Monday 2 September 2013

ಬದುಕನ್ನೇ ಬದಲಿಸುವ ಒಂದು ಆಯ್ಕೆ

ವಯಸ್ಸು ಹದಿನಾರು ಕಳೆದು ಹದಿನೇಳಕ್ಕೆ ಕಾಲಿಡುತ್ತಿದ್ದಂತೆ ಮನಸ್ಸು ಇಲ್ಲಸಲ್ಲದ್ದನ್ನೆಲ್ಲಾ ಬೇಡಲು ಶುರುವಿಟ್ಟುಕೊಳ್ಳುತ್ತದೆ. ಕಾಲೇಜ್ ಕ್ಯಾಂಪಸ್‌ನಲ್ಲಿ ಕುಳಿತು ಮನಸ್ಸು ಮಂಗನಂತಾ ಡಲಾರಂಭಿಸುತ್ತೆ. ಬೇಡಿಕೆಗಳು ಬೆಂಬಿಡದೇ ಕಾಡತೊಡಗುತ್ತವೆ. ಆ ಸಾಲಿನಲ್ಲಿ ಮೊಬೈಲ್‌ಗೆ ಮೊದಲ ಸ್ಥಾನ. ಏಕೆಂದರೆ ಇಡೀ ಪ್ರಪಂಚವನ್ನೇ ಬೆರಳ ತುದಿಯಲ್ಲಿ ತಡಕಾಡುವ ತವಕ. ಬದುಕಿನ ಅಂತರಾಳವನ್ನು ಅರಿಯುವ ಆತುರ. ಹರೆಯದ ಬಯಕೆಗಳನ್ನು ತೀರಿಸಿಕೊಳ್ಳುವ ಕಾತುರ.
ಈ ಕಾಲೇಜ್ ಎನ್ನುವ ಏಜಿನಲ್ಲಿ ಸಾಮಾನ್ಯವಾಗಿ ಹದಿಹರೆಯದವರನ್ನು ಇ-ಮೇಲ್, ಫೇಸ್‌ಬುಕ್, ಟ್ವಿಟರ್, ಚಾಟಿಂಗ್ ಅನ್ನುವ ಚಟಗಳು ಸದ್ದಿಲ್ಲದೇ ಅಂಟಿಕೊಂಡು ಬಂಗಾರದಂತೆ ಬೆಲೆ ಬಾಳುವ ಸಮಯವನ್ನು ತಿಂದುಹಾಕುತ್ತವೆ. ಪುಸ್ತಕದ ಜಾಗದಲ್ಲಿ ಮೊಬೈಲ್ ಬಂದು ಪುಸ್ತಕದ ಅಂತರವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಕಾಲೇಜ್ ಕಾಲದಲ್ಲಿ ಬೇಕಾಗಿರುವುದು ಪುಸ್ತಕ ಎಂಬ ಗುಡ್ ಫ್ರೆಂಡೇ ಹೊರತು. ಮೊಬೈಲ್ ಎಂಬ ಬ್ಯಾಡ್ ಪ್ರೆಂಡ್ ಅಲ್ಲ.
ಬುದ್ಧಿ ಹೆಚ್ಚಲು ಪುಸ್ತಕದ ಓದು ನಮ್ಮದಾಗಬೇಕು. ನಮ್ಮ ಮೊದಲ ಸ್ನೇಹಿ ಅದಾಗಿದ್ದರೆ ಜೀವನವೇ ಗೆದ್ದಂತೆ. ಕೈಯಲ್ಲೊಂದು ಪುಸ್ತಕ ಹಿಡಿದುಕೋ ಆಗ ನಿನಗಾಗುವ ಅರಿವೇ ಬೇರೆ. ನಿನ್ನೆಡೆಗೆ ಒದಗಿ ಬರುವ ಗೌರವವೇ ಬೇರೆ ಎಂದು ಪ್ರಾಧ್ಯಾಪಕರು, ಪೋಷಕರು ಯುವ ಮನಸ್ಸುಗಳಿಗೆ ಹೇಳುತ್ತಲೇ ಇರುತ್ತಾರೆ. ಆದರೆ ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಫೋನ್ ಬಳಕೆಯ ಈ ಯುಗದಲ್ಲಿ ನಮಗ್ಯಾಕೆ ಬೇಕು ಪುಸ್ತಕ? ಕೈಯಲ್ಲಿ ಹೊರಳಾಡಿಸುವ ಸೆಲ್ ನಲ್ಲೇ ಮಾಹಿತಿಯನ್ನೆಲ್ಲ್ಲಾ ತುಂಬಿಕೊಂಡು ಆರಾಮವಾಗಿದ್ದುಬಿಡುತ್ತೇವೆ ಎನ್ನುತ್ತವೆ ಇಂದಿನ ಯುವ ಮನಸ್ಸುಗಳು.
ಹೌದು ಬದಲಾಗುತ್ತಿದೆ ಇಂದಿನ ಟ್ರೆಂಡ್ ಎನ್ನುವ ಮಾತಿನ ಮೊದಲ ಸೂಚ್ಯಂಕವೇ ಎಲ್ಲಾ ಯುವಕ-ಯುವತಿಯರ ಕೈಯಲ್ಲಿ ಕಂಡುಬರುತ್ತಿರುವ ಸೆಲ್ ಫೋನ್. ಕ್ಯಾಂಪಸ್‌ನಲ್ಲಿ ಇದರ ಹಾವಳಿ ಅಷ್ಟಿಷ್ಟಲ್ಲ. ಇದು ಒಬ್ಬರಿಗೊಬ್ಬರು ತಮ್ಮ ಸಾಮರ್ಥ್ಯ ಹೇಳಿಕೊಂಡಂತೆ. ಸೆಲ್ ಫೋನ್‌ನಲ್ಲಿರುವ ಮಟೀರಿಯಲ್‌ಗಳು ಇಲ್ಲಿ ಅಗಾಧ ಚರ್ಚೆಗೆ ಗ್ರಾಸವಾಗಿವೆ. ಇದೊಂದು ಆಧುನಿಕ ಜಗತ್ತಿನ ಮನಸ್ಸುಗಳನ್ನು ಹೆಣೆದುಕೊಂಡಿರುವುದರ ಜತೆಗೆ ಅಷ್ಟೇ ವೇಗವಾಗಿ ಒಬ್ಬರಿಗೊಬ್ಬರನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.  ಕಾರಿಡಾರ್ ಮುಂದೆ ಬಂದ ದೊಡ್ಡವರನ್ನು ಕಂಡಾಗ ಅವರಿಗೆ ನಾವು ಗೌರವವನ್ನು ಸೂಚಿಸುತ್ತೇವೆ ಎಂದಾದರೆ ಕಿವಿಯಲ್ಲಿ ಇಟ್ಟುಕೊಂಡ ಇಯರ್‌ಫೋನ್ ಆಚೆ ತೆಗೆದಿದ್ದೇವೇ ಎಂದರ್ಥ. ಇದು ಕ್ಯಾಂಪಸ್‌ನ ಮಾಡ್ರನ್ ಸೆಲ್ಯೂಟ್.
ಸೆಲ್ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಪುಸ್ತಕವನ್ನಿಟ್ಟುಕೊಳ್ಳುವ ಭರಾಟೆ ಇಲ್ಲ. ಅತ್ಯಂತ ದೊಡ್ಡ ಜಗತ್ತನ್ನು ಪುಟ್ಟ ಪ್ರಪಂಚದಲ್ಲಿ ನೋಡಬಹುದಾದರೆ ಅದು ಸೆಲ್ ನಲ್ಲಿ ಮಾತ್ರ. ಹಾಗಾಗಿ ಇ-ಬುಕ್, ಮತ್ತು ಅವರವರ ಮನಸ್ಥಿತಿಗೆ ಇಷ್ಟವಾಗುವ ಅಪ್ಲಿಕೇಷನ್‌ಗಳು ಸುಲಭವಾಗಿ ಸೆಳೆದುಕೊಂಡು ಬಿಡುತ್ತವೆ. ಕಾಲೇಜು ಮೆಟ್ಟಿಲು ಏರಬಯಸುವ ಪ್ರತಿಯೊಂದು ಯುವ ಮನಸ್ಸಿನ ಮೊದಲ ಆಯ್ಕೆ ಇಂದು ಸೆಲ್‌ಫೋನ್ ಆಗಿದೆ. ಅತ್ಯಂತ ಸಹಾಯಕಾರಿ ಯುವ ಬಂಧುವಾದ ಇದು ಅಷ್ಟೇ ನಿಖರವಾಗಿ ಹಾದಿ ತಪ್ಪಿಸುತ್ತಿರುವ ಕೆಟ್ಟ ಚಟವೂ ಹೌದು.
 ಇಂದು ಮೊಬೈಲ್ ಫೋನ್‌ಗಳ ಬಳಕೆ ಅನಿವಾರ್ಯವೂ ಹೌದು. ಆದರೆ ಅದು ಅನಿವಾರ್ಯ ಕಾರ್ಯಗಳಿಗೆ ಬಳಕೆಯಾದಾಗ ಮಾತ್ರ ಅದರ ಸದುಪಯೋಗವಾಗುತ್ತೆ. ಇಲ್ಲದಿದ್ದರೆ ಮೊಬೈಲ್‌ನ ಪುಟ್ಟ ಸ್ಕ್ರೀನ್ ಕೆಟ್ಟ ಚಟಗಳಿಗೆದಾರಿ ಮಾಡಿಕೊಡುತ್ತದೆ. ಮೊಬೈಲೋ, ಪುಸ್ತಕವೂ ಆಯ್ಕೆ ನಿಮಗೆ ಬಿಟ್ಟಿದ್ದು ಏಕೆಂದರೆ ನಿಮ್ಮ ಭವಿಷ್ಯ ನಿಮ್ಮ ಆಯ್ಕೆಯಲ್ಲಿಯೇ ಇದೆ.


ಇಡ್ಲಿ , ಸಾಂಬಾರೇ ಸ್ಟ್ರಾಂಗು ಗುರು ...

ಮೊನ್ನೆ ತಮಿಳುನಾಡಿನ ಜಯಲಲಿತಾ ನೇತೃತ್ವದ ಸರ್ಕಾರ ಚೆನ್ನೈ ಮಹಾನಗರಿಯಲ್ಲಿ ಇಡ್ಲಿ, ಸಾಂಬಾರ್ ಮತ್ತು ಕಾಫಿಯ ಬ್ರೇಕ್‌ಫಾಸ್ಟ್ ಪ್ಯಾಕೇಜ್  ಘೋಷಣೆ ಮಾಡಿದ ಮೇಲೆ ಬಹುಮಂದಿ ಲೇವಡಿ ಮಾಡಿದ್ದರು.
ನಿಮಗೆ ಗೊತ್ತೇ..? ಸದ್ಯ ಭಾರತದ ಮಹಾನಗರಗಳಲ್ಲಿ  ಬೆಳಗಿನ ಪೌಷ್ಠಿಕ ಉಪಹಾರ ಸೇವಿಸುವುದರಲ್ಲಿ ಚೆನ್ನೈ ಬೆಸ್ಟ್ ಅಂತೆ.
ಅಲ್ಲಿನ ಸರ್ಕಾರ ಮೂರು ಇಡ್ಲಿ, ಒಂದು ಬೌಲ್ ಸಾಂಬಾರ್, ಫಿಲ್ಟರ್ ಕಾಫಿಯನ್ನು ಟ್ರೆಡಿಷನಲ್ ಬ್ರೇಕ್‌ಫಾಸ್ಟ್ ರೂಪದಲ್ಲಿ ನೀಡುತ್ತಿದೆ. ಮೆಟ್ರೋ ನಗರಗಳ  ಬ್ರೇಕ್‌ಫಾಸ್ಟ್ ಹ್ಯಾಬಿಟ್ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಮುಂಬೈ, ದೆಹಲಿ, ಕೋಲ್ಕತ್ತಾದಲ್ಲಿರುವ ೮ ರಿಂದ ೪೦ ವರ್ಷದೊಳಗಿನ ೩೬೦೦ ಮಂದಿಯನ್ನು ಗುಂಪುಗಳಾಗಿ ವಿಂಗಡಿಸಿ ಸಮೀಕ್ಷೆ ನಡೆಸಲಾಗಿದೆ.
ಇಲ್ಲಿ ಬಂದ ರಿಸಲ್ಟ್ ಏನು ಗೊತ್ತೇ.? ಈ ನಗರಗಳ ಬೆಳಗಿನ ಉಪಹಾರ ಅಗತ್ಯ ಪೌಷ್ಠಿಕಾಂಶಗಳನ್ನು ಒಳಗೊಂಡಿಲ್ಲವಂತೆ. ಎಷ್ಟಾದರೂ ನಮ್ಮವರು ಈಗೀಗ ಆರೋಗ್ಯದ ಕಡೆ ಎಚ್ಚರಿಕೆ ವಹಿಸುತ್ತಿದ್ದಾರೆ. ಜೀವನಶೈಲಿ ಬದಲಾಗುತ್ತಿದ್ದಂತೆಯೇ ಊಟ ಮತ್ತು ಉಪಹಾರದ ವರ್ತನಾ ವಿಶೇಷಗಳೂ ಹೆಚ್ಚುತ್ತಿವೆ.
ಕಾರ್ಬೋಹೈಡ್ರೇಟ್ ಎನರ್ಜಿ, ಪ್ರೋಟೀನ್ ಫ್ಯಾಟ್ ಮತ್ತು ಕ್ಯಾಲ್ಸಿಯಂಗಳ  ಪೌಷ್ಠಿಕಾಂಶಗಳ ಆಧಾರದಲ್ಲಿ ಉಪಹಾರದ ಸಮೀಕ್ಷೆ ನಡೆಸಲಾಗಿದೆ. ಮುಂಬೈನಲ್ಲಿ ಶೇ.೭೯ ಮಂದಿ ಪೂರಕ ಪೌಷ್ಠಿಕಾಂಶವಿಲ್ಲದ ಉಪಹಾರ ಸೇವಿಸಿದರೆ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಶೇ.೭೬ರಷ್ಟು ಮಂದಿ, ಚೆನ್ನೈನಲ್ಲಿ ಶೇ.೬೦ ರಷ್ಟು ಮಂದಿಯ ಉಪಹಾರ ಪೌಷ್ಠಿಕ ಪೂರಿತವಾಗಿಲ್ಲವಂತೆ. ಕೋಲ್ಕತ್ತಾದ ಪಾರಂಪರಿಕ ಉಪಹಾರದಲ್ಲಿ ಅತಿಯಾದ ಮೈದಾವಿದ್ದು, ಇದು  ಕಾರ್ಬೋಹೈಡ್ರೇಟ್ ಹೆಚ್ಚಿಸಲಿದೆಯಂತೆ. ಇನ್ನು ದೆಹಲಿಯ ಪರೋಟಾದಲ್ಲಿ ಅತಿ ಹೆಚ್ಚು ತೈಲವಿದ್ದರೆ, ಮುಂಬೈನ  ಬ್ರೇಕ್‌ಫಾಸ್ಟ್‌ನಲ್ಲೂ ಇದೇ ಸಮಸ್ಯೆಯಂತೆ.
ಅಂದಹಾಗೆ ಗ್ರಾಮೀಣ ಪ್ರದೇಶದ ಮಂದಿ ಬಳಸುವ ರಾಗಿಯಲ್ಲಿ ವಿಟಮಿನ್-ಬಿ, ಫೈಬ್ರೋಸ್, ಪ್ರೋಟೀನ್ ಕ್ಯಾಲ್ಸಿಯಂ, ಐರನ್ ಮತ್ತು ಫಾಸ್ಪರಸ್ ಹೆಚ್ಚಿದೆಯಂತೆ. ಇಡ್ಲಿ, ಸಾಂಬಾರ್ ಪರಿಪೂರ್ಣ ಊಟ ಎನ್ನುವುದು ಕೆಲವು ತಜ್ಞರ ಅಭಿಪ್ರಾಯ.
ಅದರಲ್ಲೂ ಅಕ್ಕಿ ಮತ್ತು ಉರಾದ್‌ದಾಲ್ (ಉದ್ದಿನಬೇಳೆ) ಬಳಸಿದ  ಇಡ್ಲಿ ಪ್ರೋಟೀನ್‌ಯುಕ್ತ ವಾಗಿದೆಂಯಂತೆ.
ಮತ್ತೊಂದು ವಿಷಯ ಗೊತ್ತೇ? ಭಾರತದ ನಾಲ್ವರಲ್ಲಿ ಒಬ್ಬರು ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುತ್ತಾರಂತೆ. ಊಟ ಅಥವಾ ಉಪಹಾರವನ್ನು ತಪ್ಪಿಸಿಕೊಳ್ಳುವುದು ಮತ್ತು ಮಿತಗೊಳಿಸುವುದೂ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದು ಈ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಇಷ್ಟೇ ಅಲ್ಲ ದಕ್ಷಿಣ ಭಾರತದ ಶೇ.೭೦ ರಷ್ಟು ಜನರು ಇಷ್ಟ ಪಡುವ ಉಪಹಾರ ಇದೇ ಇಡ್ಲಿಯಂತೆ. ನೀರಿನ ಹಬೆಯಲ್ಲಿ ಇಡ್ಲಿಯನ್ನು ಬೇಯಿಸುವುದರಿಂದ ಆನಾರೋಗ್ಯ ಕ್ಕೊಳಗಾದವರಿಗೆ ಶೇ.೮೦ರಷ್ಟು ವೈದ್ಯರು ಸೂಚಿಸುವ ಉಪಹಾರ ಇದೇ ಇಡ್ಲಿ. ಇಷ್ಟೊಂದು ಜನಪ್ರೀಯತೆ ಪಡೆದ ದಕ್ಷಿಣ ಭಾರತದ ಈ ಇಡ್ಲಿ ಖಾದ್ಯ ಹುಟ್ಟಿದ್ದು ಎಲ್ಲಿ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ...
     ಇಡ್ಲಿ ಹುಟ್ಟಿದ್ದು ಎಲ್ಲಿ..?
ಇಡ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸುಗಳಲ್ಲಿ ಒಂದು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ತಿನ್ನಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ. ಇಡ್ಲಿ, ದಕ್ಷಿಣ ಭಾರತದ ಪ್ರಾಚೀನ ಉಪಹಾರಗಳಲ್ಲಿ ಒಂದು. ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯರ (ಕ್ರಿ.ಶ. ೯೨೦) ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪ ಬಂದಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದರೆಂದು ಕಂಡುಬರುತ್ತದೆ. ಕ್ರಿ.ಶ. ೧೦೨೫ ರ ಒಂದು ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ ಇಂಗು ಮೊದಲಾದವನ್ನು ಸೇರಿಸಿ ಇಡ್ಲಿ ಹಿಟ್ಟನ್ನು ಸಿದ್ಧಪಡಿಸುತ್ತಿದ್ದರು. ಮೂರನೆಯ ಸೋಮೇಶ್ವರ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸದಲ್ಲಿ (ಕ್ರಿ.ಶ. ೧೧೩೦) ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾನೆ. ಮೊದಲ ಬಾರಿಗೆ ಇಡ್ಲಿಯನ್ನು ಕುರಿತ ಉಲ್ಲೇಖವಿರುವುದು ೧೭ನೆಯ ಶತಮಾನದ ತಮಿಳಿನ ಗ್ರಂಥಗಳಲ್ಲಿ, ಆದರೆ ೧೭ನೇ ಶತಮಾಕ್ಕಿಂತ ಮೊದಲೇ ಕನ್ನಡದಲ್ಲಿ ಇಡ್ಲಿಯ ಕುರಿತು  ಕ್ರಿ.ಶ. ೯೨೦ರ ವಡ್ಡಾರಾಧನೆ ಗ್ರಂಥದಲ್ಲಿ ಇಡ್ಲಿಯ ಬಗ್ಗೆ ಬರೆದಿದ್ದಾರೆಂದರೆ, ಅದು ಅದಾಗಲೇ ಕರ್ನಾಟಕದಲ್ಲಿ ಸರ್ವೇಸಾಮಾನ್ಯವಾಗಿದ್ದ ತಿಂಡಿ ಎಂದರ್ಥ. ಆದ್ದರಿಂದ ಇಡ್ಲಿಯ ಕಾಲ ಕ್ರಿ.ಶ. ೯೨೦ ಕ್ಕಿಂತಲೂ ಹಿಂದಿನದು. ಆದ್ದರಿಂದ ನಿಸ್ಸಂಶಯವಾಗಿ ಇಡ್ಲಿ ಹುಟ್ಟಿದ್ದು ಕರ್ನಾಟಕದಲ್ಲಿ, ಇದನ್ನು ಕಂಡುಹಿಡಿದವರು ಹತ್ತನೆಯ ಶತಮಾನಕ್ಕೂ ಹಿಂದಿನ ಕನ್ನಡಿಗರು ಎಂದು ನಂಬಲಾಗಿದೆ. ಇತಿಹಾಸ ಏನೇ ಇರಲಿ ಇಡ್ಲಿ ತನ್ನ ರುಚಿಯಲ್ಲಿ ಯಾವ ಉಪಹಾರಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ನಿಮಗೆ ಗೊತ್ತಿರಬಹುದು, ಅನಾರೋಗ್ಯ ಸ್ಥಿತಿಯಲ್ಲಿ ರೋಗಿಗೆ ವೈದ್ಯರು ಸೂಚಿಸುವ ಮೊದಲ ತಿನಿಸು ಇಡ್ಲಿ. ಏಕೆಂದರೆ ನೀರಿನ ಹಬೆಯಲ್ಲಿ ಬೆಂದ ಇಡ್ಲಿ ಆರೋಗ್ಯಕ್ಕೆ ಉತ್ತಮ ಎಂಬುದೇ ಕಾರಣ. ಆದ್ದರಿಂದ ಇಡ್ಲಿ ಸರ್ವಕಾಲಕ್ಕೂ ಸರ್ವರೂ ಇಷ್ಟಪಡುವ ಏಕೈಕ ಉಪಹಾರ. ಕಾಲ ಬದಲಾದಂತೆ ಇಡ್ಲಿಯ ಆಕಾರ, ಬಣ್ಣ, ರುಚಿಗಳಲ್ಲಿ ಬದಲಾವಣೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ  ರವೆ ಇಡ್ಲಿ, ತಟ್ಟೆ ಇಡ್ಲಿ, ಬಟ್ಟಲು ಇಡ್ಲಿ , ಕಾಂಚೀಪುರಮ್ ಇಡ್ಲಿ, ಹೀಗೆ ಇಡ್ಲಿಯಲ್ಲಿ ಅನೇಕ ರೂಪಾಂತರಗಳಾಗಿ ಬದಲಾಗಿವೆ.

   ತುಮಕೂರು ತಟ್ಟೆ ಇಡ್ಲಿ ತವರೂರು
 
ಹಲವು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ದೋಸೆಯಷ್ಟು ಅಗಲದ ಇಡ್ಲಿಗಳನ್ನು ಕರ್ನಾಟಕದ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದಲ್ಲಿರುವ ನಟರಾಜ ಹೊಟೆಲ್ ಮಾಲೀಕರು ತಯಾರಿಸಿದ್ದರು. ಅತೀ ಶೀಘ್ರ ದಲ್ಲಿಯೇ ಅದು ಪ್ರಸಿದ್ಧವಾಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಆ ಹೊಟೆಲ್‌ಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಕ್ಯಾತ್ಸಂದ್ರ ಊರನ್ನು ತಟ್ಟೆ ಇಡ್ಲಿಯಿಂದಲೇ ಗುರುತಿಸುವಂತಾಯಿತು. ಇನ್ನು ತಟ್ಟೆ ಇಡ್ಲಿ ಎಂದ ತಕ್ಷಣ ಎಲ್ಲರಿಗೂ ಮೊಟ್ಟ ಮೊದಲಿಗೆ ನೆನಪಾಗುವುದು ನಟರಾಜ ಹೊಟೆಲ್.