Friday 4 October 2013

ನಿಮ್ಮ ರಕ್ತದಾನದಿಂದ ಹಲವರಿಗೆ ಜೀವದಾನ


ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮಗಳು. ಹುಟ್ಟಿಗೆ ಒಂದೇ ಮುಖ ಆದರೆ, ಸಾವಿಗೆ ಸಾವಿರ ಮುಖಗಳು, ಯಾವ ಕ್ಷಣದಲ್ಲಿ ಯಾರಿಗೆ, ಹೇಗೆ ಸಾವು ಸಮೀಪಿಸುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ, ಒಂದು ಸಂಗತಿ ನಿಮ್ಮನ್ನು ಬೆಚ್ಚಿಬೀಳಿಸದೇ ಇರದು. ಹೌದು, ಪ್ರತಿನಿತ್ಯ ದೇಶದಲ್ಲಿ ಸಾಯುವವರಲ್ಲಿ  ಶೇಕಡಾ ೪೩ ರಷ್ಟು ಜನರ ಸಾವಿಗೆ ಕಾರಣವಾಗುತ್ತಿರುವುದು ರಕ್ತದ ಕೊರತೆಯ ಸಮಸ್ಯೆ. ಸಮಯಕ್ಕೆ ಸರಿಯಾಗಿ ರಕ್ತ ಸಿಕ್ಕರೆ ಅದೆಷ್ಟೋ ಜನರ ಪ್ರಾಣ ಉಳಿಸಬಹುದು ಎಂಬುದು ಇದರಿಂದ ತಿಳಿಯಬಹುದು.
ಇತ್ತೀಚೆಗೆ ರಕ್ತದಾನದ ಬಗ್ಗೆ ಸರ್ಕಾರದಿಂದ ಹಿಡಿದು ನಾನಾ ಎನ್‌ಜಿಒಗಳೂ ಸಹ ರಕ್ತದಾನದ ಮಹತ್ವವನ್ನು ಸಾರಿ ಸಾರಿ ಹೇಳುತ್ತಿವೆ. ಆದರೆ ಅದನ್ನು ಕೇಳುವಷ್ಟು ತಾಳ್ಮೆ, ರಕ್ತವನ್ನು ದಾನವಾಗಿ ನೀಡುವಷ್ಟು ಒಳ್ಳೆಯ ಮನಸ್ಸುಗಳ ಕೊರತೆ ಎದ್ದು ಕಾಡುತ್ತಿದೆ.  ನೇತ್ರದಾನ ಕೇವಲ ಒಮ್ಮೆ ಮಾತ್ರ, ಮೂತ್ರಪಿಂಡದಾನವು ಕೇವಲ ಒಮ್ಮೆ ಮಾತ್ರ, ಹೃದಯದಾನ ಅದೂ ಕೇವಲ ಒಮ್ಮೆ ಮಾತ್ರ, ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ... ದೇಹ ಮಣ್ಣಾಗುವವರೆಗೂ ಮಾಡಬಹುದಾದ ಶ್ರೇಷ್ಠ ದಾನ.
ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರುತ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಎನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಏನೆಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪುನಃ ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಏಕೆ ರಕ್ತವನ್ನು ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು? ಪ್ರತಿಯೊಬ್ಬರೂ ತಮ್ಮ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡಬಹುದು.  ಇದರಿಂದ ಯಾವ ತೊಂದೆರೆಯೂ ಇಲ್ಲ ಎಂಬ ಸತ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.. ಏಕೆಂದರೆ ಸಾವಿರಾರು ಮಂದಿ ಅಪಘಾತದಲ್ಲೋ ಅಥವಾ ಇನ್ಯಾವುದೋ ಅವಘಡದಲ್ಲಿ ತಮ್ಮ ರಕ್ತವನ್ನು ಕಳೆದುಕೊಂಡು ಪ್ರಾಣ ಬಿಡುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ರಕ್ತ ಸಿಕ್ಕರೆ ಪ್ರಾಣಾಪಾಯದಿಂದ ಪಾರಾಗುತ್ತಾರೆ.  ಇಂದಿನ ಯುವಕರು/ಯುವತಿಯರು ರಕ್ತದಾನದ ಮಹತ್ವದ ಬಗ್ಗೆ ಅರಿತು ಸ್ವಯಿಚ್ಛೆಯಿಂದ ರಕ್ತದಾನ ಮಾಡುವ ಮನಸ್ಸು ಮಾಡುವುದು ಸಮಾಜದಲ್ಲಿ ಉತ್ತಮ ಬದಲಾವಣೆಗೆ ನಾಂದಿಯಾಗಲಿದೆ. ಏಕೆಂದರೆ  ಪ್ರತಿ ಎರಡು ಸೆಕೆಂಡಿಗೆ ಯಾರಾದರೊಬ್ಬರಿಗೆ ರಕ್ತದ ಅವಶ್ಯಕತೆಯಿರುತ್ತದೆ. ನಿಮ್ಮ ರಕ್ತ ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜೀವಗಳಿಗೆ ಸಹಾಯವಾಬಲ್ಲದು. ಅಪಘಾತಕ್ಕೆ ಒಳಗಾದವರು, ಗರ್ಭಾವಧಿ ಪೂರ್ಣವಾಗುವ ಮೊದಲೇ ಹುಟ್ಟಿದ (ಪ್ರಿಮೆಚೂರ್) ಶಿಶುಗಳು, ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ರೋಗಿಗಳು- ಇಂಥವರಿಗೆ ಸಂಪೂರ್ಣ ರಕ್ತದ ಅವಶ್ಯಕತೆ ಇರುತ್ತದೆ. ಇಲ್ಲಿ ನಿಮ್ಮ ರಕ್ತವನ್ನು ಪರೀಕ್ಷೆಗೊಳಪಡಿಸಿದ ನಂತವೇ ರಕ್ತವನ್ನು ನೇರವಾಗಿ ಬಳಸಲಾಗುತ್ತದೆ. ಅಪಘಾತ, ರಕ್ತಹೀನತೆ, ಮತ್ತು ಇತರ ಶಸ್ತ್ರಚಿಕಿತ್ಸೆಗಳಿಂದ ನರಳುತ್ತಿರುವ ಜನರಿಗೆ ಕೇವಲ ಕೆಂಪುರಕ್ತಕಣಗಳ ಅವಶ್ಯಕತೆಯಿರುತ್ತದೆ. ಅದನ್ನು ನಿಮ್ಮ ರಕ್ತದಿಂದ ಬೇರ್ಪಡಿಸಿ ಪೂರೈಸಲಾಗುತ್ತದೆ. ಆಗ ನಿಮ್ಮ ರಕ್ತ ಮತ್ತೊಂದು ಜೀವಕ್ಕೆ ಮರುಜನ್ಮನೀಡಲು ಸಹಾಯಕವಾಗುತ್ತದೆ. 


ಜೂನ್ 14 : ‘ವಿಶ್ವ ರಕ್ತ ದಾನಿಗಳ ದಿನ’ :
     ವಿಶ್ವದಾದ್ಯಂತ ಪ್ರತಿ ವರ್ಷವೂ ಜೂನ್ ೧೪ರಂದು ‘ವಿಶ್ವ ರಕ್ತ ದಾನಿಗಳ ದಿನ’ವನ್ನಾಗಿ ಆಚರಿಸುತ್ತೇವೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ೨೦೦೪ರಲ್ಲಿ ಈ ಆಚರಣೆ ಆರಂಭವಾಯಿತು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೀನರ್ ಅವರ ಜನ್ಮದಿನದ ನೆನಪಿಗಾಗಿ ಈ ಆಚರಣೆಯನ್ನು ಆಚರಿಸಲಾಗುತ್ತದೆ. ಈತ ರಕ್ತವನ್ನು ಎ, ಬಿ, ಒ ಎಂಬ ಗುಂಪುಗಳನ್ನಾಗಿ ವಿಂಗಡಿಸುವ ಬಗೆಯನ್ನು ಕಂಡು ಹಿಡಿದ. ಇಂದಿಗೂ ರಕ್ತವನ್ನು ಈ ಬಗೆಯಲ್ಲಿಯೇ ವಿಂಗಡಿಸಲಾಗುತ್ತಿದೆ.
ಈ ಆಚರಣೆಯ ಮುಖ್ಯ ಧ್ಯೇಯ :
    ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು ಈ ಆಚರಣೆಯ ಮುಖ್ಯ ಧ್ಯೇಯ. ಅದರ ಜೊತೆಯಲ್ಲಿಯೇ ಸ್ವಯಂಪ್ರೇರಿತ ರಕ್ತದಾನಿಗಳನ್ನು ಅಭಿನಂದಿಸುವುದು, ಎಲ್ಲ ಆರೋಗ್ಯವಂತರನ್ನೂ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವುದು ಈ ಆಚರಣೆಯ ಅಭಿಯಾನದಲ್ಲಿ ಪ್ರಮುಖವಾಗಿವೆ. ವಿಶ್ವದ ಅರ್ಧದಷ್ಟು ರಾಷ್ಟ್ರಗಳಲ್ಲಿ ರಕ್ತದ ಕೊರತೆ ಇದೆ. ಈ ಕೊರತೆಯನ್ನು ನೀಗಿಸುವುದು ಈ ಆಚರಣೆಯ ಬಹು ಮುಖ್ಯ ಉದ್ದೇಶ.

   ರಕ್ತದಾನಕ್ಕಿರಬೇಕಾದ ಕನಿಷ್ಠ ಅರ್ಹತೆಗಳು:
* ಆರೋಗ್ಯಕರ ವ್ಯಕ್ತಿಯಾಗಿರಬೇಕು. 

* ವಯಸ್ಸು ೧೮ರಿಂದ ೬೦ವರ್ಷದೊಳಗಿನವರಾಗಿರಬೇಕು.
* ೪೫ ಕೆ.ಜಿ.ಗಿಂತಲೂ ಹೆಚ್ಚು ತೂಕವಿರಬೇಕು. 

* ೪.೧೨.೫ ಗ್ರಾಂ ಗಿಂತಲೂ ಹೆಚ್ಚು ಹಿಮೊಗ್ಲೋಬಿನ್ ಅಂಶವಿರಬೇಕು. 
* ಅಂಗೀಕೃತವಾದ ರಕ್ತದ ತಾಪಮಾನ ೧೬೦/೯೦ ರಿಂದ ೧೧೦/೬೦ ಇರಬೇಕು.
ಎಷ್ಟು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು: ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ ೫.೫ರಿಂದ ೬ ಲೀಟರ್‌ನಷ್ಟು ರಕ್ತ ಇರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ ೩೫೦ ಮಿಲಿಯಷ್ಟೇ ರಕ್ತವನ್ನು ದಾನಿಯಿಂದ ಸ್ವೀಕರಿಸುವುದರಿಂದ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.
ಯಾರು ರಕ್ತದಾನ ಮಾಡಬಾರದು:
      ಯಕೃತ್ತು (ಲಿವರ್), ಮೂತ್ರಪಿಂಡ (ಕಿಡ್ನಿ) ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವ ಮಹಿಳೆಯರು, ಮಗುವಿಗೆ ಹಾಲುಣಿಸುವ ತಾಯಂದಿರು, ರಕ್ತಹೀನತೆ, ಕ್ಯಾನ್ಸರ್, ಕ್ಷಯ, ಅಧಿಕ ರಕ್ತದೊತ್ತಡ, ಅಪಸ್ಮಾರ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ರಕ್ತದಾನ ಮಾಡಬಾರದು. ಹಾಗೆಯೇ ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗೆ ಒಳಗಾದವರು ಒಂದು ವರ್ಷದವರೆಗೆ, ರಕ್ತ ವರ್ಗಾವಣೆ ಮಾಡಿಸಿಕೊಂಡವರು ಆರು ತಿಂಗಳವರೆಗೆ, ಮಲೇರಿಯಾ, ಟೈಫಾಯ್ಡ, ಜಾಂಡೀಸ್‌ನಿಂದ ಬಳಲಿದವರು ಮುಂದಿನ ಆರು ತಿಂಗಳವರೆಗೆ, ಯಾವುದಾದರೂ ಕಾಯಿಲೆಯ ವಿರುದ್ಧ ಲಸಿಕೆಗಳನ್ನು ತೆಗೆದುಕೊಂಡವರು ಮುಂದಿನ ಆರು ತಿಂಗಳವರೆಗೆ ರಕ್ತದಾನ ಮಾಡಬಾರದು. ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿಲ್ಲ. ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ದಾನಿಯಿಂದ ಸ್ವೀಕರಿಸಿದ ರಕ್ತವಷ್ಟೇ ರೋಗಿಯ ಜೀವವನ್ನು ಉಳಿಸಲು ಸಾಧ್ಯ. ಇಂದೇ ರಕ್ತದಾನ ಮಾಡಿ ನಿಜವಾದ ಹೀರೋಗಳೆನ್ನಿಸಿಕೊಳ್ಳೋಣ.

ರಕ್ತದಾನ ಏಕೆ ಮಾಡಬೇಕು?
    ರಕ್ತವು ಎಲ್ಲ ಜೀವಕ್ಕೆ ಆಧಾರವಾಗಿರುವ ಜೀವ ದ್ರವ. ರಕ್ತವು ೬೦% ರಷ್ಟು ದ್ರವ ಪದಾರ್ಥ ಹಾಗೂ ೪೦% ರಷ್ಟು ಘನ ಪದಾರ್ಥದಿಂದ ಕೂಡಿದೆ. ದ್ರವ ಪದಾರ್ಥವನ್ನು ೯೦% ನೀರು ಹಾಗೂ ೧೦% ಪೌಷ್ಠಿಕ ಅಂಶ, ಹಾಗೂ ಹಾರ್ಮೋನ್ ಗಳಿಂದ ಕೂಡಿದ ಪ್ಲಾಸ್ಮಾ ಎಂದು ಕರೆಯುತ್ತಾರೆ. ಅದು ಆಹಾರ, ಔಷಧಿ ಇತ್ಯಾದಿಗಳಿಂದ ಸುಲಲಿತವಾಗಿ ಮರುತುಂಬಲ್ಪಡುತ್ತದೆ. ಆದರೆ ಆರ್ ಬಿ ಸಿ (ಕೆಂಪು ರಕ್ತ ಕಣ), ಡಬ್ಲ್ಯೂ ಬಿ ಸಿ (ಬಿಳಿ ರಕ್ತ ಕಣ) ಹಾಗೂ ಕಿರು ತಟ್ಟೆಗಳನ್ನು ಒಳಗೊಂಡಿರುವ ಘನ ಪದಾರ್ಥವನ್ನು ಒಂದು ವೇಳೆ ಕಳೆದುಕೊಂಡರೆ ಮರು ತುಂಬಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ.  ಇಲ್ಲಿ ದಾನಿಯ ಪಾತ್ರ ಬರುತ್ತದೆ. ಈ ಘನ ಪದಾರ್ಥವನ್ನು ಮರುತುಂಬಲು ಬೇಕಾಗುವ ಅವಧಿಯಲ್ಲಿ ರೋಗಿಯ ಜೀವಕ್ಕೆ ಮಾರಕವಾಗಬಹುದು. ಕೆಲವೊಮ್ಮೆ ದೇಹವು ಹೀಗೆ ಮರುಭರ್ತಿ ಸಮರ್ಥ್ಯವನ್ನೇ ಕಳೆದುಕೊಂಡಿರಬಹುದು.   ನಿಮಗೆಲ್ಲಾ ಗೊತ್ತಿರುವಂತೆ ರಕ್ತವನ್ನು ಫಸಲು ಮಾಡಲಾಗುವುದಿಲ್ಲ ಆದರೆ ದಾನ ಮಾಡಲು ಮಾತ್ರ ಸಾಧ್ಯ. ಅಂದರೇ ಕೇವಲ ದಾನಿ ಮಾತ್ರ ರಕ್ತದ ಅಗತ್ಯವಿರುವ ಒಂದು ಜೀವವನ್ನು ಉಳಿಸಲು ಸಾಧ್ಯ. ಪ್ರತಿ ವರ್ಷ ಭಾರತಕ್ಕೆ ೨೫೦ ಸಿಸಿ ಯ ೪೦ ಮಿಲಿಯನ್ ಯೂನಿಟ್ಟುಗಳಷ್ಟು ರಕ್ತವು ಬೇಕಾಗುತ್ತದೆ. ಆದರೆ ಕೇವಲ ೫೦೦,೦೦೦ ಯೂನಿಟ್ಟುಗಳಷ್ಟು ರಕ್ತ ಲಭ್ಯವಿದೆ.
ರಕ್ತದಾನ ಮಾಡದಿದ್ದರೆ ಆರೋಗ್ಯಕ್ಕೆ ಹಾನಿ!
 ರಕ್ತದಾನದ ಬಗ್ಗೆ ಅನೇಕರಲ್ಲಿ ತಪ್ಪು ಕಲ್ಪನೆ ಇದೆ. ರಕ್ತ ದಾನ ಮಾಡಿದರೆ ನನಗೆ ವೀಕ್ ನೆಸ್ ಉಂಟಾಗಬಹುದು, ಕಾಯಿಲೆ ಬರಬಹುದು ಎಂಬ ಭಯವಿದೆ. ಆದರೆ ಸತ್ಯಾಂಶವೆನೆಂದರೆ ರಕ್ತದಾನ ಮಾಡಿದರೆ ನಿಮ್ಮ ಆರೋಗ್ಯ ಮತ್ತಷ್ಟು ವೃದ್ಧಿಸುವುದು!
ಇದರ ಬಗ್ಗೆ ನಡೆಸಿದ ಸಂಶೋಧನೆಯಿಂದ ರಕ್ತದಾನದಿಂದ ದೇಹದಲ್ಲಿ ಕಬ್ಬಿಣಾಂಶವನ್ನು ಸಮಪ್ರಮಾಣದಲ್ಲಿ ಇಡಬಹುದೆಂದು ತಿಳಿದು ಬಂದಿದೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೂ ಕಷ್ಟವೇ? ಅಧಿಕವಾದರೂ ಒಳ್ಳೆಯದಲ್ಲ. ರಕ್ತದಲ್ಲಿ ಕಬ್ಬಿಣಾಂಶ ಅಧಿಕವಾದರೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಮಹಿಳೆಯರಿಗೆ ಮಟ್ಟು ದೇಹದಲ್ಲಿ ಕಬ್ಬಿಣಾಂಶ ಸರಿಯಾದ ರೀತಿಯಲ್ಲಿರುವಂತೆ ನೋಡಿಕೊಳ್ಳುತ್ತದೆ.
 ರಕ್ತದಾನ ಮಾಡುವ ಮುನ್ನ ವೈದ್ಯರು ನಮ್ಮ ಆರೋಗ್ಯವನ್ನು ತಪಾಸಣೆ ಮಾಡುತ್ತಾರೆ. ಇದರಿಂದ ಕೆಲವೊಮ್ಮೆ ನಮ್ಮಲ್ಲಿ ನಮಗೆ ತಿಳಿಯದೇ ಏನಾದರೂ ಕಾಯಿಲೆ ಇದ್ದರೆ ಆಗ ನಮಗೆ ತಿಳಿದು ಬರುವ ಸಾಧ್ಯತೆ ಇದೆ. ನಮ್ಮ ರಕ್ತದಾನಕ್ಕೆ ವೈದ್ಯರು ಒಪ್ಪಿದರೆ ನಾವು ಆರೋಗ್ಯವಂತರು ಎಂದು ತಿಳಿದು ಸಂತೋಷ ಉಂಟಾಗುವುದು.
 ದೇಹದಲ್ಲಿ ಕಬ್ಬಿಣಾಂಶ ಸಮಾನ ಪ್ರಮಾಣದಲ್ಲಿದ್ದರೆ ಗಂಟಲಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ: ನಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಇರುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಕೊಲೆಸ್ಟ್ರಾಲ್ ಕಾಯಿಲೆ ಬರುತ್ತದೆ. ರಕ್ತದಾನ ಮಾಡುವುದರಿಂದ ಕೊಲೆಸ್ಟ್ರಾಲ್ ಬರದಂತೆ ತಡೆಯಬಹುದು.
ರಕ್ತ ಉತ್ಪತ್ತಿಗೆ ಸಹಾಯ ಮಾಡುತ್ತೆ: ರಕ್ತದಾನ ಮಾಡಿದಾಗ ಆ ರಕ್ತ ತುಂಬಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹೊಸ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ. ಇವು ಒಂದು ವೇಳೆ ನಿಮಗೆ ಗಾಯವಾಗಿ ಹೆಚ್ಚು ರಕ್ತ ಹೋದರೆ ಬೇಗನೆ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ನಿಮ್ಮ ದೇಹಕ್ಕೆ ಶಕ್ತಿಯನ್ನು ತುಂಬುವಂತೆ ಮಾಡುತ್ತದೆ. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಿದ ತೃಪ್ತಿ ಜೊತೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ರಕ್ತದಾನಕ್ಕೆ ಹೊರಡುವ ಮುನ್ನ :
ರಕ್ತದಾನಕ್ಕೆ ಕನಿಷ್ಠ ಮೂರು ಘಂಟೆಗಳ ಮುನ್ನ ಚೆನ್ನಾಗಿ ಆಹಾರ ಸೇವನೆ ಮಾಡಿ.
ದಾನದ ನಂತರ ನಿಮಗೆ ನೀಡಲಾಗುವ ತಿಂಡಿಯನ್ನು ಸ್ವೀಕರಿಸಿ. ಅದನ್ನು ತೆಗೆದುಕೊಳ್ಳುವುದು ನಿಮಗೆ ತುಂಬಾ ಅಗತ್ಯ.  ನಂತರ ಸರಿಯಾದ ಆಹಾರ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ.
ರಕ್ತದಾನದ ಮುನ್ನಾ ದಿನ ಹೊಗೆಬತ್ತಿ/ ಸಿಗರೇಟು ಸೇವನೆಯನ್ನು ದೂರವಿಡಿ. ರಕ್ತದಾನ ಮಾಡಿದ ಮೂರು ಘಂಟೆಗಳ ನಂತರ ಸಿಗರೇಟು ಸೇವನೆ ಮಾಡಬಹುದಾಗಿದೆ. ರಕ್ತದಾನಕ್ಕೆ ೪೮ ಘಂಟೆಗಳ ಮುಂಚೆ ಮದ್ಯಪಾನ ಮಾಡಿದ್ದಲ್ಲಿ ನೀವು ರಕ್ತದಾನಕ್ಕೆ ಅನರ್ಹರಾಗಿರುತ್ತೀರಿ.

No comments:

Post a Comment