Saturday 7 September 2013

ಕಾಲಚಕ್ರದಲ್ಲಿ ' ಸೈಕಲ್ '


ಒಂದೆಡೆ ಶಕ್ತಿಹೀನವಾಗಿ ಮುಗ್ಗರಿಸಿ ಮುಗ್ಗರಿಸಿ ಬೀಳುತ್ತಿರೋ ರೂಪಾಯಿ ಮೌಲ್ಯ, ಇನ್ನೊಂದೆಡೆ ಜನರಿಗೆ ಬೆಲೆ ಏರಿಕೆಯ ಚಾಟಿ ಏಟು. ಈ ಮಧ್ಯೆ ಪೆಟ್ರೋಲನ್ನು ಮಿತವಾಗಿ ಬಳಸಿ, ಬಂಗಾರದ ಖರೀದಿಯಿಂದ ಬಲು ದೂರವಿರಿ ಎಂದು ಬೊಂಬಡ ಹೊಡೆಯುತ್ತಿರುವ ಚಿದಂಬರಂ ಹಾಗೂ ಮನಮೊಹನ್ ಸಿಂಗ್. ಇದಾವುದಕ್ಕೂ ಕೇರ್ ಮಾಡದೇ ತನ್ನ ಹಟ ಬಿಡದೇ ಬೆಲೆ ಏರಿಕೆ ಚಾಟಿ ಏಟಿನ ನೋವನ್ನು ಅನುಭವಿಸಿದರೂ ಬದಲಾಗದ ಭಾರತದ ಜನತೆ.  ಹೀಗೆ ಜನತೆ ಸಂಕಷ್ಟಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅರೇ..! ಭಾರತ ಬಡಪಾಯಿಯೇ? ಎಂದು ಕೇಳುತ್ತಿದ್ದೀರಾ.? ಹೌದು, ಪ್ರಪಂಚದ ಅತೀ ಬಡ ದೇಶಗಳ ಸಾಲಿಗೆ ಭಾರತ ಸೇರುವ ದಿನಗಳು ದೂರವೇನಿಲ್ಲ. ಏಕೆಂದರೆ ದೇಶದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗುತ್ತಿದೆ. ನಿಮಗೆ ಗೊತ್ತಿದೆ, ಒಂದು ದೇಶದ ಉನ್ನತಿ ಆ ದೇಶವನ್ನಾಳುವ ಸರ್ಕಾರಕ್ಕಿಂತ ಅಲ್ಲಿ ಬದುಕುವ ಜನರ ಶ್ರಮ, ಜೀವನಶೈಲಿ ಹಾಗೂ ಮನಸ್ಥಿತಿಗಳ ಮೇಲೆ ನೇರವಾಗಿ ಅವಲಂಬಿಸಿರುತ್ತದೆ. ಒಂದು ಸರ್ಕಾರದಿಂದ ದೇಶವನ್ನು ಬದಲಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಜನರ ಕೈಯಲ್ಲಿಯೇ ಇದೆ. ಮೊದಲು ಜನರು ಬದಲಾಗಬೇಕು, ಆಗ ದೇಶ ತಂತಾನೆಯೇ ಬದಲಾಗಿಬಿಡುತ್ತದೆ.
ಮುಂದೊಂದು ದಿನ ಪೆಟ್ರೋಲ್ ಡೀಸೆಲ್‌ಗಳ ಬೆಲೆ ಬಂಗಾರದ ಬೇಲೆಯನ್ನು ಹಿಂದಿಕ್ಕಿ ಸಾಗುವ ಸೂಚನೆಗಳು ಈಗಾಗಲೇ ಸಿಕ್ಕಾಗಿದೆ. ಏಕೆಂದರೆ ನಮ್ಮ ದೇಶಕ್ಕೆ ಆಮದಾಗುವ  ವಸ್ತುಗಳಲ್ಲಿ ಪೆಟ್ರೋಲಿಯಂಗೆ ಮೊದಲ ಸ್ಥಾನ(ಶೇ. ೬೦ಕ್ಕೂ ಹೆಚ್ಚು) ಎರಡನೆಯ ಸ್ಥಾನ ಮಾಯಾವಿ ಲೋಹ ಬಂಗಾರದ್ದು (ಶೆ.೩೫ ಕ್ಕೂ ಹೆಚ್ಚು.) ಉಳಿದ ಶೇ.೫ ರಲ್ಲಿ ಮೊಬೈಲ್, ಪರ್ಫ್ಯೂಮ್, ಸೌಂದರ್ಯವರ್ಧಕ ವಸ್ತುಗಳು ಸೇರಿದಂತೆ ಇತರೆ ವಸ್ತುಗಳು.  ಇದರಿಂದ ಸ್ಪಷ್ಟವಾಗುವ ಸಂಗತಿಯೇನೆಂದರೆ ಶೇ.೫೦ ರಷ್ಟು ವಿದೇಶಿಗರ ವಸ್ತುಗಳ ಮೇಲೇಯೇ ನಾವು ಅವಲಂಬಿತವಾಗಿದ್ದೇವೆ ಎಂಬುದು.
ಡೀಸೆಲ್ ಪೆಟ್ರೋಲ್‌ನ ಬೆಲೆಗಳು ಗಗನಕ್ಕೇರುವ ಸೂಚನೆ ಈಗಾಗಲೇ ಸಿಕ್ಕಾಗಿದೆ. ಇದಕ್ಕೆ ಅಮೇರಿಕಾದ ಅಧ್ಯಕ್ಷ ಒಬಾಮಾ ಒಕೆ ಎನ್ನುವುದೊಂದೇ ಬಾಕಿ. ಅರೇ..! ಒಬಾಮಾಗೂ, ಪೆಟ್ರೋಲ್ ಬೆಲೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಹೌದು, ಖಂಡಿತ ಸಂಬಧವಿದೆ.  ಸಿರಿಯಾ ಸೇರಿದಂತೆ ಅನೇಕ ರಾಷ್ಟ್ರಗಳ ಮೇಲೆ ಅಮೇರಿಕ ದಾಳಿಮಾಡಿ ಆ ದೇಶಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹಾತೊರೆಯುತ್ತಿದೆ.  ಹಾಗೇನಾದರೂ ಆದರೆ ನಮಗೆ ಸಿಗುವ ’ದ್ರವ ರೂಪದ ಬಂಗಾರ’ ಎನ್ನುವ  ಕಚ್ಚಾ ತೈಲವನ್ನು ಅಮೇರಿಕ ಕಸಿದು ಕೊಳ್ಳಲಿದೆ. ಆಗ ಪೆಟ್ರೋಲ್ ಬೆಲೆ ನೂರರ ಗಡಿ ದಾಟುವುದರಲ್ಲಿ ಅನುಮಾನವೇ ಇಲ್ಲ.  ಆಗಲೂ ನಿಮ್ಮ ಬೈಕ್‌ಗೆ ಪೆಟ್ರೋಲ್ ಹಾಕುವ ಶಕ್ತಿ ನಿಮ್ಮಲ್ಲಿರುತ್ತಾ? ದುಡಿದದ್ದನ್ನೆಲ್ಲಾ ಪೆಟ್ರೋಲ್‌ಗೆ ವ್ಯಯಿಸಿದರೆ ಬದುಕಲಿಕ್ಕೇ? ಸಾಧ್ಯವೇ ಇಲ್ಲ. ಅದರಲ್ಲೂ ಮಿಡ್ಲ್‌ಕ್ಲಾಸ್ ಜನರಂತೂ ಅನಿವಾರ್ಯವಾಗಿ ಬದಲಾಗಲೇಬೇಕಾಗುತ್ತದೆ.
ಹೀಗೆ, ಬೈಕ್‌ಗಳನ್ನು ಮೂಲೆಯಲ್ಲಿ ಮುಚ್ಚಿಟ್ಟು ಕಾಲುಗಳಿಗೆ ಕೆಲಸ ಕೊಡಲೇಬೇಕಾಗುತ್ತೆ. ಆದರೆ ಇಂತಹ ಸ್ಥತಿಯಲ್ಲಿ ಸೈಕಲ್ ನಮ್ಮನ್ನು ಕೈ ಹಿಡಿದು ನಡೆಸಲಿದೆ. ಆಗ ಮತ್ತೊಮ್ಮೆ ಕಾಲಚಕ್ರದಲ್ಲಿ ಸೈಕಲ್‌ಗೆ ಅಗ್ರಪಟ್ಟ ದೊರೆಯುವುದರಲ್ಲಿ ಅನುಮಾನವೇ ಇಲ್ಲ. ನಗರ ಪ್ರದೇಶಗಳಲ್ಲಿ ಸಾಮಾನ್ಯ ಜನರ ಆರ್ಥಿಕ ಸ್ಥ್ಥಿತಿಯನ್ನು ಒಂದು ಸೈಕಲ್ ಸುಸ್ಥಿತಿಯಲ್ಲಿಡುತ್ತದೆ ಎನ್ನುವುದು ಅತಿಶಯೋಕ್ತಿ ಎನಿಸಿದರೂ ನಂಬಲೇಬೇಕಾದ ಸಂಗತಿ. ಹಾಗಾದರೆ ಬೈಕ್, ಕಾರ್‌ಗಳನ್ನು ಬಿಟ್ಟು ಸೈಕಲ್ ಬಳಸಿದರೆ ದೇಶ ಬದಲಾಗುತ್ತಾ ? ಖಂಡಿತ, ದೇಶ ಬದಲಾಗದಿದ್ದರೂ ನಿಮ್ಮ ಆರ್ಥಿಕ ಸ್ಥಿತಿ. ನಿಮ್ಮ ಆರೋಗ್ಯ,  ವಾಯುಮಾಲಿನ್ಯ, ಶಬ್ದಮಾಲಿನ್ಯ, ಟ್ರಾಫಿಕ್ ಸಮಸ್ಯೆ, ಅಪಘಾತಗಳ ಸಂಖ್ಯೆ, ಪೋಲಿಸರಿಗೆ ನೀವು ಕಟ್ಟುವ ದಂಡದಲ್ಲಿ ಹೀಗೆ ಅನೇಕ ರೀತಿಯಲ್ಲಿ ಬದಲಾವಣೆಗಳಂತೂ ಆಗೋದು ಸತ್ಯ.  ಜನಸಂಖ್ಯೆ ಬೆಳೆದಂತೆ ನಗರಗಳು, ನಾಗರೀಕತೆಗಳು ಬೆಳೆಯುತ್ತಲೇ ಇವೆ. ನಗರಪ್ರದೇಶಗಳಲ್ಲಂತೂ ಜನಸಂಖ್ಯೆಯಷ್ಟೇ ಸಮಸ್ಯೆಗಳೂ ಬೆಳೆಯುತ್ತಿವೆ. ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕೆಲವು ಸಮಸ್ಯೆಗಳಿಗೆ ಉತ್ತರ ಹುಡುಕುವುದು ಸಮಸ್ಯೆಗಳಷ್ಟೇ ಕಷ್ಟದ ಕೆಲಸವಾಗಿದೆ.
ಒಂದೆಡೆ ಟ್ರಾಫಿಕ್ ಸಮಸ್ಯೆಯಾದರೆ ಮತ್ತೊಂದೆಡೆ ವಾಯುಮಾಲಿನ್ಯ, ಶಬ್ದಮಾಲಿನ್ಯ. ನಗರಗಳ ಈ ಸಾಮಾನ್ಯ ಸಮಸ್ಯೆಗಳಿಗೆ ಸರಳವಾದ ಉತ್ತರ ಹುಡುಕುವುದರಲ್ಲಿ ಕೆಲವು ವಿಭಿನ್ನ ಯೋಚನೆಗಳು ಸಹಾಯಕವಾಗಬಲ್ಲವು. ಅದರಲ್ಲಿ ನಗರ ಪ್ರದೇಶದ ಜನರನ್ನು ಹೆಜ್ಜೆ ಹೆಜ್ಜೆಗೂ ಬೆಂಬಿಡದೆ ಕಾಡುವ ಟ್ರಾಫಿಕ್ ಸಮಸ್ಯೆ ಹಾಗೂ ವಾಯುಮಾಲಿನ್ಯದಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳುವ ದಾರಿಯಲ್ಲಿ ನೂರಾರು ಫ್ಲೈ ಓವರ್‌ಗಳು, ಸಬವೇಗಳು ಕಟ್ಟಿದರೂ ಅದ್ಯಾಕೋ ಸಮಸ್ಯೆ ಬಗೆ ಹರಿಯುವಂತಿಲ್ಲ.
ಒಂದು ರೀತಿಯಲ್ಲಿ ಮೇಲೆ ಹೇಳಿದ ಎಲ್ಲ್ಲಾ ಸಮಸ್ಯೆಗಳಿಗೆ  ಸೈಕಲ್ ಸರಳ ಪರಿಹಾರವೇನೋ ಹೌದು,  ಅಂದಮಾತ್ರಕ್ಕೆ ನಾವು ತುಳಿಬೇಕಾ?  ’ನೋ ನೋ ಇಂಪಾಸಿಬಲ್, ನಾನೇನು, ನನ್ ಪ್ರೆಸ್ಟೀಜ್ ಏನು.? ಸೈಕಲ್ ತೊಗೊಂಡು ಕೆಲಸಕ್ಕೆ ಹೋಗ್ಬೇಕಾ? ನೋಡಿದೋರು ಏನ್ ಅಂದ್ಕೋತಾರೆ?  ಎನ್ನುವ ’ಅಹಂ’ ಎಲ್ಲರಲ್ಲೂ ಕಾಡುತ್ತದೆ. ಮನೆಯಿಂದ ಆಫೀಸ್ ೨-೩ ಕಿಲೋಮೀಟರ್ ದೂರವಿದ್ದರೂ, ಅಥವಾ ನಡೆದು ಹೋಗಬಹುದಾದಷ್ಟು ದೂರವಿದ್ದರೂ ನಾವು ಟುವೀಲರ್‌ನ್ನೇ ಅವಲಂಬಿಸಿರುತ್ತೇವೆ. ಏಕೆಂದರೆ ಕೆಲವರಿಗೆ ಸೈಕಲ್ ತುಳಿಯುವುದರಲ್ಲಿ ಪ್ರೆಸ್ಟೀಜ್ ಪ್ರಾಬ್ಲಮ್. ಆದರೆ, ಕೆಲವು ದೇಶಗಳಲ್ಲಿ ಸೈಕಲ್ ತುಳಿದರೆ ಪ್ರೆಸ್ಟೀಜ್ ಹಾಳಾಗುತ್ತೆ ಎನ್ನುವ ಅಳುಕಿಲ್ಲ. ಶೇ.೯೯ ರಷ್ಟು ಜನ ಸೈಕಲ್ ಉಪಯೋಗಿಸೊ ನಗರಗಳೂ ಈ ವಿಶ್ವದಲ್ಲಿವೆ ಎಂದರೆ ನೀವೂ ನಂಬಲೇಬೇಕು. ನಮ್ಮ ಬೆಂಗಳೂರಿನಂತಹ ನಗರಗಳಿಗೆ ಸೈಕಲ್ ಅನಿವಾರ್ಯತೆ ತುಂಬಾ ಇದೆ.
ವಾಹನ ಸಂಖ್ಯೆ ಏರಿದಾಗ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿಯುತ್ತವೆ. ಅದರಿಂದ ಟ್ರಾಫಿಕ್ ಜಾಮ! ಈ ಟ್ರಾಫಿಕ್ ಜಾಮ ಸಮಸ್ಯೆಗೆ ಪರಿಹಾರದ ರೂಪವಾಗಿ ಕೋಟಿ ಕೋಟಿ ರೂಪಾಯಿ ಖರ್ಚು. ಇಂದು ಫ್ಲೈಓವರ್, ಅಂಡರ್ ಪಾಸ್, ಅಗಲವಾದ ರಸ್ತೆಗಳು - ಹೀಗೆ ಅವೈಜ್ಞಾನಿಕ ಯೋಜನೆಗಳಿಗೆ ವ್ಯಯ ಮಾಡುತ್ತಿರುವ ಹಣದ ಪ್ರಮಾಣ ತುಂಬಾ ದೊಡ್ಡದು. ಈ ಸಮಸ್ಯೆಯಿಂದ ಮುಕ್ತಿ ಪಡೆಯುಲು ಸೈಕಲ ಒಂದು ಉತ್ತಮ ಪರಿಹಾರವಾಗಿದ್ದರೂ ಅದನ್ನು ‘ಕೀಳು’ ಎಂದು ಕೆಲವರು ಪರಿಗಣನೆಗೆ ತೆಗದುಕೊಳ್ಳುವುದಿಲ್ಲ. ಆದರೆ ಆ ಸೈಕಲ್ ಬದುಕನ್ನೇ ಎಷ್ಟು ಸರಳವಾಗಿಸುತ್ತದೆ ಎಂಬುದಕ್ಕೆ ನಿದರ್ಶನಗಳಿಲ್ಲಿವೆ.
  ಒಂದು ಮೊಂಡುವಾದವೆಂದರೆ ಸೈಕಲ ಅತ್ಯಂತ ನಿಧಾನವಾಗಿ ಚಲಿಸುವುದರಿಂದ ಅಧುನಿಕ ‘ವೇಗ’ ಆಧಾರಿತ ಸಮಾಜದಲ್ಲಿ ಸೈಕಲ ಸೂಕ್ತ ವಾಹನವಲ್ಲ. ಅದನ್ನು ವಾಸ್ತವದಲ್ಲಿ ಬಳಸುವುದಕ್ಕೆ ಆಗುವುದಿಲ್ಲ ಎಂಬುದು. ಆದರೆ ಸರ್ಕಾರ ಕೈಗೊಂಡ ಸಮೀಕ್ಷೆಯ ಪ್ರಕಾರ, ನಗರ ಪ್ರದೇಶದಲ್ಲಿ ಕಾರ್‌ನ ವೇಗ ಸೈಕಲ ವೇಗಕ್ಕಿಂತಲೂ ಕಡಿಮೆ.
 ನಗರದ ಒಳಗೆ ಸಂಚರಿಸುವಾಗ ಸೈಕಲ ಅತ್ಯಂತ ಕಡಿಮೆ ಸಮಯವನ್ನು ಮತ್ತು ಜಾಗವನ್ನು ತೆಗೆದುಕೊಳ್ಳುತ್ತದೆ. ಕಾರ್/ಬೈಕ್ ಐದು ವರ್ಷದಲ್ಲಿ ಹಳೆಯದಾಗುತ್ತದೆ. ಅದನ್ನು ನಿರ್ವಹಿಸಲು ತಗಲುವ ಖರ್ಚು ಅಸಲಿಗಿಂತ ಹೆಚ್ಚು. ಆದರೆ ಸೈಕಲ ನಿರ್ವಹಣಾ ವೆಚ್ಚ ಬಹಳ ಕಡಿಮೆ. ಅಲ್ಲದೆ ಸ್ವತಃ ನಾವೇ ಸೈಕಲ ರಿಪೇರಿ ಮಾಡಿಕೊಳ್ಳಲೂಬಹುದು.
  ವಿಶ್ವಬ್ಯಾಂಕ್ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಹೆಚ್ಚು ಸಾವು ಮತ್ತು ರೋಗಗಳು ಸಂಭವಿಸುವುದು ಹೃದಯಾಘಾತ ಅಥವಾ ಮಧುಮೇಹದಂಥ ಕಾಯಿಲೆಗಳಿಂದ. ಈಗಿನ ಕಾಲದಲ್ಲಿ ಬಹುತೇಕರು ಕುರ್ಚಿ ಮೇಲೆ ಕುಳಿತು ಗಂಟೆಗಟ್ಟಲೆ ಕೆಲಸ ಮಾಡುವುದರಿಂದ ದೇಹಕ್ಕೆ ಯಾವುದೇ ರೀತಿಯ ವ್ಯಾಯಾಮವಿಲ್ಲದೆ ಹೃದಯಾಘಾತ ಅಥವಾ ಮಧುಮೇಹ ದಾಳಿ ಇಡುವ ಸಾಧ್ಯತೆ ಇದ್ದೇ ಇರುತ್ತದೆ. ನಿತ್ಯ ಸೈಕಲ ತುಳಿಯುವುದರಿಂದ ಬೊಜ್ಜು ಬರುವುದಿಲ್ಲ. ಹೃದಯ ನಿತ್ರಾಣವಾಗುವುದಿಲ್ಲ. ಸತತವಾಗಿ ಸೈಕಲ ತುಳಿದರೆ ಶ್ವಾಸಕೋಶದ ಕ್ಷಮತೆ ಕೂಡ ಹೆಚ್ಚುತ್ತದೆ. ನಮ್ಮ ಇಂದ್ರಿಯಗಳು ಸೂಕ್ಷ್ಮ, ಮತ್ತು ಕ್ರೀಯಾಶೀಲವಾಗುತ್ತವೆ.
   ಮತ್ತೊಂದು ದೃಷ್ಟಿಯಿಂದ ನೋಡಿದರೆ ಸೈಕಲ ಅಹಿಂಸೆಯ ವಾಹನ. ಕಾರ್ ಮತ್ತು ಇತರೆ ಮೋಟಾರು ವಾಹನಗಳು ತೆಗೆದುಕೊಂಡ ನರಬಲಿಗಳೆಷ್ಟೋ? ಅದೆಷ್ಟು ಮಂದಿ ಅಂಗವಿಕಲರಾಗಿರುವರೋ? ಅರೆಕ್ಷಣ ಅವಸರದಿಂದ ಚಲಿಸಿ ಅಪಘಾತಕ್ಕೀಡಾಗಿ ಜೀವನ ಪರ್ಯಂತ ನೋವನ್ನು ಅನುಭವಿಸುತ್ತಿರುವವರೆಷ್ಟೋ? ರಸ್ತೆಯಲ್ಲಿ ದೂಳು-ಶಬ್ದದ ಪ್ರವಾಹದಲ್ಲಿ ಚಲಿಸಿದರೆ ಸಾಕು ಕಣ್ಣಿನಲ್ಲಿ ಉರಿ, ಕಿವಿಯಲ್ಲಿ ಕಿರಿಕಿರಿ, ಬಾಯಲ್ಲಿ ಉರಿ ಉರಿ..ರಸ್ತೆಯುದ್ದಕ್ಕೂ ಸಮಸ್ಯೆಗಳ ಮೆರವಣಿಗೆ. ಅದಲ್ಲದೆ ಮೋಟಾರು ವಾಹನಗಳಲ್ಲಿ ಸಂಚರಿಸುವಾಗ ಭಯವು ದಶದಿಕ್ಕುಗಳಲ್ಲಿಯೂ ನಮ್ಮನ್ನು ಕಾಡುತ್ತಿರುತ್ತದೆ. ರಸ್ತೆಯ ಮುಂದೆ ಅಗೆದಿರುವ ಗುಂಡಿಯಿಂದಲೋ, ಮೇಲಿಂದ ಬೀಳುವ ಮರದಿಂದಲೋ ಅಥವಾ ಸುತ್ತಮುತ್ತಲೂ ನಿಯಂತ್ರಣವಿಲ್ಲದೆ ವೇಗವಾಗಿ ಚಲಿಸುವ ವಾಹನಗಳಿಂದಲೋ ಭೀತಿ ಇರುತ್ತದೆ. ಪುಟ್ಟಪುಟ್ಟ ಮಕ್ಕಳಂತೂ ರಸ್ತೆಯಲ್ಲಿ ಹೆಜ್ಜೆ ಇಟ್ಟರೆ ತಂದೆ ತಾಯಿಗಳ ಎದೆ ಢವಢವ! ಹೀಗೆ, ಭಯಭೀತಿಯನ್ನು ಹೆಗಲಿಗೆ ಏರಿಸಿಕೊಂಡು ವೇಗವಾಗಿ ಚಲಿಸುವ ಉಸಾಬರಿ ಕಂಡರೆ ಇದು ಎಲ್ಲಿಗೆ ಹೋಗಿ ಮುಟ್ಟೀತೋ ಹೇಳಲಾಗದು. ಆದರೆ ಸೈಕಲ ತುಳಿಯುವಾಗ ನಾವು ತನ್ಮಯರಾಗಿ ನಮ್ಮ ಪಾಡಿಗೆ ನಾವು ಯಾರಿಗೂ ಭಯವನ್ನು ಉಂಟುಮಾಡದೆ ಚಲಿಸುವ ಸಾಧ್ಯತೆಯಿದೆ
   ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಮುಗಿದ ಬಳಿಕ ಮೆಟ್ರೋ ಸ್ಟೇಷನ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಲು ಸ್ಥಳದ ಅಭಾವವಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಆದರಿಂದ ಮೆಟ್ರೋ ಸ್ಟೇಷನ್ ತಲುಪಲು ಸೈಕಲ ಬಳಸಿದರೆ ಸ್ವಲ್ಪಮಟ್ಟಿನ  ಪರಿಹಾರ ಕಂಡುಕೊಳ್ಳಬಹುದು..

* ಪೆಟ್ರೋಲ್ ಉಳಿತಾಯ ಅನಿವಾರ್ಯ, ಆದರೆ ಹೇಗೇ?
*  ಸಿಗ್ನಲ್‌ಗಳಲ್ಲಿ ನಿಮ್ಮ ವಾಹನವನ್ನು ಆಫ್ ಮಾಡುವುದರಿಂದ ನೀವು ಬಳಸುವ ಶೇ. ೭ ರಷ್ಟು ಪೆಟ್ರೋಲ್ ಸೇವ್ ಮಾಡಬಹುದು.
*  ಅನಿವಾರ್ಯ ಕಾರಣಗಳಲ್ಲಿ ದೂರದ ಪ್ರಯಾಣಕ್ಕೆ ಸಾರ್ವಜನಿಕ ಸಾರಿಗೆಗೆ ಮೊರೆಹೋಗಿ. ಅದು ನಿಮ್ಮ ಬೈಕ್ ಅಥವಾ ಕಾರ್ ಗೆ ತುಂಬಿಸುವ ಇಂಧನದ ದರಕ್ಕಿಂತ ಕಡಿಮೆ ಹಾಗೂ ಸುರಕ್ಷಿತ ಪ್ರಯಾಣ.
*  ಚಿಕ್ಕ ಪುಟ್ಟ ಓಡಾಟಗಳಿಗಾಗಿ ಸೈಕಲ್ ಬಳಸಿ. ನಗರ ಪ್ರದೇಶಗಳಲ್ಲಿ ಸೈಕಲ್ ಬಳಕೆ ನಿಮ್ಮ ಆದಾಯಕ್ಕೆ ಪ್ಲಸ್ ಪಾಯಿಂಟ್ ಆಗಬಲ್ಲದು. ಹಾಗೂ ವಾಯುಮಾವಾಲಿನ್ಯ ಶಬ್ದಮಾಲಿನ್ಯಗಳನ್ನು  ತಡೆಯಬಹುದು.
*  ಸೈಕಲ್ ಓಡಿಸಬೇಕೆ ಎಂಬ ಕೀಳರಿಮೆ ಬೇಡ. ಏಕೆಂದರೆ ಸೈಕಲ್ ತುಳಿಯುವುದಕ್ಕಿಂತ ಉತ್ತಮವಾದ ವ್ಯಾಯಾಮ ಬೇರೊಂದಿಲ್ಲ.

* ಒಮ್ಮೆ ಮನಸ್ಸು ಮಾಡಿ..
ದೊಡ್ಡವರು, ಚಿಕ್ಕವರು, ಯುವಕರು, ಯುವತಿಯರು ಎಂಬ ಬೇಧವಿಲ್ಲದೇ ನಿಮ್ಮೆಲ್ಲಾ ಅಹಂನ್ನು ಬದಿಗಿಟ್ಟು ಒಂದು ಸೈಕಲ್ ಕೊಂಡುಕೊಳ್ಳಿ, ನಿಮ್ಮ ಪ್ರೆಸ್ಟೀಜ್‌ಗೆ ಹಾನಿಯಾಗದಿರುವ ಜಾಗದಲ್ಲಾದರೂ ಸೈಕಲ್ ಓಡಿಸಲು ಪ್ರಯತ್ನಿಸಿ. ಒಂದು ನಗರವನ್ನು ಬದಲಾಯಿಸಬೇಕಾದರೆ ಅದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೋಬ್ಬರೂ ಅದಕ್ಕೆ ಕೈ ಜೋಡಿಸಲೇಬೇಕು. ನಿಮ್ಮ ಆರೋಗ್ಯ, ಐಶ್ವರ್ಯ ಹೆಚ್ಚಿಸಿಕೊಳ್ಳುವುದರಿಂದ ನಗರದಲ್ಲಿನ ಹಲವಾರು ಸಮಸ್ಯೆಗಳನ್ನು ಕಡಿಮೆ ಮಾಡಬಹುದೆಂದಾದರೆ ನೀವೇಕೆ ಒಂದು ಸೈಕಲ್ ಕೊಳ್ಳಬಾರದು?. ನೆನಪಿಡಿ. ಎರಡು ಕಿ.ಮೀ ದೂರ ಇರುವ ಆಫೀಸ್‌ಗೆ ಹೋಗುವುದಕ್ಕಾಗಿ ಬೈಕ್, ಕಾರ್ ಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಒಮ್ಮೆ ಸೈಕಲ್ ಕೊಳ್ಳುವ ಧೈರ್ಯಮಾಡಿ. ಎಲ್ಲಾ ಕೆಲಸಕ್ಕೂ ಸೈಕಲ್ ಬಳಸಲು ಸಾಧವಾಗುವುದಿಲ್ಲ. ಆದರೆ ಚಿಕ್ಕ ಪುಟ್ಟ ಓಡಾಟಗಳಿಗಾದರೂ ಸೈಕಲ್ ಸಾವಾರಿ ಸೇಫ್ ಅಲ್ಲವೇ? ಇನ್ನು ಕಾಲೇಜ್‌ಗೆ ಹೋಗುವ ಯುವಕ ಯುವತಿಯರು ಬೈಕ್ ಬದಲು ಸೈಕಲ್ ಬಳಸಿದರೆ ತಪ್ಪೇನು? ನಿಮ್ಮ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ. ನಿಮ್ಮ ಆರೋಗ್ಯ, ನಿಮ್ಮ ಜೇಬು ಗಟ್ಟಿಯಾಗಿರುವುದು ಮುಖ್ಯ.

ಹೆಚ್ಚು ಸೈಕಲ್‌ಗಳನ್ನು ಬಳಸುತ್ತಿರುವ ಟಾಪ್ 5 ದೇಶಗಳು :
ನೆದರ್‌ಲ್ಯಾಂಡ್ - ಶೇ.೯೯.೧  ರಷ್ಟು (ಅಸ್ಟ್ರಡಾಮ್ ನಗರ), ಡೆನ್ಮಾರ್ಕ್ ? ಶೇ.೮೦.೧  ಜರ್ಮನಿ - ಶೇ.೭೫.೮,
ಸ್ವೀಡನ್ ? ಶೇ.೬೩.೭ ನಾರ್ವೆ - ಶೇ.೬೦.೭