Monday 19 May 2014

ಕಪ್ಪು ಕಪ್ಪೆಂದು ಜರಿಯದಿರಿ : ಬಣ್ಣದಲ್ಲಿಲ್ಲ ಬದುಕು

 ಇತ್ತೀಚೆಗೆ ಯಾವುದೋ ಒಂದು ಹಳೆಯ ಮ್ಯಾಗಜಿನ್ ಕೈಗೆ ಸಿಕ್ಕಿತೆಂದು ಒದಲು ಶುರುವಿಟ್ಟುಕೊಂಡೆ. ಪುಟಗಳನ್ನು ತಿರುಗಿಸುತ್ತಿರುವಾಗ ಒಬ್ಬ ಕಪ್ಪು ಸುಂದರಿಯ ಫೋಟೋ ಕಣ್ಣಿಗೆ ಬಿತ್ತು ಆ ಫೋಟೋದ ಅಡಿಬರಹವನ್ನು ಓದಿದಾಗ ಗೊತ್ತಾಯಿತು ಅವಳು ಭವನಸುಂದರಿಯಾಗಿ ಆಯ್ಕೆಯಾದವಳು ಎಂದು..! ಇವಳನ್ನು ಭವನಸುಂದರಿಯಾಗಿ ಆಯ್ಕೆ ಮಾಡಿದ ಆ ಮಹಾನುಭಾವರಾರೋ ಎಂದು  ಒಂದು ಕ್ಷಣ ನಗು ಬಂತಾದರೂ ಅವಳ ಕಪ್ಪು ಬಣ್ಣದ ಹಿಂದಿನ ನಾನಾ ಸತ್ಯಗಳು ಅರಿವಿಗೆ ಬಂದವು. ಭುವನ ಸುಂದರಿ ಎಂದ ಮಾತ್ರಕ್ಕೆ ಸೌಂದರ್ಯವತಿಯರಾಗಿರಬೇಕೆಂದೇನಿಲ್ಲ. ಏಕೆಂದರೆ ಇಲ್ಲಿ ಭವನಸುಂದರಿಯರನ್ನು ಆಯ್ಕೆ ಮಾಡುವವರಿಗೆ ಬಾಹ್ಯ ಸೌದರ್ಯವೊಂದೇ ಮಾನದಂಡವಾಗಿರುವುದಿಲ್ಲ. ಅವರ ದೃಷ್ಟಿಯಲ್ಲಿ ಬಾಹ್ಯ ಸೌದರ್ಯಕ್ಕಿಂತ ಮನಸ್ಸಿನ ಸೌಂದರ್ಯ ಕೂಡ ಬಹಳ ಮುಖ್ಯ. ಆ ಕಪ್ಪು ಸುಂದರಿಯನ್ನು ಭವನಸುಂದರಿ  ಆಯ್ಕೆಯಾಗಲು ಸಹಾಯ ಮಾಡಿದ್ದು ಅವಳ ಬಾಹ್ಯ ಸೌದರ್ಯವಷ್ಟೇ ಅಲ್ಲ ಎಂಬುದು ಅರಿವಿಗೆ ಬಂತು. 
 ಹೌದು, ನಾವು ಸಾಮಾನ್ಯವಾಗಿ ಕಪ್ಪಗಿರುವವರನ್ನು ಜರಿಯುತ್ತೇವೆ. ಅದರಲ್ಲೂ ನಾವು ಅಂದರೆ ಭಾರತೀಯರು ಕಪ್ಪಗಿರುವವರನ್ನು ಕಂಡರೆ ಕುಟುಕಲು ಮುಂದಾಗುತ್ತೇವೆ. ಬಣ್ಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಬರಿ ಬಣ್ಣ ಮಾತ್ರವೇ ಸೌದರ್ಯವನ್ನು ನಿರ್ಧರಿಸಿಬಿಡುತ್ತದೆಯೇ ಎಂಬುದೇ ಪ್ರಶ್ನೆ?
ಭಾರತದಲ್ಲಿ ಕಪ್ಪು ಬಣ್ಣದವರನ್ನೇ ಗುರಿಯಾಗಿಟ್ಟುಕೊಂಡು ಉತ್ಪನ್ನಗಳನ್ನು ತಯಾರು ಮಾಡುತ್ತಿರುವ ಕಂಪನಿಗಳಿವೆ. ಕೆಲವೇ ದಿನ/ವಾರಗಳಲ್ಲಿ ಗೌರವರ್ಣ ಪಡೆಯಿರಿ ಎಂದೆಲ್ಲ ಜಾಹಿರಾತು ನೀಡುತ್ತಾ ಕೋಟ್ಯಾಂತರ ರುಪಾಯಿ ಹಣ ಗಳಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣ ಕಪ್ಪು ವರ್ಣದ ಬಗ್ಗೆ ಇರುವ ಕೀಳಿರಿಮೆ ಮನೋಭಾವ. ಭಾರತೀಯರ ಈ ಮನೋಧರ್ಮ ಬಹುರಾಷ್ಟ್ರೀಯ ಕಂಪನಿಗಳ ಹೇರಳ ಸಂಪಾದನೆಗೂ ಅವಕಾಶ ಕೊಟ್ಟಿದೆ. ಇದಕ್ಕೆಲ್ಲ ಮೂಲ ಕಾರಣವಾದ ಕಪ್ಪು ಬಣ್ಣದ ಬಗ್ಗೆ ಕೀಳರಿಮೆ ಸರಿಯೆ..?
  ಕಪ್ಪಾಗಿದ್ದರೆ ಕೊರಗುವ ಮನೋಭಾವ ಪ್ರವೃತ್ತಿಯಿಂದ ತಾವ್ಯಾಕೆ ಹೀಗೆ ಹುಟ್ಟಿದೆವೋ ಎಂಬಷ್ಟು ಕೀಳರಿಮೆ ಕಪ್ಪಗಿರುವ ಹೆಣ್ಣುಮಕ್ಕಳಲ್ಲಿ ಮನೆಮಾಡಿರುತ್ತದೆ. ಇವರಿಗೆ ಹೋಲಿಸಿದರೆ ಕಪ್ಪನೆ ಗಂಡುಗಳಲ್ಲಿ ಇಂಥ ಕೀಳಿರಿಮೆ ಕಡಿಮೆ. ಇದು ಹೆಣ್ಣು-ಗಂಡಿನ ಕುರಿತ ಭಾರತೀಯ ಸಮಾಜದ ಪೂರ್ವಾಗ್ರಹ ಪೀಡಿತ ಭಾವನೆಗೂ ನಿದರ್ಶನ. ಸಾಮಾನ್ಯವಾಗಿ ಹೆಣ್ಣೆತ್ತವರು ಅಂತಿಮವಾಗಿ ಯೋಚಿಸುವುದು, ಆಕೆ ಮದುವೆ ಕುರಿತೆ. ಕಪ್ಪಗಿರುವವಳನ್ನು ಮದುವೆ ಮಾಡಿಕಳುಹಿಸುವುದು ಕಷ್ಟ, ವರದಕ್ಷಿಣೆ ಹೆಚ್ಚು ತೆರಬೇಕು ಎಂಬೆಲ್ಲ ಚಿಂತೆ. ಕಪ್ಪಾಗಿರುವವರು ಚೆನ್ನಾಗಿರುವುದಿಲ್ಲ ಎಂಬಷ್ಟು ಮಟ್ಟಿಗೆ ಪೂರ್ವಾಗ್ರಹಪೀಡಿತ ಮನೋಭಾವ.
ಕಪ್ಪು ಮೈ ಬಣ್ಣ ಎಂದು ಅವಮಾನಕ್ಕೀಡಾಗುವುದು ಹುಡುಗಿಯರೇ..ಹುಡುಗರಿಗೆ ಯಾವ ಮೈ ಬಣ್ಣವಾದರೇನು ಯಾರೂ ಏನೂ ಹೇಳುವುದಿಲ್ಲ. ಸಿನಿಮಾದಲ್ಲಿ ನಾಯಕ ಕಪ್ಪಗಿದ್ರೂ, ನಾಯಕಿ ಬೆಳ್ಳಗಿನ ಸುರ ಸುಂದರಿ. ಜಾಹೀರಾತಿನಲ್ಲೂ ಬಿಳಿ ತೊಗಲಿನದ್ದೇ ಕಾರುಬಾರು. ಮೈ ಬಣ್ಣ ಕಪ್ಪಾಗಿದ್ದರೆ ಯಾರೂ ಮೂಸುವುದಿಲ್ಲ. ಆವಾಗ ಬರುತ್ತದೆ ಕೈಯಲ್ಲಿ ಮಂತ್ರ ದಂಡದಂತೆ ಫೇರ್ ಆ್ಯಂಡ್ ಲವ್ಲೀ ಕ್ರೀಮï. ಹೀಗೆ ಕಪ್ಪು ಬಣ್ಣವನ್ನು ಗೌರವರ್ಣವಾಗಿಸಲು ಎಷ್ಟೊಂದು ಕ್ರೀಮುಗಳು, ಲೋಷನ್‍ಗಳು! ಅಂತೂ ಬೆಳ್ಳಗಿದ್ದರೆ ಮಾತ್ರ ಸುಂದರಿ ಎಂಬ ಭಾವನೆ ಎಲ್ಲೆಡೆಯೂ ಹಾಸುಹೊಕ್ಕಾಗಿದೆ. ಜಾಹೀರಾತುಗಳಲ್ಲಿ ಬಿಳಿ ಮೈಗೆ ಹೆಚ್ಚು ಪ್ರಾಶಸ್ತ್ಯ ಕೊಡುವಂತೆ ಸಿನಿಮಾದಲ್ಲಿಯೂ ಬಿಳಿಯರದ್ದೇ ಸಾಮ್ರಾಜ್ಯ. ಅಂದ ಮಾತ್ರಕ್ಕೆ ಬಿಪಾಶಾ, ಕಾಜೋಲï, ನಂದಿತಾ ದಾಸ್, ರಾಣಿ ಮುಖರ್ಜಿ ಮೊದಲಾದವರನ್ನು ಕೃಷ್ಣ ಸುಂದರಿಯರು ಎಂದು ಹೇಳಲಾಗುತ್ತಿದ್ದರೂ ಸಿನಿಮಾದಲ್ಲಿ ನೋಡಿದರೆ ಅವರು ಬೆಳ್ಳಕ್ಕಿಗಳಂತೆ ಕಾಣುತ್ತಾರೆ. ಎಲ್ಲವೂ ಮೇಕಪ್ ಮಹಿಮೆ ಅಷ್ಟೆ.

ಆದರೆ ಒಂದು ಮಾತು. ಹಸು ಕಪ್ಪಾದರೆ ಹಾಲೂ ಕಪ್ಪಾ? ಎಂದು ಕೇಳುವಂತೆ ಹೆಣ್ಣು ಕಪ್ಪಾಗಿದ್ರೆ ಅವಳ ಪ್ರೀತಿಯೂ ಕಪ್ಪಾ? ಕಪ್ಪು ಹುಡುಗಿಗೂ ಎಲ್ಲರಂತೆ ಕನಸುಗಳಿವೆ, ಪ್ರೀತಿಸುವ ಹೃದಯವಿದೆ, ತಾಳ್ಮೆಯ ಮನಸ್ಸು ಇದೆ ಎಂಬುದನ್ನು ಗಂಡಸರು ತಿಳಿದುಕೊಳ್ಳುವುದಿಲ್ಲ ಯಾಕೆ? ಆದಾಗ್ಯೂ, ದಕ್ಷಿಣ ಭಾರತದ ಜನರೆಲ್ಲರೂ ಕಪ್ಪಗಿರುವವರೇ.. ವಿದೇಶಿಗಳ ದೃಷ್ಟಿಯಲ್ಲಿ ಎಲ್ಲಾ ಭಾರತೀಯರೂ ಕರಿಯರೇ.. ಇಂತಿರುವಾಗ ನಮ್ಮೂರಿನ ಗಂಡಸರಿಗೆ ಬೆಳ್ಳಗಿನ ಹುಡುಗಿಯೇ ಬೇಕು. ಹುಡುಗಿ ಸ್ವಭಾವ ಹೇಗಿದ್ದರೂ ಪರ್ವಾಗಿಲ್ಲ, ಕಾಣಲು ಬೆಳ್ಳಗೆ ಸುಂದರಿಯಾಗಿದ್ದರೆ ಸಾಕು!. ಎಲ್ಲರ ಮುಂದೆ ಎದೆ ಸೆಟೆದು ನಿಂತು ನೋಡಿದಿರಾ.. ನನ್ನ ಹುಡ್ಗಿ ಎಷ್ಟು ಚಂದ ಇದ್ದಾಳೆ! ಎಂಬ ಗರ್ವದಲ್ಲಿ ಬೀಗಬೇಕು. ಎಲ್ಲಾ ಗಂಡಸರು ಒಂದೇ ತರಾ ಎನ್ನುವ ಅಭಿಪ್ರಾಯ ನನಗಿಲ್ಲ. ಕೆಲವೊಬ್ಬರು ಹೆಣ್ಣಿನ ಆಂತರಿಕ ಸೌಂದರ್ಯಕ್ಕೆ ಬೆಲೆಕೊಟ್ಟು ವರಿಸಿಕೊಂಡ ನಿದರ್ಶನಗಳು ಎಷ್ಟೋ ಇವೆ. ಆದ್ದರಿಂದ ಒಂದು ಹೆಣ್ಣಿನ ಸೌಂದರ್ಯವನ್ನು ಬರಿ ಬಣ್ಣದಿಂದ ಮಾತ್ರ ಅಳೆಯದೇ ಅವಳ ಮನಸಿನ ಸೌದರ್ಯವನ್ನೂ ಅಳೆದು ನೋಡಿ. ಬೆಳಕಿಗೆ ರೂಪ ಕೊಟ್ಟಿದ್ದೆ ಕತ್ತಲು ಎಂಬ ಸಂಗತಿ ನಿಮಗೇ ಅರಿವಾಗುತ್ತದೆ.

ನಮ್ಮ ಸುತ್ತಲಿನ ಸಮಾಜ ಕಪ್ಪು ಬಣ್ಣವನ್ನು ಇಷ್ಟಪಡುವುದಿಲ್ಲ ಎನ್ನುವುದಕ್ಕೆ ಕೆಲವು ನಿದರ್ಶನಗಳಿಲ್ಲಿವೆ.  ಹೆಣ್ಣು ನೋಡಲು ಬಂದರೆ ‘ಹುಡುಗಿ ಕಪ್ಪು’ ಎಂದು ನಿರಾಕರಿಸುವ ವರ. ಗರ್ಭಿಣಿಯಿರುವಾಗ ಹಾಲಲ್ಲಿ ಕೇಸರಿ ಹಾಕಿ ಕುಡಿದರೆ ಹುಟ್ಟುವ ಮಗು ಬೆಳ್ಳಗಿರುತ್ತದೆ ಎಂದು ಮಗಳಿಗೆ ಕೇಸರಿ ಬೆರೆಸಿದ ಹಾಲು ಕುಡಿಸುವ ಅಮ್ಮ. ಗರ್ಭಿಣಿ ಮುದ್ದು ಮುದ್ದಾಗಿರುವ ಬೆಳ್ಳಗಿನ ಮಗುವಿನ ಫೆÇೀಟೋವನ್ನು ನೋಡುತ್ತಾ ನಿದ್ದೆ ಹೋದರೆ ಅಷ್ಟೇ ಚೆಂದದ ಮಗು ಹುಟ್ಟುತ್ತದೆ ಎಂಬ ವಿಶ್ವಾಸದಲ್ಲಿ ಬೆಡ್‍ರೂಂನಲ್ಲಿ ಮುದ್ದಾದ ಬಾಲೆಯ ಫೆÇೀಟೋ ತೂಗು ಹಾಕುತ್ತಾರೆ. ಮಗು ಜನಿಸಿದಾಗ ನೋಡಲು ಬಂದ ನೆಂಟರಲ್ಲಿ ಇತರರರು ಕೇಳುವ ಮೊದಲ ಪ್ರಶ್ನೆ ಮಗು ಹೇಗಿದೆ? ಬೆಳ್ಳಗಿದೆಯೋ, ಕಪ್ಪೋ..? ಮಗು ಆರೋಗ್ಯವಾಗಿದೆಯಾ ಅಂತಾ ಕೇಳುವುದಿಲ್ಲ ಯಾಕೆ?.

ಕಪ್ಪಾಗಿರುವುದು ಕಪ್ಪಾಗಿರುವವರಿಗೆ ಹೆಚ್ಚು ಲಾಭ ಎನ್ನಲಾಗುತ್ತೆ. ಏಕೆಂದರೆ ಅದಕ್ಕೆ ಕಾರಣವೂ ಉಂಟು. ವೈಜ್ಞಾನಿಕವಾಗಿ ಕಪ್ಪು ವರ್ಣದವರಿಗೆ ‘ಸನ್ ಬರ್ನ್’ಸಾಧ್ಯತೆ  ಕಡಿಮೆಯಂತೆ. ಅದೇ ರೀತಿ ಚರ್ಮದ ಕಾಯಿಲೆಗಳು ತಗುಲುವ ಸಾಧ್ಯತೆ ಕೂಡ ಕಡಿಮೆ. ಹವಾಮಾನದ ವ್ಯೆಪರಿತ್ಯಗಳನ್ನು ಕಪ್ಪು ಚರ್ಮ ಸುಲಭವಾಗಿ ತಡೆದುಕೊಳ್ಳಬಲ್ಲುದು. ಇಷ್ಟೆಲ್ಲಾ ಹಿನ್ನೆಲೆಯಿರುವ ಕಪ್ಪುವರ್ಣದ ಬಗ್ಗೆ ಭಾರತೀಯರು ತಾತ್ಸಾರ ಮನೋಭಾವನೆ ತಳೆದಿರುವುದು ವಿಷಾದನೀಯ.

No comments:

Post a Comment