Tuesday 24 September 2013

ದೇಶ ಬದಲಾಯಿಸಲು ಸಮೀಪಿಸುತ್ತಿದೆ ಸದಾವಕಾಶ

ಇನ್ನೇನು ಕೆಲವೇ ತಿಂಗಳಷ್ಟೆ ಬಾಕಿ. ನಿಮ್ಮ ಮನೆ ಬಾಗಿಲಿಗೆ ಮತ್ತೊಮ್ಮೆ ಮತ ಭಿಕ್ಷೆಗಾಗಿ ಮಾಜಿ, ಹಾಲಿ, ಭಾವಿ ರಾಜಕಾರಣಿಗಳು, ಹೆಂಡತಿ, ಮಕ್ಕಳು, ಮೊಮ್ಮಕ್ಕಳ ಸಮೇತ ಧಾವಿಸಲಿದ್ದಾರೆ. ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನು ಮನೆಯಲ್ಲಿ ಗಂಟುಮೂಟೆ ಕಟ್ಟಿಟ್ಟು.  ಸಾಮಾನ್ಯರ ಬೆವರು ವಾಸನೆಯನ್ನು ಹೊತ್ತ ನೋಟುಗಳನ್ನು ನೀಡಿ ವೋಟುಗಳನ್ನು ಗಿಟ್ಟಿಸಿಕೊಳ್ಳುವ ಗಿಮಿಕ್‌ಗಳು ಆರಂಭಿಸಲಿದ್ದಾರೆ. ನೀವಂತೂ ಬಿಡಿ ಮಾಮೂಲಿ , ಹೇಳಿದ್ದನ್ನೆಲ್ಲಾ ಕೇಳ್ತಿರಾ, ಮಾಡಿದ್ದನ್ನೆಲ್ಲಾ ನೋಡ್ತಿರಾ, ಓದಿದ್ದನ್ನೆಲ್ಲಾ ಮರೀತೀರಾ ಆಮೇಲೆ ಒಂದಲ್ಲಾ ಒಂದು ಆಸೆಗೆ ಕಣ್ಮುಚ್ಚಿ ಕಳ್ಳನಿಗಾದ್ರೂ ವೋಟ್ ಹಾಕ್ತಿರಾ...!? ಪ್ರಜಾಪ್ರಭುತ್ವ ನಮ್ಮ ದೇಶದ ಅದೃಷ್ಟವೋ ದುರದೃಷ್ಟವೋ ಗೊತ್ತಾಗುತ್ತಿಲ್ಲ.
ಹೌದು, ಮೇರಾ ಭಾರತ್ ಮಹಾನ್, ಯಾವುದರಲ್ಲಿ? ಲಂಚ ತಿನ್ನುವುದರಲ್ಲಾ? ರಾಜಕಾರಣಿಗಳ ಕಿತ್ತಾಟದಲ್ಲಾ? ಭ್ರಷ್ಟ ಅಧಿಕಾರಿಗಳ ಸಂಖ್ಯೆಯಲ್ಲಾ? ಒಟ್ಟಿನಲ್ಲಿ ಈ ದೇಶಕ್ಕೆ ಅದೇನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ.  ನಮ್ಮ ದೇಶ ಒಂದು ಕಾಲದಲ್ಲಿ ’ಸೂಪರ್ ಪವರ್? ಆಗುವತ್ತ ದಾಪುಗಾಲಿಟ್ಟಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಹೆಚ್ಚೇನಲ್ಲ ಕೇವಲ ಆರೇಳು ವರ್ಷಗಳ ಹಿಂದಷ್ಟೆ .. ರಾಜಕಾರಣಿಗಳ ಹಣದ ದಾಹ, ಭ್ರಷ್ಟಾಚಾರ ಮುಚ್ಚಿಹಾಕಲು ಏನೆಲ್ಲಾ ಪ್ರಯತ್ನಗಳು, ಒಬ್ಬರ ಮೇಲೊಬ್ಬರ ಕೆಸರೆರೆಚಾಟ. ಭ್ರಷ್ಟರಿಗೆ ಶಿಕ್ಷೆ ನೀಡಬೇಕಾದ ನ್ಯಾಯಾಂಗ ವ್ಯವ್ವಸ್ಥೆಯಲ್ಲೇ ಭ್ರಷ್ಟಾಚಾರದ ವಾಸನೆಯಾಡುತ್ತಿದೆ. ಅಷ್ಟೇ ಅಲ್ಲ ಎಲ್ಲ ರೀತಿಯ ತಪ್ಪು ಮಾಡಿರುವ ಭಯೋತ್ಪಾದಕರನ್ನು ದೇಶದೊಳಗೆ ತೂರಿಸುತ್ತಿರುವ ಪಾಕಿಸ್ತಾನವೇ ಭಾರತವನ್ನು ದೂಷಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದೆ. ದೇಶದ ಮಾನ ಹರಾಜಾಗುತ್ತಿದೆ. ನಮ್ಮ ರಾಜಕಾರಣಿಗಳು ನಮ್ಮ ಸೈನಿಕರಿಗೇ ಸರಪಳಿ ಕಟ್ಟಿ ಶತ್ರು ರಾಷ್ಟ್ರದವರೊಂದಿಗೆ ಹೋರಾಡುವ ಶಕ್ತಿಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಪ್ರತಿ ಊರಲ್ಲೂ, ಪ್ರತಿ ಬೀದಿಯಲ್ಲಿ, ಆಟಿಕೆಗಳಂತೆ ಮಾರಕಾಸ್ತ್ರಗಳನ್ನು ಹಿಡಿದ ಭಯೋತ್ಪಾದಕರು ಅಮಾಯಕ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಪ್ರತಿಯೊಬ್ಬ ರಾಜಕಾರಣಿಗಳು, ಅಧಿಕಾರಿಗಳೂ ಕೂಡ ಈ ದೇಶವನ್ನು ಲೂಟಿ ಮಾಡುತ್ತಿದಾರೆಯೋ ಎಂಬಂತೆ ತೋರುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾದ ನ್ಯಾಯಾಲಯಗಳು, ಕೆಲ ನ್ಯಾಯಾಧೀಶರು ಭ್ರಷ್ಟ ನ್ಯಾಯಾಧೀಶರಾಗಿ ತೀರ್ಪು ನೀಡುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ..  ಸ್ವಿಸ್ ಬ್ಯಾಂಕ್‌ಗಳಲ್ಲಿ ಅಕ್ರಮವಾಗಿ ರಾಶಿ ರಾಶಿ ಹಾಕಿರುವ ಕಪ್ಪು ಹಣವೇ ಇರಲಿ, ಕಾಮನ್‌ವೆಲ್ತ್. ೨ಜಿ, ಕಲ್ಲಿದ್ದಲು ಹಗರಣ ಮತ್ತು ಭೂ ಹಗರಣಗಳು ದಿನಕ್ಕೊಂದರಂತೆ ಸಾಲು ಸಾಲಾಗಿ ಹೊರಬರುತ್ತಿವೆ, ಒಂದೊಂದು ಹಗರಣಗಳೂ ದೇಶವನ್ನು ಪುನರ್ ನಿರ್ಮಿಸುವಷ್ಟು ಹಣವನ್ನು ಕೊಳ್ಳೆಹೊಡೆದಿವೆ.  ಸರ್ಕಾರದಿಂದ ಅಮಾಯಕರಿಂದ ದೋಚಿದ ಹಣದಿಂದ ತಿಮಿಂಗಿಲಗಳಂತೆ ಬೆಳೆದಿರುವ ರಾಜಕಾರಣಿಗಳ ಅಸಲಿ ಮುಖಗಳ ದರ್ಶನವಾಗುತ್ತಿದೆ. ಸಾಲಿನಲ್ಲಿ ನಿಂತವರಂತೆ ದೊಡ್ಡ ದೊಡ್ಡ ರಾಜಕಾರಣಿಗಳು, ಜೈಲುಪಾಲಾಗುತ್ತಿದ್ದಾರೆ. ಅನೇಕ ಜೈಲುಗಳು ಭ್ರಷ್ಟ ರಾಜಕಾರಣಿಗಳಿಂದ ತುಂಬಿ ತುಳುಕುತ್ತಿವೆ. ಮುಖ್ಯಮಂತ್ರಿ, ಸಚಿವರು, ಶಾಸಕರು, ಅಧಿಕಾರಿಗಳು ಎನ್ನದಂತೆ ಪ್ರತಿ ರಾಜಕಾರಣಿಗಳ ಮುಖವಾಡಗಳು ಬಯಲಾಗುತ್ತಿವೆ. ಕೆಲವರು ಹಣದಾಹಿಗಳಾದರೆ ಇನ್ನು ಕೆಲವರು ಕಾಮಪಿಶಾಚಿಗಳಂತೆ ತಮ್ಮದೇ ಆದ ಅಧಿಕಾರ ಮಾಡುತ್ತಿದ್ದಾರೆ. ಇಷ್ಟೆಲ್ಲ ತಪ್ಪು ಮಾಡಿದವರು, ಮಾಡುತ್ತಿರುವವರು, ಮುಂದೆ ಮಾಡಲಿರುವವರನ್ನು ಆಯ್ಕೆ ಮಾಡಿ ಅವರ ಕೈಗೆ ಅಧಿಕಾರ ಕೊಟ್ಟವರು ನಾವೇ,  ಜನಸಾಮಾನ್ಯರೆ, ಈ ದೇಶದ ಆಧಾರ ಸ್ತಂಭಗಳಂತಿರುವ ಯುವಕರೆ, ಇವರೆಲ್ಲ ತಮ್ಮ ಸ್ವಂತಿಕೆ, ದೇಶದ ಜವಾಬ್ದಾರಿ ಮರೆತು, ಚಿಲ್ಲರೆ ನೂರು ಇನ್ನೂರು ಹಣಕ್ಕಾಗಿ, ಮದ್ಯದ ಅಮಲಿನಲ್ಲಿ ಸಿಕ್ಕು ತಮ್ಮ ಅಮೂಲ್ಯವಾದ ಮತಗಳ ಮೂಲಕ ಭ್ರಷ್ಟ ರಾಜಕಾರಣಿಗಳಿಗೆ ಜನ್ಮ ಕೊಡುತ್ತಿದ್ದಾರೆ. ರಾಜಕಾರಣಿಗಳ ಹಣದ ದುರಾಸೆ ಎಂಬುದು ಈ ದೇಶವನ್ನು ಯಾವ ಮಟ್ಟಕ್ಕೆ ತಲುಪಿಸಿದೆ ಎಂದರೆ, ಇನ್ನು ಈ ದೇಶದ ಆಳ್ವಿಕೆಯ ಅರ್ಥವೇ ದುಡ್ಡು ದೋಚುವುದು ಎಂಬಂತಾಗಿದೆ. ಈ ಎಲ್ಲ ರಾಜಕಾರಣಿಗಳು ಅಧಿಕಾರ, ಕುರ್ಚಿ ಆಸೆಗಾಗಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಚಾರಿತ್ರ್ಯವಧೆಯಲ್ಲಿ ನಿರತರಾದರೇ ಹೊರತು ಆಡಳಿತದಲ್ಲಿ ಕ್ಷಮತೆ ತರುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆಲ್ಲ ಕಾರಣ ತಮ್ಮ ಜವಾಬ್ದಾರಿಯನ್ನೇ ಮರೆತು, ಕಣ್ಮುಚ್ಚಿ ಪ್ರತಿದಿನದ ರಾಜಕೀಯ ನಾಟಕಗಳ ಅಪ್‌ಡೇಟ್ಸ್‌ಗಳನ್ನು ಪಡೆದು ಮಜಾ ತೆಗೆದುಕೊಳ್ಳುತ್ತಿರೋ ಯುವ ಜನಾಂಗ.
ಒಂದು ಕಡೆ ಹಗರಣಗಳ ಸರಮಾಲೆ, ಕೋಟಿ ಕೋಟಿ ಹಣ ವಿದೇಶಿ ಬ್ಯಾಂಕ್ ಸೇರುತ್ತಿರುವುದು, ಭಾರತದ ಅರ್ಥವ್ಯವಸ್ಥೆ ಅರ್ಥಕಳೆದುಕೊಳ್ಳುತ್ತಿರುವುದು.  ಇದೆಲ್ಲದರ ಹೊಣೆ ಆಮ್ ಆದ್ಮಿಯ ಮೇಲೆ, ಬೆಲೆ ಏರಿಕೆ ಹಣದುಬ್ಬರ ಮುಂತಾದವು ಜನರ ಜೀವನವನ್ನು ನರಕವನ್ನಾಗಿಸುತ್ತಿವೆ. ಇವೆಲ್ಲವುಗಳ ನಡುವೆ ಪಕ್ಷದೊಳಗೇ ಅಧಿಕಾರಕ್ಕಾಗಿ ಕಿತ್ತಾಟ, ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿನ ವೈಫಲ್ಯ, ಮತ್ತೊಂದೆಡೆ ಫಲವಿಲ್ಲದ ಹೋರಾಟ, ಸತ್ಯಾಗ್ರಹಗಳು. ಹೋರಾಟ ಹತ್ತಿಕ್ಕುವ ರಾಜಕಾರಣಿಗಳ ಕುತಂತ್ರಗಳು. ಇಂತಹ ಎಲ್ಲ ವಿಷಯದಲ್ಲಿಯೂ ಭಾರತದ ಹೆಸರೇ ಹಾಳಾಗುತ್ತಿದೆ.  ಕೆಲವೇ ವರ್ಷಗಳ ಹಿಂದೆ ಕಣ್ಣು ಹಾಯಿಸಿ ನೋಡಿ  ಭಾರತವು ಈ ಶತಮಾನದ ಬಲಿಷ್ಠ ರಾಷ್ಟ್ರವಾಗಿ  ಮೂಡಿ ಬರಲಿದೆ ಎಂಬ ಅದೆಂತಹ ಆಶಾವಾದ ನಮ್ಮಲ್ಲಿತ್ತು. ಅಣ್ಣಾ ಹಜಾರೆಯಂತಹ ಸತ್ವಯುತ ಹೋರಾಟಕ್ಕೆ ಕಿಂಚಿತ್ತು ಬೆಲೆ ಕೊಡದ ಸರ್ಕಾರ ಸ್ವಾತಂತ್ರ್ಯಕ್ಕೂ ಮುಂಚಿನ ಬ್ರಿಟೀಷರಂತೆ ವರ್ತಿಸುತ್ತಿದೆ. ದೇಶವನ್ನು ಸಧೃಢವಾಗಿ ಕಟ್ಟಬೇಕಾಗಿದ್ದ ಯುವ ಜನಾಂಗ ತಮ್ಮ ಪಾಡಿಗೆ ತಾವು ಮೋಜು, ಮಸ್ತಿ, ಫ್ಯಾಷನ್, ದುಶ್ಚಟ ಗಳಂತಹ ಹಲವಾರು ಕೃತ್ಯಗಳಿಂದ ತಮ್ಮ ದೇಶವನ್ನು ತಾವೇ ಹಾಳುಗೆಡಹುತ್ತಿರುವುದು. ನಮ್ಮ ಸಂಸ್ಕೃತಿಯನ್ನೇ ಹೇಳ ಹೆಸರಿಲ್ಲದಂತೆ ಕಿತ್ತೊಗೆಯುತ್ತಿರುವುದು. ಇನ್ನೊಂದು ಘೋರ ವಿಷಯವೇನೆಂದರೆ, ದೇಶ ಕಾಯಬೇಕಾಗಿದ್ದ ವಿದ್ಯಾವಂತ ಯುವಕರೇ, ಭಯೋತ್ಪಾದಕರೊಂದಿಗೆ ಸೇರಿ ಭಯೋತ್ಪಾದಕರಾಗಿ, ದೇಶಕ್ಕೇ ಮುಳ್ಳಾಗುತ್ತಿದ್ದಾರೆ.
ಈ ಗಂಭೀರ ಸಮಸ್ಯೆಗಳ ಬಗ್ಗೆ ಯೋಚಿಸಲೆಂದೇ ಈ ಲೇಖನ, ಯಾಕೆಂದರೆ ದೇಶವನ್ನು ಬದಲಾಯಿಸುವ ಶಕ್ತಿ ಇರುವುದು ಯುವಕರಲ್ಲಿ ಮಾತ್ರ. ಇಂತಹ ಪವಿತ್ರ ಭಾರತ ದೇಶದಲ್ಲಿ ಹುಟ್ಟಿದ ನಮ್ಮೆಲ್ಲರ ಜನ್ಮ ಸಾರ್ಥಕವಾಗಬೇಕಾದರೆ, ನಮ್ಮ ಮುಂದಿನ ಪೀಳಿಗೆಗೆ ಬದುಕುವ ಅವಕಾಶ ಮಾಡಿಕೊಡಬೇಕಾದರೆ ಈಗ ಬದಲಾವಣೆ ಅಗತ್ಯ. ದಿನನಿತ್ಯದ ಈ ರಾಜಕೀಯ ದೊಂಬರಾಟಗಳಿಗೆ ನೀವು ಮಾತ್ರ ಬ್ರೇಕ್ ಹಾಕಲು ಸಾಧ್ಯ.  ಮತ್ತೆ ಚುನಾವಣೆಗಳು ಸಮೀಪಿಸುತ್ತಿವೆ. ಕೆಲ ರೇಪಿಸ್ಟ್, ಸ್ಯಾಡಿಸ್ಟ್ ರಾಜಕಾರಣಿಗಳು ಹೊಸ ಮುಖವಾಡಗಳನ್ನು ತೊಟ್ಟು ಮತ್ತೆ ನಿಮ್ಮ ಮುಂದೆ ಮತಗಳ ಭಿಕ್ಷೆಗಾಗಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನೀವು ಎಚ್ಚರದಿಂದಿರಬೇಕು. ದೇಶ ಕಟ್ಟುವ ರಾಜಕಾರಣಿಗಳನ್ನು ಸೃಷ್ಠಿಸುವ ಸಮಯ ನಿಮ್ಮನ್ನು ಸಮೀಪಿಸುತ್ತಿದೆ. ಏನು ಮಾಡಬೇಕು,       ಹೇಗೆ ಮಾಡಬೇಕು ಎಂಬುದನ್ನು ನಾವು ಹೇಳುವ ಅಗತ್ಯವಿಲ್ಲ. ಯಾಕೆಂದರೆ ನಿಮಗೆ ಎಲ್ಲವೂ ಗೊತ್ತಿದೆ.  ನೀವು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಬದಲಾಯಿಸುವ ಶಕ್ತಿ ನಿಮ್ಮಲ್ಲಿದೆ, ಹೋರಾಡುವ ಛಲ ನಿಮ್ಮಲ್ಲಿದೆ...ಪ್ರಸ್ತುತ ದೇಶದ ಸ್ಥಿತಿಯನ್ನು ಸಂಕ್ಷಿಪ್ತವಾಗಿ ನಿಮ್ಮೆದುರಿಗಿಟ್ಟಿದ್ದೇನೆ... ಒಮ್ಮೆ ಇದು ನನ್ನ ದೇಶ, ಇದು ಹೀಗೇ ಇರಬೇಕು, ಅದಕ್ಕಾಗಿ ನಾನು ಏನು ಮಾಡಲು ಸಾಧ್ಯ? ಎಂದು ಒಮ್ಮೆ ಯೋಚಿಸಿ ನಿಮ್ಮಿಂದಾದ ಪ್ರಯತ್ನ ಮಾಡಿ. ಒಂದಲ್ಲಾ ಒಂದು ದಿನ ಗಾಂಧಿ ಕಂಡ ’ರಾಮರಾಜ್ಯ?ದ ನಮ್ಮ ಕನಸು ನನಸಾಗದೇ ಇರದು... ನೆನಪಿಡಿ ನಮಗೆ ಬೇಕಾಗಿರುವುದು ಅರಾಜಕತೆ ಸೃಷ್ಟಿಸುವ ರಾಜಕಾರಣಿಗಳಲ್ಲ ದೇಶಕಟ್ಟುವ ನಾಯಕರು.