Friday 16 March 2018

ನಾಲಿಗೆಯಲ್ಲಿರಲಿ ನೂರು ಭಾಷೆ , ಮನಸ್ಸಿನಲ್ಲಿರಲಿ ಮಾತೃಭಾಷೆ

ಕನ್ನಡ ನಮ್ಮ ಮಾತೃಭಾಷೆ, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಭಾಷೆಗೆ ಇಂದು ಭಯ  ಆವರಿಸಿಕೊಳ್ಳುತ್ತಿದೆ. ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಒತ್ತಿ ಒತ್ತಿ ಹೇಳುವ ಅನಿವಾರ್ಯತೆ ಎದುರಾಗಿದೆ. ಕನ್ನಡಿಗರಾಗಿ ಕನ್ನಡ  ಮಾತನಾಡಲು ಹೆಮ್ಮೆ ಪಡುವವರಿಲ್ಲ. ಅದಕ್ಕೆ ಬದಲಾಗಿ ಕನ್ನಡ ಮಾತನಾಡಿದರೆ ಕೀಳು ಭಾವನೆ ಮೂಡವಂತಹ ಸ್ಥತಿ ನಮ್ಮಲ್ಲಿ ಸೃಷ್ಟಿಯಾಗಿದೆ. ಬೆಂಗಳೂರಿನಂತಹ ನಗರದಲ್ಲಿ ಎಲ್ಲಿ ನೋಡಿದರೂ ಇಂಗ್ಲೀಷ್, ತಮಿಳು, ತೆಲುಗು ಭಾಷೆಗಳ ಅಬ್ಬರದಲ್ಲಿ ಕನ್ನಡ ಕಳೆದು ಹೋಗುತ್ತಿದೆ.
ಕನ್ನಡವನ್ನು ಉಳಿಸಿ ಪ್ಲೀಸ್....! ಎಂದು ಬೇಡುವ ಬೀದಿಗೊಂದು ಕನ್ನಡ ಸಂಘಗಳು. ದಿನಕ್ಕೊಂದು ಪ್ರತಿಭಟನೆಗಳು. ಬಹುಶಃ ಕನ್ನಡಕ್ಕಾಗಿ ಕನ್ನಡ ನೆಲದಲ್ಲೇ ಕನ್ನಡ ಸಂಘ ಸಂಸ್ಥೆ, ಕನ್ನಡ ವೇದಿಕೆಗಳನ್ನು ಕಟ್ಟಿಕೊಳ್ಳುವಂತಹ ದುರ್ವಿಧಿ ಕನ್ನಡಿಗರದ್ದಾಗಿರುವುದು ನೋವಿನ ವಿಷಯ. ಆದರೆ, ಪ್ರಸ್ತುತ ಪರಿಸ್ಥಿತಿಯನ್ನು ನೋಡಿದಾಗ, ಇದು ಅನಿವಾರ್ಯವೇ ಅಥವಾ ಅನಾವಶ್ಯಕವೇ ಎಂದು ಚರ್ಚಿಸಹೊರಟರೆ, ಚರ್ಚೆ ಒಂದು ಕೊನೆ ಕಾಣಬಹುದು ಎಂದು ನನಗನ್ನಿಸುವುದಿಲ್ಲ. ವಿಷಯ ನೂರಾರು ದಿಕ್ಕಿಗೆ ವಿಸ್ತರಿಸಿಕೊಂಡು, ಅನಗತ್ಯ ಮನಸ್ತಾಪಕ್ಕೆ ಎಡೆಮಾಡಿಕೊಟ್ಟರೂ ಆಶ್ಚರ್ಯವಿಲ್ಲ. ಆ ಕಾರಣಗಳಿಂದಲೇ ಇರಬೇಕು, ಇಂತಹ ಸೂಕ್ಷ್ಮ ವಿಷಯವೊಂದನ್ನು, ಗಂಭೀರವಾಗಿ ಪರಿಗಣಿಸಿ, ಕನ್ನಡ ವಿರೋಧಿ ಸರ್ಕಾರಗಳಿಗೂ, ಕನ್ನಡತನವನ್ನೇ ಕಳೆದುಕೊಂಡು ಬದುಕುತ್ತಿರುವ ಜನಗಳಿಗೂ ಛೀಮಾರಿ ಹಾಕುವಂತಹ ಧೈರ್ಯ ಮಾಡದೇ, ಕರ್ನಾಟಕದಲ್ಲಿ ಅಲ್ಪ ಸಂಖ್ಯಾತರಂತೆ ಬದುಕುತ್ತಿದ್ದೇವೆ.
"ಕರ್ನಾಟಕದಲ್ಲಿ ಕನ್ನಡ ಸಂಘಗಳನ್ನು ಕಟ್ಟುವುದರಿಂದ ನಾವು ಅಲ್ಪಸಂಖ್ಯಾತರೆಂದೂ, ಅಮೋಘ ವೈಭವದಿಂದ ಮೆರೆಯಬೇಕಾಗಿದ್ದ, ಶ್ರೀಮಂತ ಭಾರತೀಯ ಭಾಷೆಗಳಲ್ಲೊಂದಾದ "ಕನ್ನಡ" ವಿನಾಶದ ಅಂಚಿನಲ್ಲಿದೆಯೆಂದೂ ನಾವೇ ತೋರಿಸಿಕೊಡುತ್ತಿದ್ದೇವೆ.. ಇಂತಹ ಸೂಕ್ಷ್ಮಾತೀಸೂಕ್ಷ್ಮವಾದ ಸತ್ಯವನ್ನು ಕನ್ನಡಿಗರಿಗೆಲ್ಲಾ ತಲುಪಿಸಿ, ಅವರಲ್ಲಿ ಭಾಷಾಭಿಮಾನವನ್ನು ಬಿತ್ತಿ, ನಮ್ಮ ಶೌರ್ಯವನ್ನೇನಿದ್ದರೂ ಕರ್ನಾಟಕದಿಂದಾಚೆ ತೋರಿಸಬೇಕೆ ವಿನಃ, ನಮ್ಮೂರಲ್ಲಿ ನಮ್ಮವರೊಂದಿಗೆ ಹೊಡೆದಾಡುವುದರಿಂದಲ್ಲ. ಜೊತೆಗೆ ಕನ್ನಡ ಭಾಷಾಭಿವೃದ್ಧಿಗೆ ಪಣತೊಟ್ಟು, ಸರ್ಕಾರವನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳಬೇಕಾದ ಅಗತ್ಯತೆಯ ಅನಿವಾರ್ಯತೆ ಇದೆ. ಅದರರ್ಥ ಅನ್ಯ ಭಾಷಿಕರನ್ನು ಹಿಂಸಿಸುವುದೆಂದಾಗಲೀ ಅಥವಾ ಅನ್ಯ ಭಾಷಾಕಲಿಕೆಯನ್ನು ತಿರಸ್ಕರಿಸಬೇಕೆಂದಾಗಲೀ ಅಲ್ಲ. ಜಾಗತೀಕರಣದ ದಾಳಿಯಿಂದ ಸ್ಥಳೀಯ ಸಂಸ್ಕೃತಿಗಳು ನಾಶವಾಗುತ್ತಿರುವುದು ಭಾರತದಲ್ಲಷ್ಟೇ ಅಲ್ಲ. ವಿಶ್ವದ ಇತರ ದೇಶಗಳಲ್ಲೂ ಇದೆ.
ಕೆಲವು ರಾಜ್ಯಗಳಲ್ಲಂತೂ, ಅಲ್ಲಿನ ಜನರೇ ಪರಕೀಯರೆನ್ನುವಂತಾಗಿದೆ. ಇವುಗಳ ಮಧ್ಯೆ, ಚೀನೀಯರು ಮಾತ್ರ ಬದಲಾವಣೆಯ ನಡುನಡುವೆಯೂ, ತಮ್ಮ ಸಾಂಸ್ಕೃತಿಕ ಸಾರ್ವಭೌಮತ್ವವನ್ನು ಇತರ ದೇಶಗಳಲ್ಲಿ ಸಾಧಿಸತೊಡಗಿದ್ದಾರೆ. ಇಂತಹ ಕೆಲಸ ನಮ್ಮಿಂದ ಆಗಬೇಕಾಗಿದೆ.
ಕನ್ನಡಿಗರು ಬದಲಾವಣೆಯನ್ನು ಸ್ವಾಗತಿಸುವುದರ ಜೊತೆಗೆ, ಸಾಧಿಸಿರುವುದನ್ನು ಜಗತ್ತಿಗೆ ತೋರಿಸಿಕೊಡಬೇಕಾಗಿದೆ. ಕನ್ನಡದ ಬುಡವನ್ನು ಭದ್ರಗೊಳಿಸಿಕೊಳ್ಳಬೇಕಾಗಿದೆ. ನಮ್ಮ ಸಂಸ್ಕೃತಿಯ ಉಳಿವಿಗಾಗಿ, ಮುಂದಿನ ಪೀಳಿಗೆಯನ್ನು ಹುರಿಗೊಳಿಸಬೇಕಾಗಿದೆ. ಹುಟ್ಟುವ ಮಗುವಿಗೆ ’ಮಮ್ಮಿ. ಬದಲು ’ಅಮ್ಮ? ಎನ್ನುವ ಅಮೃತ ನುಡಿಯನ್ನು ಕಲಿಸಿ ಹೊರ ಭಾಷಿಕರಲ್ಲಿ ಕನ್ನಡದ ಬಗೆಗಿನ ಗೌರವವನ್ನು ವೃದ್ಧಿಗೊಳಿಸಿ, ಸಾಧ್ಯವಾದರೆ, ಭಾಷೆಯ ಕಲಿಕೆಗೆ ಪ್ರೋತ್ಸಾಹಿಸಬೇಕಾಗಿದೆ. ದರ್ಪದಿಂದಾಗದ ಕೆಲಸವನ್ನು ಧೈರ್ಯದಿಂದಲೂ, ನಿಷ್ಠೆಯಿಂದಲೂ, ಪ್ರೀತಿಯಿಂದಲೂ ಮಾಡಬೇಕಾಗಿದೆ. ನಮ್ಮವರನ್ನು ನಮ್ಮಲ್ಲೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಬೇಕಾಗಿದೆ.
ಆದರೆ, ನಮ್ಮಲ್ಲಿ ಮಾಡುವವರಿಗಿಂತ ಮಾತನಾಡುವವರೇ ಜಾಸ್ತಿಯಾದಂತಿದೆ. ಪ್ರತಿಯೊಬ್ಬ ಕನ್ನಡಿಗನೂ, ತನ್ನಷ್ಟಕ್ಕೆ ತಾನು ಕನ್ನಡಿಗನಾಗಿದ್ದರೆ, ಅಷ್ಟೇ ಸಾಕು. ಆತ ಕತ್ತಿಹಿಡಿದು ಕಿತ್ತಾಡಬೇಕಾಗಿಲ್ಲ. ಕನ್ನಡಕ್ಕೊಂದು ಸಂಘಕಟ್ಟಿಕೊಂಡು, ಅದರ ಹೆಸರು ಹೇಳಿಕೊಂಡು, ಅನ್ಯಮಾರ್ಗಗಳಲ್ಲಿ ಸಿಗಬಹುದಾದ ಎಲ್ಲಾ ಪ್ರಯೋಜನಗಳಿಗಾಗಿ ಹಾತೊರೆಯುತ್ತಾ ದುರಾಸೆಯ ದುರಾಭಿಮಾನಿಗಳಾಗಿ ಬದುಕುವವರು ಮಾತ್ರ ಇದ್ದರೂ ಸತ್ತಂತೆ. ಅಂತಹವರ ಅವಶ್ಯಕತೆ ಕನ್ನಡಕ್ಕಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ.
 ಇಂದು ಕನ್ನಡಿಗರು ವಿಶ್ವದೆಲ್ಲೆಡೆ ಇದ್ದಾರೆ. ಅವರಿಗೆಲ್ಲಾ ಕನ್ನಡದ ಬಗ್ಗೆ ತಿಳಿಯಲೂ, ಕನ್ನಡದಲ್ಲಿ ಓದಲೂ, ಕನ್ನಡದಲ್ಲಿ ನೋಡಲೂ ಇರುವ ಅತೀ ಸುಲಭ ಹಾಗೂ ಏಕೈಕ ಮಾರ್ಗವೆಂದರೆ ಇಂಟರ್‌ನೆಟ್. ಅದರಲ್ಲಿ ಕನ್ನಡದ ಭಂಡಾರವನ್ನೆ ಸೃಷ್ಟಿಮಾಡಬಹುದಾದಂತಹ ಅವಕಾಶಗಳಿರುವಾಗ, ವೃಥಾ ಸಮಾರಂಭಗಳಲ್ಲಿ ಖರ್ಚುಮಾಡುತ್ತಾ, ಕಾಲಕಳೆಯುವುದರಿಂದಾಗುವ ಉಪಯೋಗವೇನು?. ಕನ್ನಡದಲ್ಲಿ, ಕನ್ನಡಕ್ಕಾಗಿ ಏನನ್ನು ಹುಡುಕಿದರೂ ಸಿಗಬಹುದು ಎಂಬಂತೆ ಕನ್ನಡದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವುದರಿಂದ ಕನ್ನಡಿಗರಿಗೆ ಕನ್ನಡದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತಿಳಿಯಲು ಅನುಕೂಲವಾಗುತ್ತದೆ ಜೊತೆಗೆ ಕನ್ನಡವನ್ನು ಜೀವಂತವಾಗಿಟ್ಟಂತಾಗುತ್ತದೆ. ಕನ್ನಡದ "ವಿಕಿಪೀಡಿಯಾ" ನೋಡಿದರೆ, ಅನಾಥ ಭಾವನೆ ಮೂಡುತ್ತದೆ. ನಮ್ಮ ಭಾಷೆ ಅನಾಥವಲ್ಲ. ಅನಾಥವಾಗಲೂ ಬಿಡುವುದಿಲ್ಲ ಎಂದು ಮೈ ಕೊಡವಿಕೊಂಡು ಏಳಬೇಕು. ನಾಲಿಗೆ ಮೇಲೆ ನಾನಾ ಭಾಷೆಗಳಿರಲಿ. ಮನಸ್ಸಿನಲ್ಲಿ ಮಾತ್ರ ಮಾತೃಭಾಷೆ ಇರಲಿ. 


No comments:

Post a Comment