ್ತದೆಯೆಂದು ನಿಮಗೆ ಯಾವತ್ತಾದರೂ ಅಚ್ಚರಿಯಾಗಿದೆಯೇ? ಯಾಕೆಂದರೆ ಈರುಳ್ಳಿಯಲ್ಲಿನ ಗಂಧಕಾಮ್ಲ ಹೆಚ್ಚಿದಾಗ ಬಿಡುಗದೆಯಾಗುತ್ತದೆ. ಇದು ಕಣ್ಣಿಗೆ ಕಿರಕಿರಿಯುಂಟು ಮಾಡುತ್ತದೆ. ಕಣ್ಣಿಗೆ ಧೂಳು ಬಿದ್ದರೂ ಇದೇ ರೀತಿಯ ನೀರು ಬರುತ್ತದೆ. ಈ ರೀತಿ ಅಳುವುದರಿಂದ ಕಣ್ಣನ್ನು ರಕ್ಷಿಸಬಹುದು ಮತ್ತು ಧೂಳಿನ ಕಣಗಳು ಕಣ್ಣೀರಿನೊಂದಿಗೆ ಹೊರಹೋಗುತ್ತವೆ. ಕಣ್ಣು ಸ್ವಚ್ಚವಾಗುತ್ತವೆ.
ಜೀವಾಣು ವಿಷಗಳನ್ನು ತೊಡೆದುಹಾಕಲು ಸಾಮಾನ್ಯ ಕಣ್ಣೀರಿನಲ್ಲಿ ಶೇ. ೯೮ರಷ್ಟು ನೀರು ಇರುವುದು ಪತ್ತೆಯಾಗಿದೆ. ಭಾವನಾತ್ಮಕ ಕಣ್ಣೀರಿನಿಂದ ಬಿಡುಗಡೆಯಾಗುವ ಹಾರ್ಮೋನುಗಳಿಂದ ದೇಹ ತುಂಬಾ ಆರಾಮಗೊಳ್ಳುತ್ತದೆ. ಏಕೆಂದರೆ, ದೇಹದಲ್ಲಿ ಭಾವನಾತ್ಮಕ ಒತ್ತಡದಿಂದ ಉತ್ಪತ್ತಿಯಾಗುವ ರಸಾಯನಿಕಗಳು ಈ ಕಣ್ಣೀರಿನಲ್ಲಿರುತ್ತದೆ
ದೇಹದ ಇತರ ಭಾಗಗಳಂತೆ ಕಣ್ಣಿನಲ್ಲಿಯೂ ಬ್ಯಾಕ್ಟೀರಿಯಾ ಕಂಡುಬರುತ್ತದೆ. ಕಣ್ಣೀರು ಎನ್ನುವುದು ನೈಸರ್ಗಿಕ ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುತ್ತದೆ. ಕಣ್ಣೀರಿನಲ್ಲಿ ’ಲೈಸೊಝೊಮ್’ ಎನ್ನುವ ದ್ರವವಿದ್ದು, ಇದು ಕಣ್ಣಿನಲ್ಲಿರುವ ಶೇ. ೯೦ರಿಂದ ೯೫ರಷ್ಟು ಬ್ಯಾಕ್ಟೀರಿಯಾಗಳನ್ನು ಕೇವಲ ಐದು ನಿಮಿಷದಲ್ಲಿ ಕೊಲ್ಲುತ್ತದೆ.  ಕಣ್ಣೀರು ನಿಮ್ಮ ದೃಷ್ಟಿಯನ್ನು ಸುಧಾರಿಸಲು ನೆರವಾಗುತ್ತದೆ. ಕೆಲವೊಮ್ಮೆ ಕಣ್ಣಿನ ನಿರ್ಜಲೀಕರಣವಾದ ಪೊರೆಗಳಿಂದಾಗಿ ದೃಷ್ಟಿ ಸ್ವಲ್ಪ ಮಂದವಾದಂತಾಗಬಹುದು. ನೀವು ಅತ್ತಾಗ ಕಣ್ಣೀರು ಪೊರೆಗಳಿಗೆ ತೇವವನ್ನು ಒದಗಿಸುತ್ತದೆ ಮತ್ತು ಇದರಿಂದ ಸಂಪೂರ್ಣ ದೃಷ್ಟಿ ಸುಧಾರಿಸಲು ನೆರವಾಗುತ್ತದೆ. ಈಗ ನಿಮಗೆ ಅರ್ಥವಾಗಿರಬೇಕು,  ಅತ್ತರೂ ಲಾಭವಿದೆ ಎಂದು. ದುಖ ಬಂದಾಗ ಬಿಕ್ಕಿ ಬಿಕ್ಕಿ ಅತ್ತುಬಿಡಿ. ಆರೋಗ್ಯಕ್ಕೆ ಅಳುವೂ ಬೇಕು... ಖುಷಿಯೊಂದಿಗಿನ ಕಣ್ಣೀರೂ ಬೇಕು....

No comments:

Post a Comment