Monday 25 November 2013

ನಿರುದ್ಯೋಗಿಗಳಿಗೇಕಿಲ್ಲ ’ಉದ್ಯೋಗ ಭಾಗ್ಯ’...?


ಒಂದು ದೇಶದ ಭವಿಷ್ಯ ಆ ದೇಶದ ಯುವ ಜನತೆಯನ್ನು ನೇರವಾಗಿ ಅವಲಂಬಿಸಿರುತ್ತೆ ಎಂದು ಹೇಳುತ್ತಾರೆ. ಆದರೆ, ಇಂದು ಭಾರತದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವುದರಿಂದ ಯುವಕರ ಕೈಗಳಿಗೆ ಕೆಲಸವಿಲ್ಲದಂತಾಗುತ್ತಿದೆ. ಸರ್ಕಾರ ರೂಪಿಸುತ್ತಿರುವ ದಿನಕ್ಕೊಂದು ಯೋಜನೆಗಳು ಉದ್ಯೋಗ ಸೃಷ್ಟಿಸುವ ಇರಾದೆಯನ್ನೇ ಇಟ್ಟುಕೊಳ್ಳುತ್ತಿಲ್ಲ.

ಭಾರತದಲ್ಲಿನ ಲಕ್ಷಾಂತರ ನಿರುದ್ಯೋಗಿಗಳ ಕೈಗಳು ಕೆಲಸಕ್ಕಾಗಿ ಹಾತೊರೆಯುತ್ತಿವೆ. ಆದರೆ, ಆ ಕೈಗಳಿಗೆ ಸೂಕ್ತವಾದ ಕೆಲಸ ಸಿಗುತ್ತಿಲ್ಲ. ಸಿಕ್ಕ ಕೆಲಸದಲ್ಲಿ ಮೂಲಭೂತ ಅವಶ್ಯಕತೆಗಳನ್ನೂ  ಪೂರೈಸಿಕೊಳ್ಳಲಾಗುತ್ತಿಲ್ಲ. ಇದು ಇನ್ನೊಂದೆಡೆ ಬಡತನಕ್ಕೆ ದಾರಿಮಾಡಿಕೊಡುತ್ತಿದೆ.   ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲೀ ಸೂಕ್ತ ಯೋಜನೆಗಳನ್ನು ರೂಪಿಸದೆ ತಮ್ಮ ಜವಾಬ್ದಾರಿಯನ್ನು ಮರೆಯುತ್ತಿವೆ.  ಉದ್ಯೋಗ ಸೃಷ್ಟಿಸದಿರುವ ಯಾವುದೇ ಯೋಜನೆ ಅಭಿವೃದ್ದಿಶೀಲ ಭಾರತಕ್ಕೆ  ಕೊಡಲಿ ಏಟು ನೀಡದೇ ಇರದು.

ವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸುವುದರೊಂದಿಗೆ ಆ ಯೋಜನೆಗಳು ಉದ್ಯೋಗ ಸೃಷ್ಟಿಸುವ ಆಗರಗಳಾಗುವಂತೆ ಯೋಜನೆಗಳ ರೂಪುರೇಷೆ ತಯಾರಿಸುವುದು ಅಭಿವೃದ್ದಿಶೀಲ ರಾಷ್ಟ್ರ ಭಾರತಕ್ಕೆ ಅನಿವಾರ್ಯವೂ ಹೌದು. ಸಾಮಾನ್ಯರ ಬದುಕಿಗೆ ಒಂದು ಹೊತ್ತಿನ ಊಟ ನೀಡುವ ಯೋಜನೆಗಳನ್ನು ರೂಪಿಸುವ ಜಾಗದಲ್ಲಿ ಸಣ್ಣದೊಂದು ಉದ್ಯೋಗ ಕಲ್ಪಿಸಬಲ್ಲ ಯೋಜನೆಗಳತ್ತ ಗಮನ ಹರಿಸಿದರೆ  ಆ ಸಣ್ಣದೊಂದು ಉದ್ಯೋಗ ಮೂರು ಹೊತ್ತಿನ ಹಸಿವನ್ನು ನೀಗಿಸಬಲ್ಲದು.

ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಯೋಜನೆಗಳು ಬೇಕಾಗಿವೆ ಅಷ್ಟೆ.  ಒಂದೆಡೆ ಬಡತನವನ್ನು ನೀಗಿಸಿ ಇನ್ನೊಂದೆಡೆ ಉದ್ಯೋಗವನ್ನು ಸೃಷ್ಟಿಸುವಂತಹ ಮುಂದಾಲೋಚನೆಗಳುಳ್ಳ ಯೋಜನೆಗಳು ಭಾರತದ ಸದ್ಯದ ಪರಿಸ್ಥಿತಿಗೆ ಅನಿವಾರ್ಯವಾಗಿದೆ.

ಇತ್ತೀಚೆಗೆ ರಾಜ್ಯದಲ್ಲಿ ಆಡಳಿತಕ್ಕೆ ಬಂದ ರಾಜ್ಯ ಸರ್ಕಾರ ಅನ್ನಭಾಗ್ಯ?, ಶಾಧಿ ಭಾಗ್ಯ? ದಂತಹ ಯೋಜನೆಗಳನ್ನು ರೂಪಿಸುತ್ತಿದೆ. ಕೋಟಿ ಕೋಟಿ ಹಣವನ್ನು ಬೇಡುವ ಈ ಯೋಜನೆಗಳು ಸರ್ಕಾರಕ್ಕೆ ಮತ್ತಷ್ಟು ಹೊರೆ ಯಾಗುವುದರೊಂದಿಗೆ ಆದಾಯದ ಮೂಲಕ್ಕೇ ಮುಳ್ಳಾಗುವ ಸಾಧ್ಯತೆಗಳೇ ಹೆಚ್ಚು.

ಇಂದು ಭಾರತದ ಅಭಿವೃದ್ಧಿಗೆ ಬೇಕಾಗಿರುವುದು, ಒಂದು ಹೊತ್ತಿನ ಊಟ ಅಥವಾ ಸರ್ಕಾರ ನೀಡುವ ಮದುವೆ ಹಣ ಅಲ್ಲ. ತಮ್ಮ ಬದುಕನ್ನು ತಾವೇ ಸ್ವತಂತ್ರ್ಯವಾಗಿ ರೂಪಿಸಿಕೊಡಬಲ್ಲಂತಹ ಉದ್ಯೋಗಾವಕಾಶಗಳು. ಈ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಿದಲ್ಲಿ ಆರ್ಥಿಕ ಮಟ್ಟವನ್ನು ಸುಧಾರಿಸಬಹುದೇ ಹೊರತು ಅವೈಜ್ಞಾನಿಕ ಯೋಜನೆಗಳನ್ನು ರೂಪಿಸಿ  ಇರುವ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುವುದರಿಂದ ಅಲ್ಲ.

ಭಾರತ ಕೃಷಿ ಆಧಾರಿತ ದೇಶ. ಕೃಷಿ ದೇಶದ ಆಧಾರ ಸ್ತಂಭ. ಅಷ್ಟ್ಟೇ ಅಲ್ಲ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುವ ಏಕೈಕ ಕ್ಷೇತ್ರ. ಆದರೆ, ಕೃಷಿಗೆ ಹೆಚ್ಚಿನ ಆದ್ಯತೆ ಇಲ್ಲದಿರುವುದರಿಂದ ಹಳ್ಳಿಯ ಯುವ ಜನಾಂಗ ಉದ್ಯೋಗ ಅರಸಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ, ಇತರೆ ಕ್ಷೇತ್ರಗಳಂತೆ ಕೃಷಿಯನ್ನೂ ಒಂದು ಉದ್ಯಮದ ರೂಪದಲ್ಲಿ ಬೆಳೆಸಲು ಸರ್ಕಾರಗಳ ಸೂಕ್ತ ಯೋಜನೆಗಳು ಅನಿವಾರ್ಯ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯವನ್ನು ಕಲ್ಪಿಸುವುದರಿಂದ ಸರ್ಕಾರ ನೀಡುವ ಅಕ್ಕಿ ಅಥವಾ ಮದುವೆಯ ಹಣವನ್ನು ಅವಲಂಬಿಸದೇ ಸ್ವಾವಲಂಬಿಗಳನ್ನಾಗಿ ಮಾಡಬಹುದಾಗಿದೆ.

ಕೊನೆಯದಾಗಿ ಆಡಳಿತಾರೂಢ ಸರ್ಕಾರದಲ್ಲಿ  ಒಂದು ಮನವಿ. ಅನ್ನಭಾಗ್ಯ?, ಶಾದಿಭಾಗ್ಯ? ಯೋಜನೆಗಳಂತೆ ಉದ್ಯೋಗ ಭಾಗ್ಯ?ವನ್ನೂ ಕಲ್ಪಿಸುವ ಯೋಜನೆಗಳತ್ತ ಹೆಚ್ಚು ಆಲೋಚನೆಗಳನ್ನು ಮಾಡಿ. ಹಸಿದವರಿಗೆ ಅರೆಹೊತ್ತಿನ ಊಟದ ಬದಲು. ಸಣ್ಣದೊಂದು ಉದ್ಯೋಗಾವಕಾಶವನ್ನು ಕಲ್ಪಿಸಿ. ಜನರನ್ನು ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಮಾಡಿಕೊಡಿ.              - - ಶ್ರೀಕಾಂತ್