Friday 4 October 2013

ಸಂಜೆ ಸಮಯದ ಆರೋಗ್ಯ..!

ಬೆಳಗಾದರೆ ಸಾಕು ಬುದುಕಿನ ಜಂಜಾಟಗಳು ಬೆನ್ನುಬೀಳತೊಡಗುತ್ತವೆ. ಒಂದೆಡೆ ಆಫೀಸ್ ಕೆಲಸದ ಒತ್ತಡ. ಮತ್ತೊಂದೆಡೆ ಸ್ಟ್ರೆಸ್, ಟೆಂಷ್ಯನ್ ಹೀಗೆ ದಿನಪೂರ್ತಿ ಕೆಲಸ ಹಾಗೂ  ದುಡ್ಡು ಗಳಿಸುವ ತವಕದಿಂದ ಆರೋಗ್ಯದ ಮೇಲಿನ ಕಾಳಜಿ ದಿನದಿಂದ ದಿನಕ್ಕೆ ಕಡಿಮೆಯಾಗಿಬಿಡುತ್ತದೆ. ಆಗ ಒಂದು ದಿನ ಆರೋಗ್ಯ ಕೈಕೊಟ್ಟು ಎಲ್ಲ ಕೆಲಸಗಳಿಗೂ ಬ್ರೇಕ್ ಬಿಳುತ್ತದೆ. ಆಧುನಿಕ ಬದುಕಿನಲ್ಲಿ ಆರೋಗ್ಯ ಕೈಕೊಟ್ಟರೆ ಸಮಸ್ಯೆಗಳು ಸಾಲುಗಟ್ಟಿ ನಿಂತು ಕಾಡಲಾರಂಭಿಸುತ್ತವೆ. ನಾವು ಎಲ್ಲಿಯವರೆಗೂ ಆರೋಗ್ಯಕ್ಕಾಗಿ ಸಮಯವನ್ನು ಕಾಯ್ದಿರಿಸುವುದುಲ್ಲವೋ ಅಲ್ಲಿಯವರೆಗೂ ದಾರಿಯುದ್ದಕ್ಕೂ ಗಂಡಾಂತರಗಳು ಓಡುವ ಬದುಕಿಗೆ ತಡೆಯೊಡ್ಡಲು ಕಾದು ಕೂತಿರುತ್ತವೆ. ಪ್ರತಿಯೊಬ್ಬರಿಗೂ ವ್ಯಾಯಾಮವೆಂಬುದು ಅತೀ ಅವಶ್ಯ. ಆದರೆ, ಇಂದು ಕೆಲಸಗಳ ಮಧ್ಯೆ ಸಮಯದ ಅಭಾವ ಎಲ್ಲರನ್ನೂ ಕಾಡುತ್ತದೆ.
ಬೆಳಗಿನ ಜಾವ ಜಾಗಿಂಗ್ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ಕೆಲಸಕ್ಕೆಂದು ಹತ್ತಾರು ಕಿಲೋಮೀಟರ್ ದೂರ ಹೋಗಬೇಕು, ಅದರಿಂದ ಎರಡು ಗಂಟೆ ಮೊದಲೇ ಮನೆಬಿಡಬೇಕು. ಹೀಗಿದ್ದಾಗ ಬೆಳಗಿನ ಜಾವ ಆರೋಗ್ಯಕ್ಕೆ ಸಮಯ ನಿಗದಿಪಡಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ.  ಆಫೀಸ್‌ಗೆ ಹೋಗುವ ಒತ್ತಡದಲ್ಲಿ ವ್ಯಾಯಾಮ ಮಾಡಿದರೂ ಅದರ ಲಾಭ ಪಡೆದುಕೊಳ್ಳುವುದು ಎಷ್ಟು ಸಾಧ್ಯ ಎನ್ನುವ ಪ್ರಶ್ನೆ ಕಾಡುವುದು ಸಾಮಾನ್ಯ. ಆದರೆ, ಬೆಳಗಿನಜಾವದಲ್ಲೇ ವ್ಯಾಯಾಮಕ್ಕಾಗಿ ಕಾಲ ನಿಗದಿಪಡಿಸಿಕೊಳ್ಳಬೇಕೆಂದೇನಿಲ್ಲ. ಸಂಜೆ ವೇಳೆಯಲ್ಲಿ ವ್ಯಾಯಾಮಕ್ಕೆ ಸಮಯ ನಿಗದಿಪಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಸಮಯವನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಬಹುದು.
ನಿಜ ಹೇಳಬೇಕೆಂದರೆ ಬೆಳಗಿನಜಾವಕ್ಕಿಂತ ಸಂಜೆ ಸಮಯದಲ್ಲಿ ಮನಸ್ಸು ಶಾಂತವಾಗಿರುತ್ತದೆ. ಎದ್ದು ಬಿದ್ದು ಆಫೀಸ್‌ಗೆ ಓಡುವ ಒತ್ತಡವಿರುವುದಿಲ್ಲ. ಹೀಗೆ ಮನಸ್ಸು ಶಾಂತಚಿತ್ತವಾಗಿದ್ದಾಗ ಅಲ್ಪ ಸಮಯವನ್ನಾದರೂ ಆರೋಗ್ಯಕ್ಕೆಂದು ಮೀಸಲಿರಿಸಿದರೆ. ಓಡುವ ಬದುಕಿಗೆ ಬೇಕಾದ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು. ಅಷ್ಟೇ ಅಲ್ಲ ಸಂಜೆ ಸಮಯದಲ್ಲಿ ವಾಕಿಂಗ್ ಅಥವಾ ವ್ಯಾಯಾಮ  ಮಾಡವುದರಿಂದ ಹೆಚ್ಚಿನ ಲಾಭಗಳನ್ನು ಪಡೆದುಕೊಳ್ಳಬಹುದು ಹೇಗೆ ಎಬುದನ್ನು ಈ ಕೆಳಗಿನ ಅಂಶಗಳು ನಿಮಗೆ ಮನವರಿಕೆ ಮಾಡಿಕೊಡುತ್ತವೆ.
ಉತ್ತಮ ನಿದ್ರೆಯನ್ನು ಖಚಿತಪಡಿಸುತ್ತದೆ :
ಹೌದು ದಿನವಿಡಿ ಕೆಲಸದಿಂದ ಹೈರಾಣಾಗಿ ಸಂಜೆ ಸಮಯದಲ್ಲಿ ಕನಿಷ್ಠವೆಂದರೂ ಒಂದು ಗಂಟೆಯಾದರೂ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಆ ದಿನದ ಎಲ್ಲ ಒತ್ತಡಗಳನ್ನು ಕಡಿಮೆಮಾಡಬಹುದು. ಸಂಜೆ ಸಮಯದಲ್ಲಿ ಇತರರೊಂದಿಗೆ ಸೇರಿ ಖುಷಿಯಿಂದ ಕಾಲಕಳೆಯುತ್ತ ವರ್ಕೌಟ್ ಮಾಡುವುದರಿಂದ ದೇಹ ಹಗುರವಾಗುತ್ತದೆ. ಇದರಿಂದ ರಾತ್ರಿ ವೇಳೆಯಲ್ಲಿ ಸುಖನಿದ್ದೆಗೆ ಜಾರಬಹುದು. ನೆಮ್ಮದಿ ನಿದ್ದೆಯಿಂದ ಆರೋಗ್ಯ ತಾನಾಗಿಯೇ ಹತೋಟಿಗೆ ಬರುತ್ತದೆ. ಹಾಗೂ ಮರುದಿನ ಬೆಳಿಗ್ಗೆ ಮತ್ತೆ   ಉತ್ಸಾಹದಿಂದ ಕೆಲಸದಲ್ಲಿ ತೊಡಿಗಿಸಿಕೊಳ್ಳಬಹುದು.
ಆರೋಗ್ಯಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬಹುದು :
ಬೆಳಗಿನ ಜಾವಕ್ಕೆ ಹೋಲಿಸಿದರೆ ಸಂಜೆ ಯಾವುದೇ ಕಲಸಗಳ ಒತ್ತಡವಿರುವುದಿಲ್ಲ. ಆಗ ಹೆಚ್ಚಿನ ಸಮಯವನ್ನು ದೇಹದ ಫಿಟ್ನೆಸ್ ಬಗ್ಗೆ ಮೀಸಲಿಡಬಹುದು. ಸಂಜೆ ಹೆಚ್ಚು ಸಮಯ ಸಿಗುವುದರಿಂದ ವಾಕಿಂಗ್, ವ್ಯಾಯಾಮ, ಯೋಗದಂತಹ ಚಟುವಟಿಕೆಗಳಲ್ಲಿ ನಿಶ್ಚಿಂತೆಯಿಂದ ತೊಡಗಿಸಿಕೊಳ್ಳಬಹುದು.
ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು :
ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದರಿಂದ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಆದರೆ ಬೆಳಗಿನ ಜಾವ ಹೆಚ್ಚಾಗಿ ವರ್ಕೌಟ್ ಮಾಡಲು ಸಮಯದ ಅಭಾವವಿರುತ್ತದೆ. ಬೊಜ್ಜು, ದೇಹದ ಅತಿಯಾದ ತೂಕ ಹೀಗೆ ಅನೇಕ ಸಮಸ್ಯೆಗಳಿರುವವರು ಸಂಜೆ ಸಮಯವನ್ನೇ ಆಯ್ದುಕೊಳ್ಳುವುದು ಒಳಿತು. ಆಗ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಲು ಸಮಯ ಸಿಗುತ್ತದೆ.


ನಿಮ್ಮ ರಕ್ತದಾನದಿಂದ ಹಲವರಿಗೆ ಜೀವದಾನ


ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮಗಳು. ಹುಟ್ಟಿಗೆ ಒಂದೇ ಮುಖ ಆದರೆ, ಸಾವಿಗೆ ಸಾವಿರ ಮುಖಗಳು, ಯಾವ ಕ್ಷಣದಲ್ಲಿ ಯಾರಿಗೆ, ಹೇಗೆ ಸಾವು ಸಮೀಪಿಸುತ್ತೆ ಎಂದು ಹೇಳಲಾಗುವುದಿಲ್ಲ. ಆದರೆ, ಒಂದು ಸಂಗತಿ ನಿಮ್ಮನ್ನು ಬೆಚ್ಚಿಬೀಳಿಸದೇ ಇರದು. ಹೌದು, ಪ್ರತಿನಿತ್ಯ ದೇಶದಲ್ಲಿ ಸಾಯುವವರಲ್ಲಿ  ಶೇಕಡಾ ೪೩ ರಷ್ಟು ಜನರ ಸಾವಿಗೆ ಕಾರಣವಾಗುತ್ತಿರುವುದು ರಕ್ತದ ಕೊರತೆಯ ಸಮಸ್ಯೆ. ಸಮಯಕ್ಕೆ ಸರಿಯಾಗಿ ರಕ್ತ ಸಿಕ್ಕರೆ ಅದೆಷ್ಟೋ ಜನರ ಪ್ರಾಣ ಉಳಿಸಬಹುದು ಎಂಬುದು ಇದರಿಂದ ತಿಳಿಯಬಹುದು.
ಇತ್ತೀಚೆಗೆ ರಕ್ತದಾನದ ಬಗ್ಗೆ ಸರ್ಕಾರದಿಂದ ಹಿಡಿದು ನಾನಾ ಎನ್‌ಜಿಒಗಳೂ ಸಹ ರಕ್ತದಾನದ ಮಹತ್ವವನ್ನು ಸಾರಿ ಸಾರಿ ಹೇಳುತ್ತಿವೆ. ಆದರೆ ಅದನ್ನು ಕೇಳುವಷ್ಟು ತಾಳ್ಮೆ, ರಕ್ತವನ್ನು ದಾನವಾಗಿ ನೀಡುವಷ್ಟು ಒಳ್ಳೆಯ ಮನಸ್ಸುಗಳ ಕೊರತೆ ಎದ್ದು ಕಾಡುತ್ತಿದೆ.  ನೇತ್ರದಾನ ಕೇವಲ ಒಮ್ಮೆ ಮಾತ್ರ, ಮೂತ್ರಪಿಂಡದಾನವು ಕೇವಲ ಒಮ್ಮೆ ಮಾತ್ರ, ಹೃದಯದಾನ ಅದೂ ಕೇವಲ ಒಮ್ಮೆ ಮಾತ್ರ, ಆದರೆ ರಕ್ತದಾನ ನಿರಂತರ, ಜೀವ ಇರುವ ವರೆಗೆ... ದೇಹ ಮಣ್ಣಾಗುವವರೆಗೂ ಮಾಡಬಹುದಾದ ಶ್ರೇಷ್ಠ ದಾನ.
ನಮ್ಮಲ್ಲಿ ಅನೇಕರು ರಕ್ತದಾನ ಮಾಡೋದಕ್ಕೆ ಹೆದರುತ್ತಾರೆ. ಹೋದ ರಕ್ತ ಮತ್ತೆ ಮರಳಿ ಬರುವುದಿಲ್ಲ ಎನ್ನುವ ಅಪನಂಬಿಕೆ ಅವರದ್ದು. ಆದರೆ ಸತ್ಯ ಏನೆಂದರೆ ಕೇವಲ ೪೮ ಘಂಟೆಗಳಲ್ಲಿ ನಿಮ್ಮ ರಕ್ತವನ್ನ ನಿಮ್ಮ ದೇಹವು ಪುನಃ ಪಡೆದುಕೊಂಡಿರುತ್ತದೆ. ಹಾಗಾದಮೇಲೆ ನಾವು ಏಕೆ ರಕ್ತವನ್ನು ಅವಶ್ಯಕತೆ ಇರುವವರಿಗೆ ದಾನ ಮಾಡಿ ಒಂದು ಜೀವವನ್ನು ಉಳಿಸಬಾರದು? ಪ್ರತಿಯೊಬ್ಬರೂ ತಮ್ಮ ೧೮ನೇ ವಯಸ್ಸಿನಿಂದ ನಿರಂತರವಾಗಿ ರಕ್ತವನ್ನ ದಾನ ಮಾಡಬಹುದು.  ಇದರಿಂದ ಯಾವ ತೊಂದೆರೆಯೂ ಇಲ್ಲ ಎಂಬ ಸತ್ಯದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.. ಏಕೆಂದರೆ ಸಾವಿರಾರು ಮಂದಿ ಅಪಘಾತದಲ್ಲೋ ಅಥವಾ ಇನ್ಯಾವುದೋ ಅವಘಡದಲ್ಲಿ ತಮ್ಮ ರಕ್ತವನ್ನು ಕಳೆದುಕೊಂಡು ಪ್ರಾಣ ಬಿಡುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ರಕ್ತ ಸಿಕ್ಕರೆ ಪ್ರಾಣಾಪಾಯದಿಂದ ಪಾರಾಗುತ್ತಾರೆ.  ಇಂದಿನ ಯುವಕರು/ಯುವತಿಯರು ರಕ್ತದಾನದ ಮಹತ್ವದ ಬಗ್ಗೆ ಅರಿತು ಸ್ವಯಿಚ್ಛೆಯಿಂದ ರಕ್ತದಾನ ಮಾಡುವ ಮನಸ್ಸು ಮಾಡುವುದು ಸಮಾಜದಲ್ಲಿ ಉತ್ತಮ ಬದಲಾವಣೆಗೆ ನಾಂದಿಯಾಗಲಿದೆ. ಏಕೆಂದರೆ  ಪ್ರತಿ ಎರಡು ಸೆಕೆಂಡಿಗೆ ಯಾರಾದರೊಬ್ಬರಿಗೆ ರಕ್ತದ ಅವಶ್ಯಕತೆಯಿರುತ್ತದೆ. ನಿಮ್ಮ ರಕ್ತ ಒಮ್ಮೆಗೆ ಒಂದಕ್ಕಿಂತ ಹೆಚ್ಚು ಜೀವಗಳಿಗೆ ಸಹಾಯವಾಬಲ್ಲದು. ಅಪಘಾತಕ್ಕೆ ಒಳಗಾದವರು, ಗರ್ಭಾವಧಿ ಪೂರ್ಣವಾಗುವ ಮೊದಲೇ ಹುಟ್ಟಿದ (ಪ್ರಿಮೆಚೂರ್) ಶಿಶುಗಳು, ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ರೋಗಿಗಳು- ಇಂಥವರಿಗೆ ಸಂಪೂರ್ಣ ರಕ್ತದ ಅವಶ್ಯಕತೆ ಇರುತ್ತದೆ. ಇಲ್ಲಿ ನಿಮ್ಮ ರಕ್ತವನ್ನು ಪರೀಕ್ಷೆಗೊಳಪಡಿಸಿದ ನಂತವೇ ರಕ್ತವನ್ನು ನೇರವಾಗಿ ಬಳಸಲಾಗುತ್ತದೆ. ಅಪಘಾತ, ರಕ್ತಹೀನತೆ, ಮತ್ತು ಇತರ ಶಸ್ತ್ರಚಿಕಿತ್ಸೆಗಳಿಂದ ನರಳುತ್ತಿರುವ ಜನರಿಗೆ ಕೇವಲ ಕೆಂಪುರಕ್ತಕಣಗಳ ಅವಶ್ಯಕತೆಯಿರುತ್ತದೆ. ಅದನ್ನು ನಿಮ್ಮ ರಕ್ತದಿಂದ ಬೇರ್ಪಡಿಸಿ ಪೂರೈಸಲಾಗುತ್ತದೆ. ಆಗ ನಿಮ್ಮ ರಕ್ತ ಮತ್ತೊಂದು ಜೀವಕ್ಕೆ ಮರುಜನ್ಮನೀಡಲು ಸಹಾಯಕವಾಗುತ್ತದೆ.