Friday 18 January 2013

Current Events - 2014

ಪ್ರಚಲಿತ ವಿದ್ಯಮಾನಗಳು ಜನವರಿ 2, 2014


ಸ್ವದೇಶಿ ನಿರ್ಮಿತ ಸರಸ್ ವಿಮಾನ ಅಧಿಕೃತ ಹಾರಟಕ್ಕೆ ಸಿದ್ಧ
ಸ್ವದೇಶಿ ನಿರ್ಮಿತ 14 ಸೀಟುಗಳ ಮಲ್ಟಿರೋಲ್ ವಿಮಾನ ಸರಸ್ 15 ದಿನದೊಳಗೆ ಮೊದಲ ಅಧಿಕೃತ ಹಾರಾಟಕ್ಕೆ ಸಿದ್ಧವಾಗಲಿದೆ. ಈ ಮೇಲ್ದರ್ಜೆಗೇರಿಸಲ್ಪಟ್ಟ ಸರಸ್ ಆಕಾಶಕ್ಕೇರಬೇಕಾದರೆ ಲೋಸ್ಪೀಡ್ ಟ್ಯಾಕ್ಸಿ, ಹೈ ಸ್ಪೀಡ್ ಟ್ಯಾಕ್ಸಿ ಮತ್ತಿತರ ಪರೀಕ್ಷೆ ಕಡ್ಡಾಯ. 15 ದಿನದೊಳಗೆ ಪರೀಕ್ಷೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬಳಿಕ ಸರಸ್ ಅನ್ನು ವಾಯುಸೇನೆಗೆ ಸೇರ್ಪಡೆಗೊಳಿಸುವ ಕಾರ್ಯ ಆರಂಭವಾಗಲಿದೆ.
ಏನಿದು ಸರಸ್?
ಇದೊಂದು ದೇಶೀಯವಾಗಿ ನಿರ್ಮಿತ ಎರಡು ಎಂಜಿನ್‌ನ ಮಲ್ಟಿರೋಲ್ ಹಗುರ ಸಾಗಣೆ ವಿಮಾನವಾಗಿದೆ. ಈ ವಿಮಾನವನ್ನು ದೇಶೀಯ ಕಂಪನಿಗಳಾದ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್(ಎನ್‌ಎಎಲ್) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ವಿನ್ಯಾಸಗೊಳಿಸಿದೆ. ಭಾರತೀಯ ವಾಯುಸೇನೆಗೆಂದೇ ಈ ವಿಮಾನ ನಿರ್ಮಿಸಲಾಗುತ್ತಿದೆ.
ಕಾರ್ಯವೇನು?
ಪ್ರಯಾಣಿಕರು ಮತ್ತು ಸರಕು ಸಾಗಣೆ, ರಿಮೋಟ್ ಸೆನ್ಸಿಂಗ್, ತರಬೇತಿಗಾಗಿ, ಏರಿಯಲ್ ಹಾಗೂ ಕರಾವಳಿ ಕಣ್ಗಾವಲು, ಗಡಿ ಗಸ್ತು, ವೈದ್ಯಕೀಯ ಸ್ಥಳಾಂತರ ಯೋಜನೆಗಳಿಗೂ ಈ ವಿಮಾನ ಬಳಸಬಹುದು.
ಅಭಿವೃದ್ಧಿ ಹಂತಗಳು:
ರಷ್ಯಾದ ಸಹಭಾಗಿತ್ವದೊಂದಿಗೆ 1991ರಲ್ಲಿ ಸರಸ್ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಯಿತು. ಹಣಕಾಸು ಸಮಸ್ಯೆಯಿಂದಾಗಿ ರಷ್ಯಾ ಆರಂಭಿಕ ಹಂತದಲ್ಲೇ ಈ ಯೋಜನೆಯಿಂದ ಹಿಂದೆ ಸರಿಯಿತು.  1995ರಲ್ಲಿ ಯೋಜನೆಗೆ ಚುರುಕು ನೀಡಲು ಸರ್ಕಾರ ಸಿವಿಲ್ ಏರ್‌ಕ್ರಾಫ್ಟ್ ಆಯಂಡ್ ಡೆವಲಪ್‌ಮೆಂಟ್ ಅನ್ನು ಸ್ಥಾಪಿಸಿತು. ಸರ್ಕಾರದ ಅನುಮೋದನೆ ಸಮಸ್ಯೆ ಹಿನ್ನೆಲೆಯಲ್ಲಿ ಸರ್ಕಾರ 1998ರಲ್ಲಿ ಸರಸ್ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ರದ್ದು ಮಾಡಿತು. 1999ರಲ್ಲಿ ಮತ್ತೆ ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಕ್ಕಿತು.
ವಿಮಾನ ವಿನ್ಯಾಸ:
ಮೊದಲ ಮಾದರಿ ವಿಮಾನ ಎರಡು 850 ಎಚ್‌ಪಿ ಪ್ರಟ್ ಆಯಂಡ್ ವೈಟ್ನೆ ಪಿಟಿ6ಎ- 66 ಟರ್ಬೋಪ್ರಾಪ್ ಎಂಜಿನ್‌ಗಳನ್ನು ಹೊಂದಿತ್ತು. ಮೊದಲ ಹಾರಾಟ ನಡೆದದ್ದು ಮೇ 29, 2004ರಂದು.  ಈ ವಿಮಾನ ಅರೆ ಏರ್‌ಫೀಲ್ಡ್‌ಗಳು, ಹುಲ್ಲಿನಿಂದ ಕೂಡಿದ ರನ್‌ವೇಗಳ ಮೂಲಕ ಹಗಲು ರಾತ್ರಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ. ಹೈ ಆಲ್ಟಿಟ್ಯೂಡ್ ಹಾಗೂ ಉಷ್ಣ ವಾತಾವರಣದಲ್ಲೂ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿದೆ. ಈ ವಿಮಾನದ ಅಭಿವೃದ್ಧಿಯು ಸ್ವದೇಶಿ ಪ್ರಯಾಣಿಕರ ವಿಮಾನವನ್ನು ಹೊಂದುವ ದೇಶದ ಪ್ರಯತ್ನವಾಗಿದೆ.
ಹೊಸ ಮಾದರಿ:
ಈ ವಿಮಾನ ಅಭಿವೃದ್ಧಿ 50, 100 ಸೀಟುಗಳ ವಿಮಾನ ಅಭಿವೃದ್ಧಿಪಡಿಸಲು ಭಾರತದ ಏರೋ ಎಂಜಿನಿಯರ್‌ಗಳು ಗಮನಹರಿಸಲಿದ್ದಾರೆ. 14 ಸೀಟರ್ ಸದ್ಯ ಸರಸ್‌ನ ಮೊದಲ ಮಾದರಿಯನ್ನು ಆಧುನಿಕ ವಿನ್ಯಾಸದ ಅಗತ್ಯಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸಲಾಗಿದೆ. 850 ಎಚ್‌ಪಿ ಎಂಜಿನ್ ಬದಲು 1,200 ಎಚ್‌ಪಿ ಎಂಜಿನ್ ಅಳವಡಿಸಲಾಗಿದೆ. ಈ ವಿಮಾನ 14 ಸೀಟುಗಳನ್ನು ಹೊಂದಿರಲಿದೆ.

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ :ಟೈಮ್ಸ್ ಸಮೀಕ್ಷೆ
bill gatesಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಅವರು ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ. ಭಾರತ ಸೇರಿದಂತೆ 13 ರಾಷ್ಟ್ರಗಳಲ್ಲಿ ಟೈಮ್ಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ಈ ವಿಚಾರವನ್ನು ಬಹಿರಂಗಪಡಿಸಿದೆ. ಸಮೀಕ್ಷೆ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಜನಮೆಚ್ಚುಗೆ ಗಳಿಸಿರುವ 30 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಸಮೀಕ್ಷೆಯಲ್ಲಿ ಭಾರತೀಯರು:
ಜನಮೆಚ್ಚುವ ವಿಶ್ವದ 30 ವ್ಯಕ್ತಿಗಳ ಪಟ್ಟಿಯಲ್ಲಿ ಆರು ಮಂದಿ ಭಾರತೀಯರು ಸ್ಥಾನ ಪಡೆದಿದ್ದಾರೆ. ಕ್ರಿಕೆಟ್‌ ಮಾಂತ್ರಿಕ ಸಚಿನ್‌ ತೆಂಡುಲ್ಕರ್‌ ಅವರು 5ನೇ ಸ್ಥಾನದಲ್ಲಿದ್ದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 7ನೇ ಸ್ಥಾನ ಅಲಂಕರಿಸಿದ್ದಾರೆ. ಉಳಿದಂತೆ ಬಾಲಿವುಡ್‌ನ‌ ಪ್ರಸಿದ್ಧ ನಟ ಅಮಿತಾಭ್‌ ಬಚ್ಚನ್‌ (9), ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ (10), ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ (14), ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (18), ಉದ್ಯಮಿ ರತನ್‌ ಟಾಟಾ (30) ಅವರೂ ಸ್ಥಾನ ಪಡೆದಿದ್ದಾರೆ.
ವಿಶ್ವ ದಿಗ್ಗಜರು:
ಒಟ್ಟಾರೆ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್‌ ಗೇಟ್ಸ್‌ ಅವರು ಮೊದಲ ಸ್ಥಾನದಲ್ಲಿದ್ದರೆ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಪೋಪ್‌ ಫ್ರಾನ್ಸಿಸ್‌ ಹಾಗೂ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್‌ ಅವರು ಕ್ರಮವಾಗಿ 2, 3, 4, 5ನೇ ಸ್ಥಾನ ಪಡೆದಿದ್ದಾರೆ.
ಸಮೀಕ್ಷೆ ಹೇಗೆ?
ಭಾರತ, ಗ್ರೇಟ್‌ ಬ್ರಿಟನ್‌, ಫ್ರಾನ್ಸ್‌, ಜರ್ಮನಿ, ರಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಡೋನೇಷ್ಯಾ, ಚೀನಾ, ಈಜಿಪ್ಟ್, ನೈಜೀರಿಯಾ, ಬ್ರೆಜಿಲ್‌ನಲ್ಲಿನ 14 ಸಾವಿರ ಜನರನ್ನು ಸಂದರ್ಶಿಸಿ ‘ಯುಗವ್‌’ ಎಂಬ ಖಾಸಗಿ ಸಂಸ್ಥೆಯು ‘ವಿಶ್ವದ ಅತಿ ಹೆಚ್ಚು ಮೆಚ್ಚುಗೆಯ ವ್ಯಕ್ತಿಗಳ ಸಮೀಕ್ಷೆ’ ನಡೆಸಿ ಈ ಪಟ್ಟಿ ಸಿದ್ಧಪಡಿಸಿದೆ. 13 ದೇಶಗಳ ಸಮೀಕ್ಷೆಯನ್ನೂ ಈ ಸಂಸ್ಥೆ ಬಿಡುಗಡೆ ಮಾಡಿದೆ.

ಚೂರು-ಪಾರು ಸುದ್ಧಿಗಳು:
    teacher
  • ಸಾಮಾಜಿಕ ಸೇವಾ ಕಾರ್ಯಕರ್ತೆ ಮೇಧಾ ಪಾಟ್ಕರ್ ಗೆ ಬಸವ ಕೃಷಿ ಪ್ರಶಸ್ತಿ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ 2014ನೇ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ಮಧ್ಯಪ್ರದೇಶದ ಪರಿಸರವಾದಿ, ಸಾಮಾಜಿಕ ಸೇವಾ ಕಾರ್ಯಕರ್ತೆ ಮೇಧಾ ಪಾಟ್ಕರ ಅವರನ್ನು ಆಯ್ಕೆ ಮಾಡಲಾಗಿದೆ ಕೃಷಿ ಹಾಗೂ ಕೃಷಿಕರನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ 2012ರಲ್ಲಿ ರಾಷ್ಟ್ರಮಟ್ಟದ ಬಸವ ಕೃಷಿ ಪ್ರಶಸ್ತಿ ಸ್ಥಾಪಿಸಲಾಗಿದೆ. 2012ರಲ್ಲಿ ರಾಜಸ್ಥಾನದ ರಾಜೇಂದ್ರಸಿಂಗ್‌, 2013ರಲ್ಲಿ ಅಣ್ಣಾ ಹಜಾರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಪ್ರಶಸ್ತಿ 50 ಸಾವಿರ ರೂ. ನಗದು, ತಾಮ್ರ ಪತ್ರ ಹಾಗೂ ಸ್ಮರಣ ಫಲಕ ಹೊಂದಿದೆ.

  • ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್‌ ಶರೋನ್‌ ನಿಧನ: ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್‌ ಶರೋನ್‌ ನಿಧನರಾದರು. ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಎಂಟು ವರ್ಷಗಳಿಂದ ಟೆಲ್‌ ಅವೀವ್‌ ನಗರ ಬಳಿಯ ಆಸ್ಪತ್ರೆಯೊಂದರಲ್ಲಿ ಕೋಮಾ ಸ್ಥಿತಿಯಲ್ಲಿದ್ದರು. ಇಸ್ರೇಲ್‌ನ 11ನೇ ಪ್ರಧಾನಿ ಆಗಿದ್ದ ಶರೋನ್‌ ಕೊನೆಯುಸಿರೆಳೆಯುವಾಗ ಅವರ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿದ್ದರು. ಇಸ್ರೇಲ್‌ ಸ್ವಾತಂತ್ರ್ಯ ಪಡೆದ ನಂತರ ನಡೆದ ಯುದ್ಧಗಳಿಗೆ ಶೆರೋನ್‌ ನೀಡಿದ ಕೊಡುಗೆಗಳಿಂದ ಅವರು ದೇಶದಲ್ಲಿ ‘ಮಿ. ಸೆಕ್ಯೂರಿಟಿ’ ಎಂದೇ ಗುರುತಿಸಿಕೊಳ್ಳುತ್ತಿದ್ದರು. ಆದರೆ, ಅರಬ್‌ ಜಗತ್ತು ಅವರನ್ನು ‘ಸಾಬ್ರಾ ಮತ್ತು ಷಟಿಲಾದ ಕಟುಕ’ ಎಂದು ಸಂಭೋದಿಸುತ್ತಿತ್ತು. 1982ರಲ್ಲಿ ಶರೋನ್‌ ರಕ್ಷಣಾ ಸಚಿವರಾಗಿದ್ದಾಗ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಈ ದಾಳಿಯ ರೂವಾರಿ ಶೆರೋನ್‌ ಆಗಿದ್ದರು.

  • ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ನಡುವೆ ಒಪ್ಪಂದ: ದೂರಸಂಪರ್ಕ ಮೂಲ ಸೌಕರ್ಯಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇದರ ಪ್ರಕಾರ ಉಭಯ ಕಂಪನಿಗಳು ದೂರಸಂಪರ್ಕ ಕ್ಷೇತ್ರದಲ್ಲಿ ಪರಸ್ಪರ ಮೊಬೈಲ್ ಟವರ್ ಮತ್ತು ತಾಂತ್ರಿಕ ವಿಚಾರಗಳ ಹಂಚಿಕೆ ಮಾಡಿಕೊಳ್ಳಲಿವೆ. ರಿಲಯನ್ಸ್ ಜಿಯೋ ಇನ್ಫೊಕಾಮ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)ನ ಸಹವರ್ತಿ ಸಂಸ್ಥೆಯಾಗಿದೆ. ಇದು ದೇಶದ 22 ದೂರಸಂಪರ್ಕ ವಲಯಗಳಲ್ಲಿ ಪರವಾನಗಿ ಹೊಂದಿದೆ.ಭಾರ್ತಿ ಏರ್‌ಟೆಲ್ 11 ದೂರಸಂಪರ್ಕ ವಲಯಗಳಲ್ಲಿ 35,376 ಟವರ್‌ಗಳನ್ನು ಹೊಂದಿದೆ. 1,75,705 ಕಿಲೋಮೀಟರ್‌ನಷ್ಟು ಆಪ್ಟಿಕ್ ಫೈಬರ್ ಕೇಬಲ್ ಸಂಪರ್ಕ ಜಾಲವನ್ನು ಹೊಂದಿದೆ.

  • ‘ಅಮೆರಿಕನ್‌ ಹಸಲ್‌’ ಚಿತ್ರಕ್ಕೆ ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ: ಆಸ್ಕರ್‌ ಪುರಸ್ಕಾರದ ದಿಕ್ಸೂಚಿ ಎಂದೇ ಪರಿಗಣಿಸಲಾಗಿರುವ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳು ಘೋಷಣೆಯಾಗಿದ್ದು, ‘ಅಮೆರಿಕನ್‌ ಹಸಲ್‌’ ಚಿತ್ರ ಮೂರು ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ವೇಳೆ 71 ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು, ಅಮೆರಿಕನ್‌ ಹಸಲ್‌ ಚಿತ್ರ ಅತ್ಯುತ್ತಮ ಹಾಸ್ಯ ಚಿತ್ರ ಗೌರವಕ್ಕೆ ಪಾತ್ರವಾಗಿದೆ. ಜೊತೆಗೆ ಆಯಮಿ ಆಯಡಮ್ಸ್‌ ಮತ್ತು ಜೆನ್ನಿಫ‌ರ್‌ ಲಾರೆನ್ಸ್‌ ಕ್ರಮವಾಗಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

 

ಪ್ರಚಲಿತ ವಿದ್ಯಮಾನಗಳು ಜನವರಿ 1, 2014


ಭಾರತದ ಕಂಪನಿಯೊಂದಿಗೆ ಪ್ರತಿಷ್ಠಿತ  ಲಿವರ್‌ಪೂಲ್‌ ತಂಡ ಒಪ್ಪಂದ
ಪ್ರಚಲಿತ ವಿದ್ಯಮಾನಗಳು ಜನವರಿ 1, 2014ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾದ ಲಿವರ್‌ಪೂಲ್‌ ತಂಡ ಈಗ ಭಾರತದ ಕಂಪನಿಯೊಂದಿಗೆ ಇದೇ ಮೊದಲ ಬಾರಿ ಮಾರುಕಟ್ಟೆ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಪ್ರತಿಷ್ಠಿತ ಫ‌ುಟ್ಬಾಲ್‌ ಟೂರ್ನಿ ಕೈ ಕಾಲೂರಲು ಪ್ರಯತ್ನಗಳು ಆರಂಭವಾದಂತಾಗಿದೆ.
ಒಪ್ಪಂದವೇನು?
  • ರೆಡ್ಸ್‌ ಮೂರು ವರ್ಷಗಳ ಅವಧಿಗೆ ಕೊಲೊ ಸ್ಮಾರ್ಟ್‌ ಫೋನ್‌ ಜತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಭಾರತೀಯ ಅಭಿಮಾನಿಗಳು ಈ ಮೊಬೈಲ್‌ನಲ್ಲಿ ಕಿರು ಚಿತ್ರಗಳನ್ನು ವೀಕ್ಷಿಸಬಹುದಾಗಿದ್ದು, ಲಿವರ್‌ಪೂಲ್‌ ತಂಡದ ಪ್ರಮುಖ ಆಟಗಾರರನ್ನು ಭೇಟಿ ಮಾಡುವ ಅವಕಾಶ ಕಲ್ಪಿಸಿದೆ.
  • ಲಿವರ್‌ಪೂಲ್‌ ತಂಡ ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದ್ದು, ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ.
  • ಸದ್ಯದಲ್ಲೇ ಪುಣೆಯಲ್ಲಿ ಅಂತಾರಾಷ್ಟ್ರೀಯ ಅಕಾಡೆಮಿಯನ್ನು ತೆರೆಯಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಇಂಗ್ಲೀಷ್‌ ಚಾಂಪಿಯನ್‌ ಮ್ಯಾಂಚೆಸ್ಟರ್‌ ಯುನೈಟೆಡ್‌ ಮತ್ತು ಲಿವರ್‌ಪೂಲ್‌ ತಂಡಗಳು ಭಾರತೀಯ ಟಯರ್‌ ಕಂಪನಿ ಅಪೊಲೊ ಜತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದವು.

ಧ್ರುವೀಯ ಸುಳಿಗಾಳಿಗೆ (ಪೋಲಾರ್ ವೋರ್ಟೆಕ್ಸ್) ತತ್ತರಿಸಿದ ಅಮೆರಿಕ
polar vertexಧ್ರುವೀಯ ಸುಳಿಗಾಳಿ(ಪೋಲಾರ್ ವೋರ್ಟೆಕ್ಸ್)ಯಿಂದಾಗಿ ಅಮೆರಿಕ ಅಕ್ಷರಶಃ ತತ್ತರಿಸಿದೆ. ಇಲ್ಲಿನ ಕೆಲ ಪ್ರದೇಶಗಳಲ್ಲಿ ತಾಪಮಾನ -40 ಡಿ.ಸೆ. ತಲುಪಿದ್ದು ಜನರು ಮನೆಯಿಂದ ಹೊರಬರದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಾವಿರಾರು ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ಶಾಲೆ, ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಈ ಹಿನ್ನೆಲೆಯಲ್ಲಿ ಪೋಲಾರ್ ವೋರ್ಟೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ.
ಧ್ರುವೀಯ ಸುಳಿಗಾಳಿ ಎಂದರೇನು?
ಪೋಲಾರ್ ವೋರ್ಟೆಕ್ಸ್ ಅನ್ನು ಆರ್ಕ್ಟಿಕ್ ಸೈಕ್ಲೋನ್ ಎಂದೂ ಕರೆಯುತ್ತಾರೆ. ಪೋಲಾರ್ ವೋರ್ಟೆಕ್ಸ್(ಧ್ರುವೀಯ ಸುಳಿಗಾಳಿ) ಹುಟ್ಟುವುದು ಉತ್ತರ ಧ್ರುವದಲ್ಲಿ. ಅತ್ಯಂತ ಶೀತದ, ಕಡಿಮೆ ತಾಪಮಾನದ ಈ ಪ್ರದೇಶಗಳು ಚಳಿಗಾಲದಲ್ಲಿ ಬಲಿಷ್ಠವಾಗಿ, ಬೇಸಗೆಯಲ್ಲಿ ದುರ್ಬಲವಾಗುತ್ತವೆ. ಇಲ್ಲಿ ಹುಟ್ಟಿದ ಸಾಂದ್ರ ಹಾಗೂ ಶೀತವಾದ ಗಾಳಿಯು ಉತ್ತರ ಧ್ರುವದಿಂದ ಬೇರ್ಪಟ್ಟು ಭಾರಿ ಪ್ರಮಾಣದ ಮಾರುತದೊಂದಿಗೆ ದಕ್ಷಿಣದೆಡೆಗೆ ಬೀಸಲಾರಂಭಿಸಿದೆ. ಇದರಿಂದಲೇ ಅಮೆರಿಕದಲ್ಲಿ ಧ್ರುವೀಯ ಸುಳಿಗಾಳಿಯು ಪ್ರತಾಪ ಮೆರೆಯುತ್ತಿದೆ.
ಏಕೆ ಅಪಾಯಕಾರಿ? 
  • ವಾತಾವರಣದ ತಾಪಮಾನವು ಅತ್ಯಂತ ಕಡಿಮೆ ಮಟ್ಟಕ್ಕಿಳಿಯುವ ಕಾರಣ ಸೂಕ್ತ ಬಂದೋಬಸ್ತ್ ಅಂದರೆ ದೇಹ ಮುಚ್ಚಿಕೊಳ್ಳುವ ವಸ್ತ್ರ ಧರಿಸದೇ ಹೋದಲ್ಲಿ ದೇಹವು ಐದೇ ನಿಮಿಷದಲ್ಲಿ ಮಂಜುಗಡ್ಡೆಯಂತಾಗಬಹುದು.
  • ಅತಿಯಾದ ಶೀತ ತಾಪಮಾನವು ಫ್ರಾಸ್ಟ್‌ಬೈಟ್(ಭಾರಿ ಚಳಿಗೆ ದೇಹವೊಡ್ಡುವುದರಿಂದ ದೇಹದ ಅಂಗಾಂಗಗಳಿಗೆ ಹಾನಿ. ಅಂದರೆ, ಮೂಗು, ಕೈಬೆರಳುಗಳು ಹಾಗೂ ಕಾಲಿನ ಬೆರಳುಗಳಿಗೆ ಹಾನಿಯಾಗಿ ಕ್ರಮೇಣ ಇದು ಗ್ಯಾಂಗ್ರೀನ್ ಆಗಿ ಬದಲಾಗಬಹುದು), ಹೈಪೋಥರ್ಮಿಯಾ(ದೇಹದ ಉಷ್ಣತೆ ಅತ್ಯಂತ ಕಡಿಮೆ ಮಟ್ಟಕ್ಕಿಳಿಯುವುದು)ದಂತಹ ಸಮಸ್ಯೆಗೆ ಕಾರಣವಾಗಬಹುದು.
  • ವಾಹನ ಸ್ಟಾರ್ಟ್ ಆಗದೇ ಸಮಸ್ಯೆ ಉಂಟಾಗಬಹುದು. ಶೀತ ಗಾಳಿ ಗಂಟೆಗೆ 100 ಮೈಲು(160 ಕಿ.ಮೀ.) ವೇಗದಲ್ಲಿ ಆರ್ಕ್ಟಿಟ್ ಅನ್ನು ಸುತ್ತಲಾರಂಭಿಸುತ್ತದೆ.
ಕಾರಣಗಳೇನು?
ಧ್ರುವೀಯ ಸುಳಿಗಾಳಿಯು ಕೆಳಮುಖವಾಗಿ ಚಲಿಸುವುದು ಅಪ್ರದಕ್ಷಿಣಾಕಾರವಾಗಿ ಸುತ್ತುತ್ತಾ ಗಾಳಿಯು ಆರ್ಕ್ಟಿಟ್‌ನ ಶೀತಗಾಳಿಯೊಂದಿಗೆ ಬೆರೆಯುತ್ತದೆ. ಸುಳಿಗಾಳಿಯು ದುರ್ಬಲಗೊಂಡು, ಪ್ರತ್ಯೇಕವಾಗುತ್ತದೆ ,ಆರ್ಕ್ಟಿಟ್ ಮಾರುತವು ದಕ್ಷಿಣದತ್ತ ಚಲಿಸುತ್ತದೆ; ಇಲ್ಲಿ ಈ ಗಾಳಿ ಕೇವಲ ಶೀತ ಮಾತ್ರವಲ್ಲ, ನೈಜ ಆರ್ಕ್ಟಿಕ್ ಗಾಳಿಯಾಗಿರುತ್ತದೆ. ಸುಳಿಗಾಳಿ ದುರ್ಬಲಗೊಂಡು ಚದುರಿಹೋಗುತ್ತದೆ. ಆರ್ಕ್ಟಿಟ್‌ನಲ್ಲಿ ಬಿಸಿಯಾಗುವ ತಾಪಮಾನವೇ ಸುಳಿಗಾಳಿಯನ್ನು ಚದುರುವಂತೆ ಮಾಡುತ್ತದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.

ಚೂರು-ಪಾರು ಸುದ್ಧಿಗಳು:
    barbie
  • ಕುಂಗ್‌ ಫ‌ು ಚಿತ್ರಗಳ ಜನಕ ಹಾಲಿವುಡ್‌ ನಿರ್ಮಾಪಕ ರನ್‌ ರನ್‌ ಶಾ ನಿಧನ:  ಕುಂಗ್‌ ಫ‌ು ಚಿತ್ರಗಳನ್ನು ಜಗತ್ತಿಗೆ ಪರಿಚಯಿಸಿದ ಹಾಲಿವುಡ್‌ ನಿರ್ಮಾಪಕ ರನ್‌ ರನ್‌ ಶಾ ನಿಧನರಾಗಿದ್ದಾರೆ. ಶಾ ಅವರು 1967ರಲ್ಲಿ ಶಾ ಬ್ರದರ್ಸ್‌ ಸ್ಟುಡಿಯೋವನ್ನು ಆರಂಭಿಸಿದ್ದರು. ಇದು ಪ್ರಸಕ್ತ ವಿಶ್ವದ ಅತ್ಯಂತ ದೊಡ್ಡ ಸ್ಟುಡಿಯೋಗಳ ಪೈಕಿ ಒಂದಾಗಿದೆ. ತಮ್ಮ ಚಿತ್ರಗಳಲ್ಲಿ ಕುಂಗ್‌ ಫ‌ು ಕಲೆಯನ್ನು ಮೊತ್ತಮೊದಲ ಬಾರಿಗೆ ಅಳವಡಿಸಿಕೊಂಡಿದ್ದ ಶಾ, ಈ ಮೂಲಕ ಎಲ್ಲೆಡೆ ಇಂತಹ ಕಲೆಯನ್ನು ತಲುಪಿಸುವಲ್ಲಿ ನೆರವಾಗಿದ್ದರು.

  • ಅಮೆರಿಕಾದ ಫಡರಲ್ ರಿಸರ್ವ ಬ್ಯಾಂಕ್  ಅಧ್ಯಕ್ಷೆಯಾಗಿ ಜೇನೆಟ್ ಯೆಲೆನ್: 100 ವರ್ಷಗಳ ಇತಿಹಾಸವಿರುವ ಅಮೆರಿಕಾದ ಕೇಂದ್ರ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜೇನೆಟ್‌ ಯೆಲೆನ್‌ ಫೆಬ್ರವರಿ 1 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯೆಲೆನ್‌ ಅವರನ್ನು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿರುವ ಅಧ್ಯಕ್ಷ ಒಬಾಮಾ ನಿರ್ಧಾರಕ್ಕೆ ಅಮೆರಿಕ ಸೆನೆಟ್‌ ಸಮ್ಮತಿ ನೀಡಿದೆ.

  • ರಿಯಲ್‌ ಮ್ಯಾಡ್ರಿಡ್‌ ತಂಡದ ಕ್ರಿಶ್ಚಿಯಾನೊ ರೊನಾಲ್ಡೊಗೆ ವೃತ್ತಿಜೀವನದಲ್ಲಿ 400ನೇ ಗೋಲ್: ರಿಯಲ್‌ ಮ್ಯಾಡ್ರಿಡ್‌ ತಂಡದ ಸ್ಟಾರ್‌ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ ಒಟ್ಟು 400 ಗೋಲು ಗಳಿಸಿದ್ದಾರೆ. ಈ ಮೂಲಕ 400 ಗೋಲುಗಳಿಸಿದ ಅಪರೂಪದ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ ಪಂದ್ಯಗಳಲ್ಲಿ ಅವರು 47 ಗೋಲನ್ನು ಗಳಿಸಿದ್ದರೂ, ಲೀಗ್‌ ಪಂದ್ಯಗಳಲ್ಲಿ ಉಳಿದ ಗೋಲುಗಳನ್ನು ಬಾರಿಸಿದ್ದಾರೆ. ರಿಯಲ್‌ಮ್ಯಾಡ್ರಿಡ್‌ ವರ್ಸಸ್‌ ಸೆಲ್ಟಾವಿಗೋ ಪಂದ್ಯದಲ್ಲಿ 2 ಗೋಲು ಗಳಿಸುವ ಅವರು ಈ ಸಾಧನೆ ಮಾಡಿದ್ದಾರೆ.

  • ಹಾವೇರಿಯಲ್ಲಿ ಮುಂದಿನ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ : ಮುಂದಿನ ವರ್ಷದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ. ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಸಭೆಯಲ್ಲಿ 81ನೇ ಸಾಹಿತ್ಯ ಸಮ್ಮೇಳನವನ್ನು ಸರ್ವಜ್ಞನ ನಾಡಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹಾವೇರಿಯಲ್ಲಿ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯುವುದು ಇದೇ ಮೊದಲು.