Sunday 25 August 2013

ಕೇಳಲೇಬಾರದ ಕೆಲವು ಪ್ರಶ್ನೆಗಳು

ಪ್ರತಿ ಪ್ರಶ್ನೆಗಳಿಗೂ ಅದರದ್ದೇ ಆದ ಉತ್ತರಗಳಿರುತ್ತ್ತವೆ. ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಿರದಿದ್ದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬಾರದು ಏಕೆಂದರೆ ಆ ಪ್ರಶ್ನೆಗಳೇ ಹಾಗೆ ಸಂಬಂಧಗಳನ್ನು ಛಿದ್ರಮಾಡಿಬಿಡುತ್ತವೆ. ಅವರಸರಕ್ಕೆ ಬಿದ್ದು ಆ ಪ್ರಶ್ನೆಗಳನ್ನು ಕೆಣಕಿದರೆ ಅದರ ಪರಿಣಾಮ ಹೇಗೆ ಇರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಅದರಲ್ಲೂ ಗರ್ಲ್‌ಫ್ರೆಂಡ್ ಜೊತೆಯಿದ್ದಾಗ ಕೆಲವು ಪ್ರಶ್ನೆಗಳನ್ನು ಕೇಳದಿರುವುದೇ ಒಳ್ಳೆಯದು ಏಕೆಂದರೆ ಆ ಪ್ರಶ್ನೆಗಳು ನಿಮ್ಮ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸಿಬಿಡುತ್ತವೆ.  ನೀವು ಕೇಳುವ ಪ್ರಶ್ನೆಗಳೇ ನಿಮ್ಮ ತನವನ್ನು ಪ್ರದರ್ಶಿಸಿಬಿಡುತ್ತವೆ. ಆ ಕ್ಷಣದಲ್ಲಿ ಜಾಣತನ ಮೆರೆದು ಮಾತನಾಡುವ ವಿಷಯವನ್ನೇ ಬದಲಿಸಿ ಆ ಪ್ರಶ್ನೆಗಳ ಗೋಜಿಗೆ ಹೋಗದಿರುವುದೇ ಜಾಣತನ.  ಮೃದು ಮಾತಿನಲ್ಲಿ ಅಥವಾ ನೀವು ಕೇಳಬೇಕೆಂದಿರುವ ಪ್ರಶ್ನೆಯನ್ನು ಜಾಣತನದಿಂದ ಪರೋಕ್ಷವಾಗಿ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿ. ಆದರೆ ನೇರವಾಗಿ ಆ ಪ್ರಶ್ನೆಗಳಿಗೆ ಕೈಹಾಕಿದಲ್ಲಿ ಜೇನಿನ ಗೂಡಿಗೆ ಕೈಹಾಕಿದ ಅನುಭವ ಆ ಕ್ಷಣದಲ್ಲಿ ನಿಮಗೆ ಖಂಡಿತ ಆಗದಿರದು. ಹಾಗಾದರೆ ಆ ಪ್ರಶ್ನೆಗಳು ಯಾವುವು? ಎಂದು ಯೋಚಿಸುತ್ತಿದ್ದೀರಲ್ಲವೇ.. ಮುಂದೆ ಓದಿ.
ನೀವು ಇಷ್ಟಪಟ್ಟವರು ನಿಮ್ಮೊಟ್ಟಿಗಿದ್ದಾಗ, ಈಗ ಅವರು ನಿಮ್ಮವರು ಎಂದು ಗೊತ್ತಾದ ಮೇಲೆ. ಭವಿಷ್ಯದ ಕನಸುಗಳ ಬಗ್ಗೆ ಯೋಚಿಸಬೇಕೆ ಹೊರತು ಬದುಕಿನ ಪುಸ್ತಕದ ಹಳೆಯ ಪುಟಗಳನ್ನು ಕೆದಕಲು ಪ್ರಯತ್ನಿಸದಿರಿ. ನಿಮ್ಮ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್‌ನ  ಮೊದಲನೇ ಲವರ್ ಬಗ್ಗೆ ಕೇಳಬೇಡಿ. ಅದು ಮುಗಿದು ಹೋದ ಅಧ್ಯಾಯ. ಒಂದು ವೇಳೆ ಆ ಪ್ರಶ್ನೆ ನಿಮ್ಮ  ಮಧ್ಯೆ ಉದ್ಭವಿಸಿದರೆ ಅದನ್ನು ಅಲ್ಲಿಯೇ ಮರೆತುಬಿಡಿ. ಏಕೆಂದರೆ ಆ ಪ್ರಶ್ನೆ ನಿಮ್ಮ  ಸಂತೋಷದ ಕ್ಷಣಗಳನ್ನು ತಿಂದು ಹಾಕುತ್ತದೆ.
ಹಾಗೆಯೇ ಇನ್ನೊಂದು ಪ್ರಶ್ನೆ ಏನೆಂದರೆ ನೀವು ಪ್ರೀತಿಸಿದವರ ಹತ್ತಿರ ಎಂದು ಮೊದಲ ಸೆಕ್ಸ್ ಅನುಭವದ ಬಗ್ಗೆ ಕೇಳದಿರಿ. ಹಾಗೆನಾದರೂ ನೀವು ಕೇಳಿದಲ್ಲಿ ನಿಮ್ಮ ಸಂಬಂಧದ ಮಧ್ಯೆ ಕಂದಕ ಸೃಷ್ಟಿಯಾಗುವುದು ಖಂಡಿತ.  ಮುಜುಗುರವನ್ನುಂಟುಮಾಡುವ ಈ ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳಾಗಿಯೇ ಉಳಿದರೆ ಒಳ್ಳೆಯದು. ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದಲ್ಲಿ ಸಂಬಂಧಗಳನ್ನು ಕಳದೆಕೊಳ್ಳಲು ಸಿದ್ದರಾಗಬೇಕಾಗುತ್ತದೆ.
ಘಟಿಸಿ ಹೋದ ಸಂಗತಿಗಳನ್ನು ಕೆದಕಿ ನಿಮಗೇ ನೀವೇ ಇರುವೆ ಬಿಟ್ಟುಕೊಳ್ಳುವ ಕೆಲಸದ ಬದಲು., ಮುಂದಿನ ಬದುಕಿನ ಬಗ್ಗೆ ಯೋಚಿಸಿ. ನೀವು ಪ್ರೀತಿಸುತ್ತಿರುವ ಉದ್ದೇಶದ ಬಗ್ಗೆ ಯೋಚಿಸಿ. ಅದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಪ್ರೀತಿಗೆ  ಭೂತಕಾಲಕ್ಕಿಂತ ಭವಿಷ್ಯತ್‌ಕಾಲವೇ ಮುಖ್ಯ ಏಕೆಂದರೆ ಅದರ ಆಯಸ್ಸು ಭವಿಷ್ಯದ ಯೋಚನೆಗಳನ್ನು ಅವಲಂಬಿಸಿರುತ್ತೆ..


ವಿಕೃತ ಯೋಚನೆಗಳಿಂದ ಅರ್ಥ ಕಳೆದುಕೊಳ್ಳದಿರಲಿ 'ಪ್ರೀತಿ’

ಪ್ರೀತಿಗೆ ಮತ್ತೊಂದು ಹೆಸರೇ ತ್ಯಾಗ, ಕಾಳಜಿ ಎನ್ನುತ್ತಾರೆ. ಯಾರ ಪ್ರೀತಿಯಲ್ಲಿ ತ್ಯಾಗ, ಕಾಳಜಿ ಹೆಚ್ಚಿರುತ್ತೋ ಅದು ನಿಜವಾದ ಪ್ರೀತಿ ಎಂದೆನಿಸಿಕೊಳ್ಳುತ್ತದೆ.  ನಾವು ಪ್ರೀತಿಸುವವರು ಸದಾ ಕಾಲ ಸುಖವಾಗಿ, ಸಂತೋಷವಾಗಿ ಇರಬೇಕೆಂದು ಬಯಸುತ್ತೇವೆ, ಬಯಸಬೇಕು ಕೂಡ, ಏಕೆಂದರೆ ಅದೇ ನಿಜವಾದ ಪ್ರೀತಿ. ನಿಜವಾದ  ಪ್ರೀತಿಗೆ ಸ್ವಾರ್ಥ ಎಂದರೆ  ಏನೆಂದು ಗೊತ್ತಿಲ್ಲ. ಪ್ರೀತಿಸುವವರೇ ಸರ್ವಸ್ವ, ಅವರ ಸಂತೋಷದಲ್ಲೇ ನಮ್ಮ ಸಂತೋಷವಿದೆ ಎಂದು ಭಾವಿಸುವುದೇ ನಿಜವಾದ ಪ್ರೀತಿ. ಆದರೆ, ಇಲ್ಲಿ ಎಷ್ಟೋ ಜನ ಪ್ರೀತಿ ಮಾಡುತ್ತಾರೆ, ಅವರಲ್ಲಿ ನಿಜವಾಗಿ ಪ್ರೀತಿಸುವವರು ಬೆರಳೆಣಿಕೆಯಷ್ಟು ಮಾತ್ರ. ಕೆಲವರ ಪ್ರೀತಿಯ ಉದ್ದೇಶವೇ ಬೇರೆಯಾಗಿರುತ್ತೆ. ಒಂದಿಷ್ಟು ಜನರು ಹಣಕ್ಕಾಗಿ ಪ್ರೀತಿಸಿದರೆ, ಇನ್ನು ಕೆಲವರು ಕ್ಷಣಿಕ ಸುಖಕ್ಕಾಗಿ ಪ್ರೀತಿಸುತ್ತಾರೆ. ಇವರ ಮಧ್ಯೆ ಪ್ರೀತಿಗಾಗಿ ಪ್ರೀತಿಸು ವವರು ತುಂಬಾ ಕಡಿಮೆ.
ನಿಜವಾದ ಪ್ರೀತಿಗೆ ಇನ್ನೊಂದು ಹೇಸರಿಡಬೇಕೆಂದರೆ ಅದು ’ತ್ಯಾಗ’ ಎಂದರೆ ತಪ್ಪಾಗಲಾರದು. ಹೌದು ಪ್ರೀತಿ ಎಂದಿಗೂ ತ್ಯಾಗದ ಪ್ರತಿರೂಪ. ಪ್ರೀತಿಸುವವರಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ ಕೆಲವರು. ಇನ್ನು ಕೆಲವರು ಪ್ರೀತಿಯ ಹೆಸರಲ್ಲಿ ಪ್ರೀತಿಸಿದವರ ಸರ್ವಸ್ವವನ್ನೂ ಕಿತ್ತುಕೊಳ್ಳುತ್ತಾರೆ. ಹಣ, ವಡವೆ, ಮಾನ, ಪ್ರಾಣ ಎಲ್ಲವನ್ನೂ. ಪ್ರೀತಿ ಎಂದರೆ ಎಂದಿಗೂ ಕೊಡುವುದೇ ಹೊರತು ಬೇಡುವುದಲ್ಲ. 
ಪ್ರೀತಿಯನ್ನು ತ್ಯಾಗಕ್ಕೆ ಹೋಲಿಸಲು ಒಂದು ಕಾರಣವಿದೆ. ಕರುಣೆಯನ್ನೇ ಕಳೆದುಕೊಂಡು ಪ್ರೀತಿಸಿದವರ ಜೀವನವನ್ನೇ ಕತ್ತಲೆಗೆ ತಳ್ಳುವಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ನಾನು ಅವಳನ್ನು ಪ್ರೀತಿಸಿದೆ, ಅವಳು ಇನ್ನೊಬ್ಬನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ನಿರಾಶೆಗೊಂಡು ನಾವೇ ಪ್ರೀತಿಸಿದವರ  ಜೀವನವನ್ನು ಸುಟ್ಟು ಹಾಕುವುದು ಎಷ್ಟು ಸರಿ ಎಂಬುದೇ ನನ್ನ ಪ್ರಶ್ನೆ.
ನಾನು ಮೊದಲೇ ಹೇಳಿದ ಹಾಗೆ ಪ್ರೀತಿ ಕೊಡುವುದೇ ಹೊರತು ಪಡೆಯುವುದಲ್ಲ. ನಾವು ಒಬ್ಬರನ್ನು ಪ್ರೀತಿಸಿದಾಕ್ಷಣ ಅವರೂ ನಮ್ಮನ್ನು ಪ್ರೀತಿಸಬೇಕು ಎಂದು ಬಯಸುವುದು ಮೂರ್ಖತನ, ಹಾಗೆ ಬಯಸುವಾಗ ನಮ್ಮಲ್ಲಿ ಪ್ರೀತಿಯೇ ಇದ್ದರೂ ಅದು ತನ್ನ ಅರ್ಥವನ್ನು ಕಳೆದುಕೊಂಡು ಬಿಡುತ್ತದೆ. ಪ್ರೀತಿಸಿದವರಿಗಾಗಿ ಏನನ್ನಾದರೂ ಮಾಡಲು ನಾವು ತಯಾರಾಗಿರುತ್ತೇವೆ. ಹಾಗೆಂದ ಮಾತ್ರಕ್ಕೆ ಪ್ರೀತಿ ಸಿಗಲಿಲ್ಲವೆಂಬ ಹತಾಶೆಯಲ್ಲಿ ಪ್ರೀತಿಸಿದವರ ಜೀವನವನ್ನು ಕಿತ್ತುಕೊಳ್ಳುವುದು ಎಷ್ಟು ಸರಿ.?
ಪ್ರತಿಯೊಬ್ಬರ ಮನಸ್ಥಿತಿಗಳು ಬೇರೆ ಬೇರೆಯಾಗಿರುತ್ತವೆ. ಅವರವರ ಇಷ್ಟಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಮನಸ್ಸುಗಳನ್ನು  ಮುಗ್ಧ ಮನಸ್ಸುಗಳು ಹಂಬಲಿಸುತ್ತಿರುತ್ತವೆ. ಆ ಮುಗ್ಧ ಮನಸ್ಸು ನಿಮ್ಮಲ್ಲಿಲ್ಲವಾದರೆ ನೀವು ಅವರ ಪ್ರೀತಿಗೆ ಹೇಗೆ ತಾನೇ ಅರ್ಹರಾಗುತ್ತೀರಿ.? ಹಾಗೆಂದು ಪ್ರೀತಿಸುವುದೇ ತಪ್ಪೆಂದುಹೇಳುತ್ತಿಲ್ಲ. ಮನಸ್ಸಿಗೆ ಸಂಬಂಧಿಸಿದ ಪ್ರೀತಿಯನ್ನು ದೈಹಿಕವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆ ಪ್ರೀತಿ ತನಗ್ಯಾರು ಇಷ್ಟವೋ ಅಲ್ಲಿಯೇ ಉಳಿದುಬಿಡುತ್ತೆ ಹೊರತು ಬಲವಂತದಿಂದ ಅದನ್ನು ಪಡೆದುಕೊಳ್ಳುವ ಕೀಳು ಮಟ್ಟದ ಕೆಲಸಕ್ಕೆ ಕೈಹಾಕಬಾರದು.
ಪ್ರೀತಿಸಿದವರು ನಮ್ಮ ಪ್ರೀತಿಯನ್ನು ತಿರಸ್ಕರಿಸಿದಾಗ ಆ ವಿಷಯ ನಮ್ಮನ್ನು ಎಷ್ಟೇ ಚುಚ್ಚಿದರೂ ಸಹಿಸಿಕೊಳ್ಳಲೇಬೇಕು. ನಿರಾಸೆ ತಂದ ಆ ಕ್ಷಣದಲ್ಲಿ    ದು:ಖವಾಗುವುದು ಸಹಜ. ಆದರೆ ಅದೇ ಕ್ಷಣದಲ್ಲಿ ನಿಮ್ಮ ಬುದ್ದಿಯನ್ನು ಕೋಪದ ಕೈಗೆ ಕೊಟ್ಟರೆ. ನೀವು ಪ್ರೀತಿಸಲು ಇದ್ದ ಅರ್ಹತೆಯನ್ನೂ ಆಗ ಕಳೆದುಕೊಂಡುಬಿಡುತ್ತೀರಿ. ಏಕೆಂದರೆ ಬಲವಂತದಿಂದ ಪಡೆದುಕೊಂಡರೆ ಅದು ಎಂದೂ ಪ್ರೀತಿ ಎಂದೆನಿಸುವುದಿಲ್ಲ.  ಹಾಗೆಯೇ ಕೊಪದಲ್ಲಿ ಆಸಿಡ್ ಹಾಕಿ ಮುದ್ದು ಮುಖಗಳನ್ನು ವಿರೂಪಗೊಳಿಸುವ ವಿಕೃತ ಮನಸ್ಸಿನ ಪ್ರೀತಿಯನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ.  ಹೀಗೆ ದೇಶದಲ್ಲಿ ಅದೆಷ್ಟೋ ಮುದ್ದು ಮುಖಗಳು ವಿಕೃತ ಪ್ರೀತಿಗೆ ಬಲಿಯಾಗಿ ತಮ್ಮ ಮುದ್ದು ಮುಖಗಳೊಂದಿಗೆ ಸುಂದರ ಕನಸುಗಳನ್ನು ಕಟ್ಟಿಕೊಂಡ ಜೀವನವನ್ನೇ ಸುಟ್ಟುಕೊಂಡು ನಳುತ್ತಿವೆ. ಆ ನರಳಾಟದಲ್ಲಿನ ನೋವು ಪ್ರೀತಿಸಿದ ಮನಸ್ಸುಗಳಿಗೆ ತಟ್ಟುತ್ತಿಲ್ಲವೇ? ಪ್ರೀತಿಯನ್ನು ರಕ್ಷಿಸುವವರೇ ರಾಕ್ಷಸರಾದರೆ ಪ್ರೀತಿಗೆ ರಕ್ಷಣೆ ಇನ್ನೆಲ್ಲಿಂದ ಸಾಧ್ಯ. ಆದ್ದರಿಂದ ಒಲಿದು ಬಂದ ಪ್ರೀತಿಗೆ ಬೆಲೆ ಕೊಡಿ. ಪ್ರೀತಿ ಸಿಗದೇ ಇದ್ದ ಕ್ಷಣದಲ್ಲಿ ನೀವು ನಡೆದುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಆ ಕ್ಷಣದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ  ಅಮಾಯಕ ಮನಸ್ಸುಗಳನ್ನು ಸುಟ್ಟುಹಾಕದಂತಿರಲಿ. ಸ್ವಚ್ಚವಾದ ಪ್ರೀತಿಯನ್ನು ನೀವು ಬಯಸಿದಲ್ಲಿ ತುಚ್ಛ ಕೃತ್ಯಗಳ ಬಗೆಗಿನ ಆಲೋಚನೆಯನ್ನು ಬಿಟ್ಟು ಒಮ್ಮೆ ಒಳ್ಳೆಯ ಪ್ರೇಮಿಯಾಗಿ ಯೋಚಿಸಿ. ಹಾಗೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ ಬಲವಂತದಿಂದ ಏನನ್ನಾದರೂ ಪಡೆದುಕೊಳ್ಳಬಹುದು ಆದರೆ ಶುದ್ಧ ಪ್ರೀತಿಯೊಂದನ್ನು ಬಿಟ್ಟು.

ಬದಲಾಗದಿದ್ದರೆ ಬದುಕು ಬಲು ಭಾರ ....

ಇಂದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದಿನನಿತ್ಯದ ಅವಶ್ಯಕ ವಸ್ತುಗಳ ಬೆಲೆ ನಮ್ಮ ಆಸೆಗಳನ್ನು ಸಂಕುಚಿತಗೊಳಿಸುತ್ತವೆ. ಅನಿವಾರ್ಯವಾಗಿ ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕಾಗಿದೆ. ನಗರ ಪ್ರದೇಶದವರಂತೂ ಬದುಕಲು ಜೇಬಲ್ಲಿ ದುಡ್ಡಿಟ್ಟುಕೊಂಡಿರಲೇಬೇಕಾದ ಸ್ಥಿತಿ ಎದುರಾಗಿದೆ. ಖರ್ಚುಗಳಿಗೆ ಕಡಿವಾಣ ಹಾಕಿ, ಆಸೆಗಳನ್ನೆಲ್ಲ ಮೂಟೆಕಟ್ಟಿಟ್ಟು ಜೀವನಕ್ಕಾಗಿ ಅಲ್ಲದಿದ್ದರೂ ಜೀವ ಉಳಿಸಿಕೊಳ್ಳುವುದಕ್ಕಾದರೂ ಬದುಕಲೇ ಬೇಕಲ್ಲವೇ? ಅದಕ್ಕಾಗಿಯೇ ನಾವು ಬದಲಾಗಲೇಬೇಕು, ಆದರೆ ಹೇಗೆ? ಓದಿ ಈ ಸ್ಟೋರಿ..

ಇದು ಕಾಸ್ಟ್ಲಿ ಯುಗ, ತಿನ್ನೋ ಫುಡ್‌ನಿಂದ ಮಲಗೋ ಬೆಡ್‌ವರೆಗೂ ದುಡ್ಡಿಂದಲೇ ನಡೆಯೋದು. ಪ್ರತಿ ಕ್ಷಣಕ್ಕೊಮ್ಮೆ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಶ್ರೀ ಸಾಮಾನ್ಯ ಬದುಕುವುದು ಬಲು ಕಠಿಣವಾಗುತ್ತಿದೆ. ಎಷ್ಟು ಸಂಪಾದಿಸಿದರೂ ಸಾಕಾಗುತ್ತಿಲ್ಲ. ಆದರೂ ಬದುಕಲೇಬೇಕು. ಅದಕ್ಕೆ ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿಕೊಂಡು ಇದ್ದುದರಲ್ಲೇ ಹೇಗೆ ಬದುಕಬೇಕೆಂದು ಯೋಚಿಸುವ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅದು ಹೇಗೆ? ಯಾವರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂಬುದರ ಸಂಕ್ಷಿಪ್ತ ಅವಲೋಕನ ಇಲ್ಲಿದೆ. ನಮ್ಮ ಸಂಪಾದನೆಗೂ, ನಾವು ಮಾಡುತ್ತಿರುವ ವೆಚ್ಚಕ್ಕೂ ನಡುವೆ ಒಂದು ಗೆರೆ ಎಳೆದುಕೊಂಡು ಬದುಕಬೇಕಾದ ಹೀನಾಯ ಸ್ಥತಿಗೆ ಈಗಾಗಲೇ ನಾವು ತಲುಪಿದ್ದೇವೆ.   ವೃದ್ದಾಪ್ಯದಲ್ಲಿ ದುಡ್ಡಿಲ್ಲದೆ ಹೋದರೆ ಬರುವ ತೊಂದರೆಗಳನ್ನು   ಪ್ರಾಯದಲ್ಲೇ ಊಹಿಸಿಕೊಂಡಿರಬೇಕು. ಹಾಗೆಂದು ಯೌವನ ಕಾಲಗಳನ್ನು ಕಷ್ಟಗಳಿಂದ, ನೋವುಗಳಿಂದ ತುಂಬಬಾರದು. ಹಾಗೆಂದು ಮನಸ್ಸು ಬೇಡಿದ್ದಕ್ಕೆಲ್ಲ್ಲಾ ಹಣವನ್ನು ಹರಿಬಿಡಬಾರದು.  ಯೌವನದಲ್ಲಿ ಸಂಪಾದಿಸಿದ ೧೦ ರೂ.ಹಣ ಮುಪ್ಪಿನಲ್ಲಿ ೧೦೦ ರೂ. ನಷ್ಟು ಬೆಲೆ ಬಾಳುತ್ತದೆ.
ಕಳೆದ ಎರಡು ವರ್ಷಗಳಲ್ಲಿ ಪ್ರಪಂಚದ  ಆರ್ಥಿಕ ವ್ಯವಸ್ಥೆಯಲ್ಲಿ ಮುಖ್ಯವಾಗಿ ಭಾರತದ ಆರ್ಥಿಕ  ಪದ್ದತಿಯಲ್ಲಿ  ಬಹಳಷ್ಟು ವ್ಯತ್ಯಾಸ ಬಂದಿದೆ. ರೂಪಾಯಿ ತನ್ನ ಮೌಲ್ಯವನ್ನೇ ಕಳೆದುಕೊಳ್ಳುತ್ತಿದೆ. ಎಲ್ಲಾದರೂ ದುಡ್ಡು ಡಿಪಾಸಿಟ್ ಮಾಡಿದರೆ ಹಿಂದೆ ಶೇ. ೧೨ ರಷ್ಟು ಬಡ್ಡಿ ಕೊಡುತ್ತಿದ್ದರು. ’ಬ್ಯಾಂಕಿನಲ್ಲಿ ದುಡ್ಡಿಟ್ಟು ನಿಶ್ಚಿಂತೆಯಿಂದ ಬದುಕಬಹುದು’ ಎಂಬ ನಾಣ್ಣುಡಿ ಇತ್ತು. ಈಗ ಆ ನಿಶ್ಚಿಂತತೆ ಇಲ್ಲ. ಶೇಕಡ ೭ ರಿಂದ ೮ ರಷ್ಟು ಬಡ್ಡಿ ಸಿಕ್ಕರೆ ಅದೇ ಹೆಚ್ಚು. ಅದೇ ರೀತಿ  ಆ ದಿನಗಳಲ್ಲಿ  ಮನೆ ಕಟ್ಟುವುದಕ್ಕೆ ೨೦,೦೦೦ ಬೇಕೆಂದರೆ ನೂರಾರು ಬಾರಿ ಅಲೆದಾಡಬೇಕಿತ್ತು.  ಈಗ ರಸ್ತೆಗಳ ಬದಿಗಳಲ್ಲಿ  ಶಾಮಿಯಾನಗಳನ್ನು  ಹಾಕಿ ಸಾಲ  ಹಂಚುತ್ತಿದ್ದಾರೆ. ಮತ್ತೊಂದು ಕಡೆ ಪೆಟ್ರೋಲ್ ಬೆಲೆ ದಿನದಿನಕ್ಕೆ  ದುಬಾರಿಯಾಗುತ್ತಿದೆ. ತರಕಾರಿ ಬೆಲೆಯಂತೂ ನೆನಸಿಕೊಂಡರೆ ಕೊಳ್ಳೊದಕ್ಕಿಂತ ನೋಡಿ ಖುಷಿ ಪಡೋದು ಎಷ್ಟೋ ವಾಸಿ ಅಂದೆನಿಸುತ್ತಿದೆ.
ಹೀಗೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ  ಗಳಿಕೆ-ಖರ್ಚು-ಉಳಿತಾಯಗಳ ನಡುವೆ ಸೂಕ್ತ ತಿಳುವಳಿಕೆ  ಇಲ್ಲದೆ  ಹೋದರೆ  ಜೀವನ ಸಂಕಷ್ಟಕ್ಕೆ  ಒಳಗಾಗುತ್ತದೆ.  ಒಂದು ಕಾಲಕ್ಕೆ ದುಡ್ಡು ಸಂಪಾದನೆ ಮಾಡಿ ಆಸ್ತಿ ಕೊಳ್ಳುತ್ತಿದ್ದರೆ ,  ಸದ್ಯಕ್ಕೆ ಆಸ್ತಿಗಳನ್ನು ಕೊಂಡು ಸಾಲವನ್ನು ತೀರಿಸುತ್ತಿದ್ದಾರೆ. ಮತ್ತೊಂದು ರೀತಿಯಲ್ಲಿ  ಹೇಳಬೇಕೆಂದರೆ. ಸ್ಕೂಟರ್‌ನಿಂದ ಗ್ರೈಂಡರ್‌ವರೆಗೂ , ಮನೆಯಿಂದ ಸೋಫಾಸೆಟ್‌ವರೆಗೂ  ಮುಂಚಿತವಾಗಿ ಕೊಂಡುಕೊಳ್ಳಬಹುದು. ಜೀವನ ಪರ್ಯಂತ ಆ ಸಾಲವನ್ನು ತೀರಿಸುತ್ತಾ ಇರಬಹುದು. ದುಡ್ಡಿನಿಂದ ಏನು ಮಾಡಬೇಕು? ಹಣದೊಂದಿಗೆ ಗಳಿಕೆ-ಖರ್ಚು-ಉಳಿತಾಯ-ಹೂಡಿಕೆ ಬೆಸೆದುಕೊಂಡಿವೆ ಎಂದು ಮೈಖೆಲ್ ಗಿಬ್ಬೆ ಎಂಬ  ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಇಷ್ಟೇನಾ? ಇದನ್ನು ಕೇಳಿ ನಿಮಗೆ ಇಷ್ಟು ಸುಲಭವೇ? ಇಷ್ಟು ಸಣ್ಣವಿಷಯ ಹೇಳುವುದಕ್ಕೆ  ಅಷ್ಟು ದೊಡ್ಡ ಅರ್ಥಶಾಸ್ತ್ರಜ್ಞ ಬೇಕಾ? ಎಂದೆನಿಸಬಹುದು. ಆದರೆ ಮುಂದಿನ ಪ್ರಶ್ನೆಗಳು ಆರ್ಥಿಕ ಸಮಸ್ಯೆ ಎಷ್ಟು ಕ್ಲಿಷ್ಟವಾದುದು ಎಂಬುದನ್ನು ತಿಳಿಸುತ್ತದೆ. ಎಷ್ಟು ಸಂಪಾದಿಸಬೇಕು.?, ಅದರಲ್ಲಿ ಎಷ್ಟು ಖರ್ಚು ಮಾಡಬೇಕು?, ಎಷ್ಟು ಉಳಿತಾಯ ಮಾಡಬೇಕು.?, ಉಳಿತಾಯ ಮಾಡಿದ್ದನ್ನು ಎಲ್ಲಿಟ್ಟರೆ ಲಾಭ?, ಉಳಿದದ್ದನ್ನು ಯಾರಿಗೆ ಕೊಡಬೇಕು? ಎಂಬ ಪ್ರಶ್ನೆಗಳನ್ನು  ಸರಿಯಾಗಿ ಬ್ಯಾಲೆನ್ಸ್ ಮಾಡಿದಲ್ಲಿ ಯೋಜಿಸಿದ ವ್ಯಕ್ತಿ ಸಾಮಾನ್ಯವಾಗಿ ಸಾಲ ಮಾಡುವುದಿಲ್ಲ. ಮಾಡಿದರೂ ವ್ಯವಸ್ಥಿತವಾಗಿ ಯೋಜನೆಯನ್ನು ರೂಪಿಸಿ ತೀರಿಸುತ್ತಾನೆ. 
ಎಷ್ಟು  ಸಂಪಾದನೆ ಮಾಡಬೇಕು ಅನ್ನೋದು ಮೊದಲ ಪ್ರಶ್ನೆ. ಉದ್ಯೋಗದ ಮೂಲಕವಾಗಲಿ, ವೃತ್ತಿ ಮೂಲಕವಾಗಲಿ, ವ್ಯಾಪಾರದಿಂದಾಗಲಿ, ಆಸ್ತಿಗಳ ಮೇಲೆ ಬರುವ ವರಮಾನದ ರೂಪದಲ್ಲಾಗಲಿ, ಮನುಷ್ಯ ತನ್ನ ತಿಂಗಳ ಆದಾಯವನ್ನು ಗಳಿಸುತ್ತಿರುತ್ತಾನೆ. ಇಲ್ಲಿ ನಾಲ್ಕು ರೀತಿಯ ಜನರಿರುತ್ತಾರೆ. ಕೆಲಸಕ್ಕಾಗಿಯೇ ಇಡೀ ಸಮಯವನ್ನು ಕಳೆದು ತನ್ನನ್ನು, ತನ್ನ ಕುಟುಂಬವನ್ನು, ಆತ್ಮೀಯರನ್ನು  ಕಳೆದು ಕೊಳ್ಳೋರು ಒಂದು ವಿಧ. ಇವರಿಗೆ ಕೆಲಸವೇ ಜೀವನವಾಗಿರುತ್ತದೆ. ಎರಡನೇ ರೀತಿ ಇದಕ್ಕೆ ವಿರುದ್ದ. ಕೆಲಸಕ್ಕಾಗಿ ಕಡಿಮೆ ಸಮಯ ವಿನಿಯೋಗಿಸುತ್ತಾ  ಜೀವನವನ್ನು ಹಗುರವಾಗಿ ಕಳೆಯುತ್ತಾ ತಮ್ಮವರ ಸಣ್ಣಪುಟ್ಟ ಆರ್ಥಿಕ ಅಗತ್ಯಗಳನ್ನು ಕೂಡಾ ಸರಿಯಾಗಿ ಈಡೇರಿಸಲಾಗದೆ ಹೋಗುತ್ತಿರುತ್ತಾರೆ. ಮೂರನೇ ವಿಧ ಬೇಕಿದ್ದಷ್ಟೇ ಕೆಲಸ ಮಾಡುತ್ತಾರೆ. ಆದರೆ ಬಿಡುವಿನ ಅವಧಿಯಲ್ಲೂ ಮನೆಯಲ್ಲಿ ಇರುವುದಿಲ್ಲ.  ನಾಲ್ಕನೇ ರೀತಿಯ ವ್ಯಕ್ತಿಗಳು ಕೆಲಸಕ್ಕೆ, ಮನೆಗೆ ,ದುಡ್ಡು ಸಂಪಾದನೆಗೆ ಆಹ್ಲಾದಕ್ಕೆ ಸರಿಯಾದ ಸೇತುವೆ ಹಾಕುತ್ತಾರೆ. ಆ ಕಲೆಯನ್ನೇ ಕಲಿಯಬೇಕು.
ಇನ್ನು ಖರ್ಚಿನ ವಿಷಯಕ್ಕೆ ಬಂದರೆ, ಬಂದ ಆದಾಯದಲ್ಲಿ ಎಷ್ಟು ಖರ್ಚು ಮಾಡಬೇಕು? ಎಂಬುದು ಮೊದಲ ಪ್ರಶ್ನೆಯಾದರೆ ’ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು? ಎಂಬುದು ಅದಕ್ಕಿಂತ ಮುಖ್ಯವಾದ ಪ್ರಶ್ನೆ.  ಕೆಲವರಿಗೆ ಯೌವನ ಕಾಲದಲ್ಲಿ ಬಂದುದನ್ನೆಲ್ಲ  ಅನುಭವಿಸಬೇಕೆಂದಿರುತ್ತಾರೆ. ಭವಿಷ್ಯತ್ತಿನಲ್ಲಿ  ಬರಲಿರುವ  ತೊಂದರೆಗಳ  ಕುರಿತಾದ ಆಲೋಚನೆ ಇರುವುದಿಲ್ಲ. ಇದ್ದರೂ ’ಈಗ ಅನುಭವಿಸದೆ ಹೋದರೆ ಇನ್ಯಾವಾಗ ಅನುಭವಿಸುತ್ತೇವೆ? ಎಂಬ ಆಲೋಚನೆ ಪ್ರಾಬಲ್ಯ ಮೆರೆಯುತ್ತದೆ.  ಅನಾರೋಗ್ಯ, ಇತರೆ  ಖರ್ಚುಗಳು ಬೆಳೆದು, ಸಂಪಾದನೆ ಕಡಿಮೆಯಾಗಿ  ಹೋದರೆ ಅದರ ಪರಿಣಾಮವೇನೆಂಬುದು ಆಗ ಗೊತ್ತಾಗುತ್ತದೆ.  ಹಾಗೆಂದು ಸಂಪಾದನೆ ಆರಂಭವಾದ ಕಾಲದಿಂದ  ಆಸೆಗಳನ್ನೆಲ್ಲಾ ಬದಿಗಿಟ್ಟು ಬದುಕಬೇಕೆಂದಿಲ್ಲ. ಸಂಪಾದನೆ ಮಾಡಿದ್ದಕ್ಕಿಂತ ಕಡಿಮೆ ಖರ್ಚು ಮಾಡಿ. ಇದು ಜೀವನದಲ್ಲಿ ಆರ್ಥಿಕವಾಗಿ ಮೇಲೆ ಬರುವುದಕ್ಕೆ  ಎಲ್ಲಕ್ಕಿಂತ  ಮುಖ್ಯ ನಿಯಮ.
ಖರ್ಚು ಮಾಡುವಾಗ ಉಳಿತಾಯದ ಕಡೆ ಗಮನಹರಿಸದಿದ್ದರೆ ಈ ಕ್ಷಣದಲ್ಲಿ ನೀವು ಖರ್ಚು ಮಾಡಿ ಪಟ್ಟ ಖುಷಿ ಮುಂದೊಂದು ದಿನ ದುಃಖವಾಗಿ ಬದಲಾಗುತ್ತದೆ. ವರಮಾನದಲ್ಲಿ ಎಷ್ಟು ಪರ್ಸೆಂಟ್ ಉಳಿಸಬೇಕೆನ್ನುವುದು ಮುಖ್ಯ ಅಂಶ. ಬೇಸಿಗೆ ರಜೆಯ ವಿಹಾರ ಯಾತ್ರೆಗಾಗಿ ಮಾಡುವ ಉಳಿತಾಯ  ಅಲ್ಪಾವಧಿ ಉಳಿತಾಯ, ಭವಿಷ್ಯತ್ತಿನಲ್ಲಿ  ವರಮಾನಕ್ಕಾಗಿ, ಮುನ್ನೆಚ್ಚರಿಕೆಗೆ ಮಾಡುವ ಎಲ್‌ಐಸಿ  ವಿಮೆ, ಬಾಂಡ್ಸ್  ಷೇರುಗಳು ಮುಂತಾದವುಗಳು ಧೀರ್ಘಕಾಲಿಕ ಉಳಿತಾಯ. ಇನ್ನೊಂದು ಅರ್ಥದಲ್ಲಿ ಉಳಿತಾಯವನ್ನು ಮಾಡುವ ಸುಲಭ ಉಪಾಯವೇನೆಂದರೆ ಹೆಚ್ಚು ಹೆಚ್ಚು ಸಂಬಳ ಬೇಕೆಂದು ಬಯಸುವ ಬದಲು ಬರುವ ಸಂಬಳದಲ್ಲಿ ಬದುಕುವುದು ಹೇಗೆ ಎಂಬುದನ್ನು ಆಲೋಚಿಸಿಕೊಳ್ಳಬೇಕು. ಏಕೆಂದರೆ ಸಂಬಳ ಹೆಚ್ಚಾದಾದಷ್ಟೂ ಖರ್ಚುಗಳೂ ಹೆಚ್ಚಾಗುತ್ತಿರುತ್ತವೆ. ಇದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸತ್ಯ. ಏಕೆಂದರೆ ಸಂಬಳಕ್ಕೆ ತಕ್ಕ ಹಾಗೆ ಮನಃಸ್ಥತಿ ಬದಲಾಗುತ್ತಿರುತ್ತದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯೋಚಿಸುವುದಾದರೆ ಉಳಿತಾಯ ಮಾಡುವುದು ದೊಡ್ಡ ವಿಷಯವಲ್ಲ. ಹೊಟ್ಟೆ ಬಟ್ಟೆ ಕಟ್ಟಿ ಕೂಡಿಡುವುದಕ್ಕೆ ನಿಜವಾದ ಅರ್ಥ ಸಿಗಬೇಕೆಂದರೆ ಕೂಡಿಟ್ಟ ಹಣವನ್ನು ಎಲ್ಲಿ, ಹೇಗೆ ಹೂಡಿಕೆ ಮಾಡಬೇಕು ಎಂಬದನ್ನು ತಿಳಿದುಕೊಂಡು ಉಳಿಸಿದ ಹಣವನ್ನು ಬೇಳಸಿದಾಗ ಮಾತ್ರ. ಇಲ್ಲಿ ಎಡವಿದರೆ ಜೀವನದಲ್ಲಿ ಪಟ್ಟ ಅಷ್ಟೂ ಕಷ್ಟಗಳು ವ್ಯರ್ಥವಾದಂತೆ.  ಉಳಿಸಿದ ದುಡ್ಡನ್ನು ಮನೆ, ಹೊಲ, ಬ್ಯಾಂಕ್, ಷೇರು ಮುಂತಾದವುಗಳಲ್ಲಿ ಎಲ್ಲಾದರೂ ಬಂಡವಾಳವನ್ನಾಗಿ ಹೂಡಬೇಕು. ಬಂಡವಾಳ ಹೂಡಿಕೆಗೆ ತಜ್ಞರ ಸಲಹೆ ಪಡೆಯಬೇಕು.
ಜೀವನದಲ್ಲಿ ಮೇಲಿನ ಎಲ್ಲಾ ಪ್ರಶ್ನೆಗಳನ್ನು ದಾಟಿ ಬಂದಮೇಲೆ ಮಾನವೀಯತೆ ಎಂಬುದನ್ನು ಎಂದೂ ಮರೆಯಬಾರದು. ಜೀವನದ ಅಂತಿಮದಲ್ಲಿ ಉಳಿದ ಹಣವನ್ನು ಏನು ಮಾಡಬೇಕು? ಕೆಲವರಿಗೆ ಇದು ಜಟಿಲ ಪ್ರಶ್ನೆ. ವಾರಸುದಾರರಿಗೆ ಕೊಡಬೇಕೆನ್ನುವುದು ಬಹಳ ಜನ ಹೇಳುವ ಉತ್ತರ.  ಸ್ಥಿರಾಸ್ಥಿಗಳು ವಾರಸುದಾರರಿಗೆ ಬಿಟ್ಟು ಚರಾಸ್ತಿಗಳನ್ನು ಅನುಭವಿಸಬೇಕೆನ್ನುವುದು ಕೆಲವರ ಅಭಿಪ್ರಾಯ . ವರಮಾನದಲ್ಲಿ  ಒಂದಿಷ್ಟು ದಾನ  ಧರ್ಮಗಳಿಗೆ, ಬಡವಿದ್ಯಾರ್ಥಿಗಳಿಗೆ   ಖರ್ಚು  ಮಾಡುವುದನ್ನು ಕಲಿತರೆ,  ಒಂದು ರೀತಿಯ ತೃಪ್ತಿ ಉಂಟಾಗುತ್ತದೆ. ಮನುಷ್ಯನಾದವನು ಮನುಷ್ಯರಿಗಾಗಿ ಮಾಡುವ ಒಂದು ಸಣ್ಣ ಉಪಕಾರವನ್ನು ಜೀವನದ ಲೆಕ್ಕಾಚಾರದಲ್ಲಿ ಅಳವಡಿಸಿಕೊಳ್ಳಲೇಬೇಕು. ಅದೇ ಮಾನವೀಯತೆ. ಆಗ ಮಾತ್ರ ಮಾನವನಾಗಿ ಜನ್ಮ ತಾಳಿದ್ದಕ್ಕೂ ಸಾರ್ಥಕವಾಗುತ್ತದೆ.


ಅರ್ಥವಿಲ್ಲದ ವ್ಯರ್ಥ ವ್ಯಸನಗಳು
ಕೆಲವರಿಗೆ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳದೇ ಹೋದರೆ ನಿದ್ರೆ ಬರುವುದಿಲ್ಲ. ಗುಟ್ಕಾ, ಪಾನ್‌ಪರಾಗ್, ಕುಡಿತ, ಇಸ್ಪೀಟ್, ಸಿಗರೇಟ್, ರೇಸ್ ಮುಂತಾದವುಗಳೆಲ್ಲಾ ಇನ್ನಷ್ಟು ಅಪಾಯಕಾರಿ ವ್ಯಸನಗಳು.  ಆದರೆ ನಿರಾಪಾಯಕಾರಿಯಾದ ವ್ಯಸನಗಳು ಕೆಲವು ಇವೆ. ಉಳಿದವರನ್ನು ಅಷ್ಟಾಗಿ ಕಾಡದೆ ಹೋದರೂ, ಹತ್ತಿರದವರಿಗೆ ತೊಂದರೆ ಕೊಡುತ್ತಲೇ ಇರುತ್ತವೆ. ಅವುಳಲ್ಲಿ ಒಂದು ಶಾಪಿಂಗ್. ಅಗತ್ಯವಿದ್ದರೂ, ಇಲ್ಲದೇಹೋದರೂ ಅಗಾಗ್ಗೆ ಶಾಪಿಂಗ್ ಮಾಡದೇ ಹೋದರೆ ಕೆಲವರಿಗೆ ಬದುಕಲಾಗುವುದಿಲ್ಲ. ಕೆಲವರು ಸುಮ್ಮನೆ ನೋಡಿಕೊ ಳ್ಳುವುದಕ್ಕೊಸ್ಕರವೇ ಅಂಗಡಿಗೆ ಹೋಗುತ್ತಾರೆ. ಇದನ್ನು ’ತಿiಟಿಜoತಿ shoಠಿಠಿiಟಿg’ ಎನ್ನುತ್ತಾರೆ. ಮತ್ತೆ ಕೆಲವರು ದುಡ್ಡು ವ್ಯಯಿಸಿ ಅನಗತ್ಯವಾದ ಶಾಪಿಂಗ್ ಮಾಡುತ್ತಾರೆ. ಕೆಲವರು ತಮ್ಮ ಪ್ರತಿಷ್ಠೆಯನ್ನು ಪ್ರದರ್ಶಿಸಲು ಶಾಪಿಂಗ್ ಹೋಗುತ್ತಾರೆ.  ಹೈದ್ರಾಬಾದ್‌ನಲ್ಲಿ ಒಬ್ಬ ಒಂಟಿ ಶ್ರೀಮಂತ ವ್ಯಕ್ತಿ ಸತ್ತಾಗ ಆತನ ಕೊಠಡಿಯಲ್ಲಿ ಸುಮಾರು ೫೦ ಸೂಟುಗಳು, ೨೫ ಜೊತೆ ಬೂಟುಗಳು ಸಿಕ್ಕಿದ್ದವು.   ವಿಚಿತ್ರವೇನೆಂದರೆ ಅವುಳನ್ನೆಲ್ಲ ಒಮ್ಮೆಯೂ ಕೂಡ  ಉಪಯೋಗಿಸಿರಲಿಲ್ಲ.. ಅವುಗಳ ಸೀಲ್ ಕೂಡ ಓಪನ್ ಆಗಿರಲಿಲ್ಲ... 
       ಕೆಲವು ೨೦ ವರ್ಷ ತುಂಬಿದ ಹುಡುಗಿಯರಿಗೆ ಯಾವ ಕಾಯಿಲೆಯೂ ಇರುವುದಿಲ್ಲ. ಆದರೆ ಆರೋಗ್ಯ ವ್ಯಸನದಿಂದ ನರಳುತ್ತಿರುತ್ತಾರೆ. ಆರೋಗ್ಯ ಕುರಿತು ಯಾವ ಪತ್ರಿಕೆಯಲ್ಲಿ ಸಣ್ಣ-ಪುಟ್ಟ ಸಲಹೆಗಳೂ ಬಂದರೂ ಅನುಸರಿಸುತ್ತಾರೆ. ಬೆಳಿಗ್ಗೆ ಎದ್ದೊಡನೆ ಶುಂಠಿ ತಿನ್ನುವುದು, ಎಂಟುಗಂಟೆಗೆ ಮುಖಕ್ಕೆ ಅರಿಶಿನ ಹಚ್ಚಿಕೊಳ್ಳುವುದು, ಕಣ್ಣುಗಳ ಮೇಲೆ ಅರ್ಧಗಂಟೆ ಸೌತೆಕಾಯಿ ಚೂರುಗಳನ್ನು ಇಟ್ಟುಕೊಳ್ಳುವುದು, ಮಧ್ಯಾಹ್ನ ಕ್ಯಾರೆಟ್ ಚೂರುಗಳು, ಅರ್ಧಗಂಟೆ ಕಾಲ ಬಿಸಿನೀರಿನಲ್ಲಿ ಕಾಲುಗಳನ್ನು ಇಳಿಬಿಡುವುದು, ಮೈಗೆ ಕ್ರೀಂ, ತಲೆಗೆ ನಿಂಬೇರಸ ಅಥವಾ ಮೊಟ್ಟೆ, ಸಾಯಂಕಾಲ ನಾಲ್ಕು ಟೊಮ್ಯಾಟೋಹೀಗೆ ಇತಿಮಿತಿಯಿಲ್ಲದೇ ಉಪಯೋಗಿಸುತ್ತಿರುತ್ತಾರೆ. ಯಾವುದೇ ಆದರೂ ಮಿತಿ ಇದ್ದರೆ ಒಳಿತು ಮಿತಿ ಮೀರಿದರೆ ಅದನ್ನು ಅಬ್ಸೆಸಿವ್ ಕಂಪಲ್ಸರಿ ಡಿಸಾರ್ಡರ್ ಎನ್ನುತ್ತಾರೆ. ಹೀಗೆ ಅನಾವಶ್ಯಕವಾಗಿ ವ್ಯಯಿಸುವ ಹಣವನ್ನು ಯಾವುದಾದರೂ ಒಂದೊಳ್ಳೆ ಕಾರ್ಯಕ್ಕೆ ಉಪಯೋಗಿಸಬಹುದಲ್ಲವೇ? ಅರ್ಥವಿಲ್ಲದೆ ವ್ಯರ್ಥವಾಗಿ ವ್ಯಯ ಮಾಡಿದರೆ ನಿಮ್ಮ ಅರ್ಥ ವ್ಯವಸ್ಥೆಯೇ ಹಾಳಾಗುವುದು. ಏನು ಬೇಕೋ, ಎಷ್ಟು ಬೇಕೋ ಅಷ್ಟಕ್ಕೆ    ನಿಮ್ಮ ಶಾಪಿಂಗ್ ಮೀಸಲಾಗಿದ್ದರೆ ಒಳ್ಳೆಯದು.