Sunday 25 August 2013

ಕೇಳಲೇಬಾರದ ಕೆಲವು ಪ್ರಶ್ನೆಗಳು

ಪ್ರತಿ ಪ್ರಶ್ನೆಗಳಿಗೂ ಅದರದ್ದೇ ಆದ ಉತ್ತರಗಳಿರುತ್ತ್ತವೆ. ಆದರೆ ಕೆಲವು ಪ್ರಶ್ನೆಗಳಿಗೆ ಉತ್ತರ ಗೊತ್ತಿರದಿದ್ದರೂ ತಿಳಿದುಕೊಳ್ಳುವ ಪ್ರಯತ್ನ ಮಾಡಬಾರದು ಏಕೆಂದರೆ ಆ ಪ್ರಶ್ನೆಗಳೇ ಹಾಗೆ ಸಂಬಂಧಗಳನ್ನು ಛಿದ್ರಮಾಡಿಬಿಡುತ್ತವೆ. ಅವರಸರಕ್ಕೆ ಬಿದ್ದು ಆ ಪ್ರಶ್ನೆಗಳನ್ನು ಕೆಣಕಿದರೆ ಅದರ ಪರಿಣಾಮ ಹೇಗೆ ಇರಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಅದರಲ್ಲೂ ಗರ್ಲ್‌ಫ್ರೆಂಡ್ ಜೊತೆಯಿದ್ದಾಗ ಕೆಲವು ಪ್ರಶ್ನೆಗಳನ್ನು ಕೇಳದಿರುವುದೇ ಒಳ್ಳೆಯದು ಏಕೆಂದರೆ ಆ ಪ್ರಶ್ನೆಗಳು ನಿಮ್ಮ ವ್ಯಕ್ತಿತ್ವವನ್ನೇ ಪ್ರತಿಬಿಂಬಿಸಿಬಿಡುತ್ತವೆ.  ನೀವು ಕೇಳುವ ಪ್ರಶ್ನೆಗಳೇ ನಿಮ್ಮ ತನವನ್ನು ಪ್ರದರ್ಶಿಸಿಬಿಡುತ್ತವೆ. ಆ ಕ್ಷಣದಲ್ಲಿ ಜಾಣತನ ಮೆರೆದು ಮಾತನಾಡುವ ವಿಷಯವನ್ನೇ ಬದಲಿಸಿ ಆ ಪ್ರಶ್ನೆಗಳ ಗೋಜಿಗೆ ಹೋಗದಿರುವುದೇ ಜಾಣತನ.  ಮೃದು ಮಾತಿನಲ್ಲಿ ಅಥವಾ ನೀವು ಕೇಳಬೇಕೆಂದಿರುವ ಪ್ರಶ್ನೆಯನ್ನು ಜಾಣತನದಿಂದ ಪರೋಕ್ಷವಾಗಿ ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿ. ಆದರೆ ನೇರವಾಗಿ ಆ ಪ್ರಶ್ನೆಗಳಿಗೆ ಕೈಹಾಕಿದಲ್ಲಿ ಜೇನಿನ ಗೂಡಿಗೆ ಕೈಹಾಕಿದ ಅನುಭವ ಆ ಕ್ಷಣದಲ್ಲಿ ನಿಮಗೆ ಖಂಡಿತ ಆಗದಿರದು. ಹಾಗಾದರೆ ಆ ಪ್ರಶ್ನೆಗಳು ಯಾವುವು? ಎಂದು ಯೋಚಿಸುತ್ತಿದ್ದೀರಲ್ಲವೇ.. ಮುಂದೆ ಓದಿ.
ನೀವು ಇಷ್ಟಪಟ್ಟವರು ನಿಮ್ಮೊಟ್ಟಿಗಿದ್ದಾಗ, ಈಗ ಅವರು ನಿಮ್ಮವರು ಎಂದು ಗೊತ್ತಾದ ಮೇಲೆ. ಭವಿಷ್ಯದ ಕನಸುಗಳ ಬಗ್ಗೆ ಯೋಚಿಸಬೇಕೆ ಹೊರತು ಬದುಕಿನ ಪುಸ್ತಕದ ಹಳೆಯ ಪುಟಗಳನ್ನು ಕೆದಕಲು ಪ್ರಯತ್ನಿಸದಿರಿ. ನಿಮ್ಮ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್‌ನ  ಮೊದಲನೇ ಲವರ್ ಬಗ್ಗೆ ಕೇಳಬೇಡಿ. ಅದು ಮುಗಿದು ಹೋದ ಅಧ್ಯಾಯ. ಒಂದು ವೇಳೆ ಆ ಪ್ರಶ್ನೆ ನಿಮ್ಮ  ಮಧ್ಯೆ ಉದ್ಭವಿಸಿದರೆ ಅದನ್ನು ಅಲ್ಲಿಯೇ ಮರೆತುಬಿಡಿ. ಏಕೆಂದರೆ ಆ ಪ್ರಶ್ನೆ ನಿಮ್ಮ  ಸಂತೋಷದ ಕ್ಷಣಗಳನ್ನು ತಿಂದು ಹಾಕುತ್ತದೆ.
ಹಾಗೆಯೇ ಇನ್ನೊಂದು ಪ್ರಶ್ನೆ ಏನೆಂದರೆ ನೀವು ಪ್ರೀತಿಸಿದವರ ಹತ್ತಿರ ಎಂದು ಮೊದಲ ಸೆಕ್ಸ್ ಅನುಭವದ ಬಗ್ಗೆ ಕೇಳದಿರಿ. ಹಾಗೆನಾದರೂ ನೀವು ಕೇಳಿದಲ್ಲಿ ನಿಮ್ಮ ಸಂಬಂಧದ ಮಧ್ಯೆ ಕಂದಕ ಸೃಷ್ಟಿಯಾಗುವುದು ಖಂಡಿತ.  ಮುಜುಗುರವನ್ನುಂಟುಮಾಡುವ ಈ ಪ್ರಶ್ನೆಗಳು ಎಂದಿಗೂ ಪ್ರಶ್ನೆಗಳಾಗಿಯೇ ಉಳಿದರೆ ಒಳ್ಳೆಯದು. ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದಲ್ಲಿ ಸಂಬಂಧಗಳನ್ನು ಕಳದೆಕೊಳ್ಳಲು ಸಿದ್ದರಾಗಬೇಕಾಗುತ್ತದೆ.
ಘಟಿಸಿ ಹೋದ ಸಂಗತಿಗಳನ್ನು ಕೆದಕಿ ನಿಮಗೇ ನೀವೇ ಇರುವೆ ಬಿಟ್ಟುಕೊಳ್ಳುವ ಕೆಲಸದ ಬದಲು., ಮುಂದಿನ ಬದುಕಿನ ಬಗ್ಗೆ ಯೋಚಿಸಿ. ನೀವು ಪ್ರೀತಿಸುತ್ತಿರುವ ಉದ್ದೇಶದ ಬಗ್ಗೆ ಯೋಚಿಸಿ. ಅದು ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಪ್ರೀತಿಗೆ  ಭೂತಕಾಲಕ್ಕಿಂತ ಭವಿಷ್ಯತ್‌ಕಾಲವೇ ಮುಖ್ಯ ಏಕೆಂದರೆ ಅದರ ಆಯಸ್ಸು ಭವಿಷ್ಯದ ಯೋಚನೆಗಳನ್ನು ಅವಲಂಬಿಸಿರುತ್ತೆ..


No comments:

Post a Comment