Monday 30 June 2014

ಪಿತೃದೇವೋಭವ.....

‘ಪಿತೃದೇವೋಭವ’, ಹೌದು, ಈ ಒಂದು ಶಬ್ದ ವಿಶ್ವದಲ್ಲಿ ಎಲ್ಲೇ ಕೇಳಿದರೂ, ಯಾರೇ ಹೇಳಿದರೂ ಭಾರತೀಯರು ಹೆಮ್ಮೆ ಪಟ್ಟು ಬೆನ್ನುತಟ್ಟಿಕೊಳ್ಳಲೇಬೇಕು. ತಲೆ ಎತ್ತಿ ಹೇಳಬೇಕು, ಇದು ನಮ್ಮ ದೇಶದಲ್ಲಿ ಜನಿಸಿದ ಶಬ್ದ ಎಂದು.
ತಂದೆಯನ್ನು ದೇವರಂತೆ ಪೂಜಿಸಿದ ದೇಶ ನಮ್ಮದು, ತಾಯಿಗಿರುವಷ್ಟೇ ಗೌರವ ತಂದೆಗೂ ಇದೆ.  ಹುಟ್ಟಿದ ಪ್ರತಿಯೊಬ್ಬರೂ ಸಾಯುವ ಕೊನೆಯ ಕ್ಷಣದವರೆಗೂ ಋಣಿಯಾಗಿರಬೇಕಾದ ಸಂಬಂಧ ಅದು. ಎಷ್ಟು ಹೊಗಳಿದರೂ, ಎಷ್ಟೇ ಪೂಜಿಸಿದರೂ ‘ತಂದೆ’ ಎಂಬ ಸಂಬಂಧದಿಂದ ಮುಕ್ತರಾಗಲು ಸಾಧ್ಯವಿಲ್ಲ.
ನಾಳೆ ‘ಅಪ್ಪಂದಿರ ದಿನ’. ನಿಜಕ್ಕೂ ಹೇಳಿ, ನಿಮ್ಮಲ್ಲಿ ಎಷ್ಟು ಜನ ಈ ಅಪ್ಪಂದಿರ ದಿನವನ್ನು ಆಚರಿಸುತ್ತೀರಿ..?, ಅಷ್ಟಕ್ಕೂ ಅಪ್ಪನ್ನ ನೆನೆಯುವುದಕ್ಕೆ ಒಂದು ದಿನ ಅಂತ ಬೇಕಾ? ಅಷ್ಟು ದೂರದ ಸಂಬಂಧವೇ ಅದು ಮರೆತುಬಿಡಲು?,
ಸುಮ್ಮನೇ ಕೂತು ಅಪ್ಪ ಅಂತ ಯೋಚನೆ ಮಾಡಿದ್ರೆ ಕಣ್ಣಾಲಿಗಳು ಒದ್ದೆಯಾಗದೆ ಇರದು. ತಂದೆ ಮಾಡಿದ ತ್ಯಾಗದ ಅರಿವಾಗದೇ ಇರದು ಅಲ್ಲವೇ? ‘ಅಪ್ಪ’ ಅಂದರೆ ನಮ್ಮೆಲ್ಲ ಧೈರ್ಯ. ಶಕ್ತಿ, ಸಂತೋಷ, ಸುಖ ಎಂದು ಹೇಳಬಹುದೇನೋ.. ಅಪ್ಪ ಎಂದರೆ,  ಬಿಸಿಲಿಗೆ ತಂಪು ಮರದ ನೆರಳಿನ ಹಾಗೆ, ನಮ್ಮೆಲ್ಲಾ ಸಮಸ್ಯೆಗಳಿಗೆ ಅವನ ನಗುವೇ ಉತ್ತರ, ಇಂಥ ಅಪ್ಪನ್ನ ಒಂದೇ ದಿನ ಅಂತ ನೆನೆಯೋದು ಹೇಗೆ?
ಮಕ್ಕಳ ಹುಟ್ಟಿನಿಂದ ಹಿಡಿದು ಬೆಳೆದು ದೊಡ್ಡವರಾಗುವವರೆಗೂ ತಂದೆ ತನ್ನ ಎಲ್ಲಾ ಜವಾಬ್ದಾರಿಗಳನ್ನು ಪ್ರೀತಿಯಿಂದ ನಿಭಾಯಿಸುತ್ತಾನೆ. ಸಮಾಜದಲ್ಲಿ ನಮ್ಮ ಮಕ್ಕಳಿಗೊಂದು ಸ್ಥಾನ ಸಿಗಬೇಕು. ನಮ್ಮ ಮಕ್ಕಳೂ ಎಲ್ಲರಂತೆ ಸ್ವತಂತ್ರ್ಯವಾಗಿ ಬದುಕಬೇಕು, ನಾಲ್ಕು ಜನರ ಮಧ್ಯೆ ಗುರುತಿಸಿಕೊಳ್ಳಬೇಕು ಎಂದು ಮಕ್ಕಳು ಹುಟ್ಟಿದ ಕ್ಷಣದಿಂದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಕಷ್ಟಪಟ್ಟು ಪೈಸೆಗೆ ಪೈಸೆ ಲೆಕ್ಕ ಹಾಕಿ. ನಮ್ಮ ಭವಿಷ್ಯವನ್ನು ರೂಪಿಸಲು ಪರಿತಪಿಸುತ್ತಿರುತ್ತಾರೆ.
ಮಕ್ಕಳ ಸಂತೋಷದಲ್ಲೇ ತಮ್ಮ ಸಂತೋಷವಿದೆ ಎಂದುಕೊಂಡು ಪ್ರಸ್ತುತ ತಮ್ಮೆಲ್ಲ ಸಂತೋಷವನ್ನು ಬದಿಗೊತ್ತಿ ಮಕ್ಕಳ ಸಂತೋಷದಲ್ಲಿ ಸಂತೋಷವನ್ನು ಹುಡುಕುತ್ತ ಜೀವನವನ್ನೇ ಗಂಧದಂತೆ ತೇದು ಮಕ್ಕಳ ಭವಿಷ್ಯ ರೂಪಿಸುತ್ತಾರೆ.
ಯಾವುದೇ ಸ್ವಾಥರ್À ಮನೋಭಾವನೆಯಿಲ್ಲದೇ ಮಕ್ಕಳ ಭವಿಷ್ಯವನ್ನು ರೂಪಿಸಿ ಅವರು ನಮ್ಮಂತೆ ಎಂದೂ ಕಷ್ಟಪಡಬಾರದು, ಇರುವ ಎಲ್ಲ ಕಷ್ಟಗಳೂ ನಮ್ಮೊಟ್ಟಿಗೇ ಅಂತ್ಯಕಾಣಬೇಕು. ಅವರ ಬಾಳಿಗೆ ಸಂತೋಷದ ದಿನಗಳನ್ನು ಕೂಡಿಡÀಬೇಕೆಂದು ಜೀವನದ ಸಂತೋಷಗಳನ್ನೆಲ್ಲಾ ತ್ಯಾಗ ಮಾಡುವ ತಂದೆ ಮಕ್ಕಳ ಪಾಲಿಗೆ ದೇವರೇ ಅಲ್ಲವೇ..?
ಹೌದು, ಇಂದು ಜಗತ್ತು ಆಧುನಿಕತೆಯತ್ತ ಓಡುತ್ತಿದೆ. ಮಾತೃದೇವೋಭವ, ಪಿತೃದೇವೋಭವ ಎಂದು ಉದ್ಗರಿಸಿದ ನಮ್ಮ ನೆಲದಲ್ಲೇ ಸಂಬಂಧಗಳು ತಮ್ಮ ಬೆಲೆ ಕಳೆದುಕೊಳ್ಳುತ್ತಿವೆ. ಮಕ್ಕಳಿಗಾಗಿ ತಂದೆ ಮಾಡಿದ ತ್ಯಾಗವನ್ನು ಮಕ್ಕಳು ಅರಿತು ಅವರ ಮುಪ್ಪಿನ ಕಾಲದಲ್ಲಿ ತಂದೆ ಮಾಡಿದ ತ್ಯಾಗದ ಋಣ ತಿರಿಸಿಕೊಳ್ಳುವ ಜವಾಬ್ದಾರಿಯನ್ನರಿಯದೇ, ಮಕ್ಕಳನ್ನು ಬೆಳೆಸುವುದು ತಂದೆ ಕರ್ತವ್ಯ ಅದನ್ನು ಅವರು ಮಾಡಿದ್ದಾರೆ. ಅವರ ಮೇಲೇಕೆ ನಾವು ಕರುಣೆ ತೋರಬೇಕೆಂದು ಒಬ್ಬ ಮಹಾನುಭಾವ ಕೇಳಿದ ಪ್ರಶ್ನೆ ನನ್ನ ಮನವನ್ನು ಒಂದು ಕ್ಷಣ ನೋವಿನ ಆಳಕ್ಕೆ ತಳ್ಳಿಬಿಟ್ಟಿತ್ತು.
ತನ್ನ ರಕ್ತವನ್ನೆ ಬಸಿದು ಬೆಳೆಸಿದ ಮಕ್ಕಳು ತಂದೆ ತಾಯಿಗಳ ಮುಪ್ಪಿನ ಕಾಲದಲ್ಲಾಗದಿದ್ದರೆ ಮಾನವಿಯತೆಗೆ ಅರ್ಥವೇ ಇಲ್ಲದಂತಾಗುತ್ತದೆ ಯಲ್ಲವೇ? ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತದಲ್ಲವೇ?
 ಓಡುತ್ತಿರುವ ಈ ಆಧುನಿಕತೆಯಲ್ಲಿ ಬೆಳೆದು ನಿಂತ ಮಕ್ಕಳು  ತಂದೆ-ತಾಯಿಯರೊಟ್ಟಿಗೆ ಬದುಕಲಿಚ್ಛಿಸುವುದಿಲ್ಲ.  ಅವರಿಗೆ ಸ್ವತಂತ್ರ ಬೇಕಾಗಿರುತ್ತದೆ.    ಏಷ್ಟೋ ಮಕ್ಕಳು ತಮ್ಮ ಹೆಂಡತಿಯೊಂದಿಗೆ  ಪ್ರೈವೆಸಿ ಬಯಸಿ ತಂದೆ-ತಾಯಿಗಳನ್ನು ಬೇರೊಂದು ಮನೆಯಲ್ಲೋ ಅಥವಾ ತಂದೆ-ತಾಯಿಗಳನ್ನು ಬಿಟ್ಟು ಅವರೇ ಬೇರೆ ಮನೆಯಲ್ಲೋ ಬದುಕುತ್ತಿರುವ ಉದಾಹರಣೆಗಳನ್ನು ಹುಡುಕಬೇಕಿಲ್ಲ.  ಏಕೆಂದರೆ ಇಂದಿನವರಲ್ಲಿ ಇದು ಮಾಮೂಲಿ.
ಇಂದಿನವರು ಸಂಬಂಧಗಳಿಗೆ ಬೆಲೆ ಕೊಡದಿರುವುದೇ ಈ ರೀತಿಯ  ಬೆಳವಣಿಗೆಗೆ ಕಾರಣ,  ಸಂಬಂಧಗಳನ್ನು ಅರ್ಥಮಾಡಿಕೊಳ್ಳದೇ,  ಸಂಬಂಧಗಳ ಬೆಲೆಯನ್ನು ಅರಿಯದೇ  ಯಾವುದೋ ಒಂದು ಮೋಹಕ್ಕೊಳಗಾಗಿಯೋ ಅಥವಾ  ಸ್ವಾರ್ಥದ ಬದುಕು ಬದುಕಲೋ  ಹೆತ್ತು ಹೊತ್ತು ಬೆಳಸಿದ ತಂದೆತಾಯಿಗಳನ್ನೇ ದೂರ ತಳ್ಳಿ ಬದುಕಲಿಚ್ಚಿಸುವ ಇಂದಿನವರು ಪ್ರೀತಿ, ವಾತ್ಸಲ್ಯದಂತಹ  ಉನ್ನತ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದಲೇ ತಂದೆಗೊಂದು ದಿನ, ತಾಯಿಗೊಂದು ದಿನ, ಅಕ್ಕ-ತಂಗಿಯರಿಗೊಂದು ದಿನ,  ಎಂದು  ನಿನಿಗದಿಪಡಿಸಿಕೊಂಡು ಆ ದಿನ ಮಾತ್ರವೇ ಸಂಬಂಧಗಳನ್ನು   ನೆನೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಮದರ್ ಡೇ, ಫಾದರ್ ಡೇ, ಗಳು  ಒಂದು ದಿನ ಆಚರಿಸಿ ಸಂಭ್ರಮಿಸಿ ಬಿಟ್ಟು ಬಿಡುವ ಸಂಬಂಧಗಳಲ್ಲ.  ಜೀವ ಇರುವವರೆಗೂ ಜೊತೆಗಿದ್ದು ಸೇವೆ ಮಾಡಿದರೂ ತೀರಿಸಲಾಗದ ಋಣ ತಂದೆ-ತಾಯಿಯರದು. ಅಂತ್ಯವೇ ಇಲ್ಲದ ಸಂಬಂಧಗಳವು. 
ಈ ಸಂಬಂಧಗಳನ್ನು ಒಂದು ದಿನಕ್ಕೆ ಮಾತ್ರ ಮೀಸಲಿರಿಸದೇ ಮಕ್ಕಳು ತಮ್ಮ ತಂದೆ-ತಾಯಿಯನ್ನು ಪೂಜಿಸಿ, ಪ್ರೀತಿಸುವ ಭಾವನೆಯನ್ನು  ಬೇಳೆಸಿಕೊಳ್ಳಬೇಕು. ಆ ಮನೋಭಾವ ಬೆಳಯಲು ಈ ದಿನ ಒಂದು ನೆಪ ಮಾತ್ರವೇ ಆಗಿರಬೇಕು.

ವಿಶ್ವ ಅಪ್ಪಂದಿರ ದಿನ
ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದು ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದು ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾಗಿದೆ.
ಪಿತೃತ್ವ ದಿನಾಚರಣೆಯನ್ನು,ಪುರುಷ ಪೆÇೀಷಕರನ್ನು ಮತ್ತು ತಂದೆ ತಾತಂದಿರನ್ನು ಗೌರವಿಸುವ ಸಲುವಾಗಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ‘ಅಪ್ಪಂದಿರ ದಿನಾಚರಣೆ’ಯು ಆರಂಭವಾಯಿತು. ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ‘ಅಪ್ಪಂದಿರ ದಿನಾಚರಣೆ’ ಆಚರಿಸಲ್ಪಡುತ್ತದೆ.
ಸ್ಪೋಕೇನ್‍ನ ಸೊನೋರಾ ದೋಡ್ಸ್ ಅವರ ಶ್ರಮದಿಂದ 1910, ಜೂನ್ 19ರಂದು ‘ಅಪ್ಪಂದಿರ ದಿನಾಚರಣೆ’ಯನ್ನು ಮೊದಲ ಬಾರಿಗೆ ಆಚರಿಸಿರುವುದಾಗಿ ಭಾವಿಸಲಾಗಿದೆ. 1909ರಲ್ಲಿ ಸ್ಪೋಕೇನ್‍ನ ಸೆಂಟ್ರಲï ಮೆತೊಡಿಸ್ಟ್ ಎಪಿಸ್ಕೊಪಲï ಚರ್ಚ್‍ನ ಒಂದು ಭಾನುವಾರ ಮಾತೃ ದಿನದಾಚರಣೆಯ ಧರ್ಮೋಪದೇಶವನ್ನು ಆಲಿಸುತ್ತಾ ವಾಷಿಂಗ್ಟನ್‍ನ ಸೊನೋರಾ ಸ್ಮಾರ್ಟ್ ದೋಡ್ ತಂದೆಯನ್ನು ಗೌರವಿಸಲು ತಾನೇ ತಾನಾಗಿ ಯೋಚಿಸಿದಳು ಮತ್ತು 1910ರ ಜೂನ್ 19ರಂದು ತಂದೆಗೆ ಗೌರವವನ್ನು ಅರ್ಪಿಸಿದಳು. ಪಿತೃ ಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟ ಮೊದಲಿಗಳಾದಳು ಈಕೆ.

ಏಕ ವಚನವೋ ಬಹು ವಚನವೋ..?
ಏಕ ವಚನವೋ ಬಹು ವಚನವೋ..'Father’s Day'  ಮತ್ತು Fathers’ Day'- -ಸೂಕ್ಷ್ಮವಾಗಿ ಗಮನಿಸಿ, ಎರಡು ಬಗೆಯ ಬರಹದಲ್ಲೂ ಪದಗಳ ಸ್ವಾಮ್ಯತೆ ಸಂಬಂಧವನ್ನು ಸೂಚಿಸುತ್ತವೆ. ವಾಕ್ಯರಚನೆಯಲ್ಲಿ ಬಳಸಬಹುದಾದ ಚಿಹ್ನೆ ಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ (Fathers’ Day” ಮತ್ತು Father’s Day”). ಮೊದಲನೆಯದು ಬಹುವಚನವಾದರೆ ಎರಡನೆ ರೀತಿಯಲ್ಲಿ ಬರೆಯುವುದು ಏಕವಚನ. ಇಂಗ್ಲಿಷ್ ಭಾಷೆಯಲ್ಲಿರುವ Father’s Day” ಎಂಬುದನ್ನು ಉಚ್ಚರಿಸಿದಾಗ ಸಾಮಾನ್ಯವಾಗಿ ಬಹುವಚನದಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತದೆ; ಅಪ್ಪಂದಿರ ದಿನ ಎಂಬ ಅರ್ಥ ಒದಗಿ ಬಂದು ಅದು ಅಪ್ಪಂದಿರ ಸಮೂಹಕ್ಕೇ ಅನ್ವಯವಾಗುತ್ತದೆ. ‘Fathers’Day’- ಹೀಗೆ ಬರೆದಾಗ ಅಪ್ಪನ ದಿನ ಎಂಬ ಏಕವಚನವಾಗುತ್ತದೆ. ಅರ್ಥೈಸಿಕೊಳ್ಳುವುದು ಬಹುವಚನದಲ್ಲಾದರೆ ಏಕವಚನದ ರೂಪದಲ್ಲೇ ಬರೆಯುವುದು ಸರ್ವೇಸಾಮಾನ್ಯವಾಗಿದೆ. ಡ್ಯಾಡ್ Father’s Day”-  ಎಂದೇ ತಮ್ಮ ಮೂಲ ಲಿಖಿತ ಮನವಿಯಲ್ಲಿ ರಜೆಗಾಗಿ ಬಳಸಿದರು, ಆದರದು Fathers’ Day”  ಎಂದೇ 1913ರಲ್ಲಿ  US ಕಾಂಗ್ರೆಸ್‍ನಲ್ಲಿ ರಜೆಗಾಗಿ ಮೊದಲ ಬಾರಿಗೆ ಮಂಡಿಸಲಾದ ಮಸೂದೆಯಲ್ಲಿ ಬಳಸಿಯಾಗಿತ್ತು ಮತ್ತು ಅದರ ಕರ್ತೃವನ್ನು 2008ರಲ್ಲಿ ಶ್ಲಾಘಿಸಿದಾಗಲೂ  U.S ಕಾಂಗ್ರೆಸ್ ಕೂಡ ಅದೇ ರೀತಿ ಬಳಕೆಮಾಡಿತ್ತು.


ನಾನು ಭೂಮಿಗೆ ಬಂದಾಗ   ಆಕಾಶದೆತ್ತರದಷ್ಟು ಖುಷಿ ಪಟ್ಟವನು ನೀನು,
ತೊದಲ ನುಡಿಯಲ್ಲಿ ನಾ ನಿನ್ನ ಕೂಗಿದಾಗ   ಓಡಿ ಬಂದು ಅಪ್ಪಿ ಮುದ್ದಾಡಿದವನು ನೀನು,
ನಾ ಮೊದಲ ಹೆಜ್ಜೆಯಿಟ್ಟಾಗ   ಆಸರೆಯಾಗಿದ್ದವನು ನೀನು,
ನಾ ನಡೆದಾಡಲಾರಂಭಿಸಿದರೂ ನನ್ನನು ಹೆಗಲ ಮೇಲೆ ಹೊತ್ತು  ನಡೆದಾಡಿದವನು ನೀನು,
ಬೇಡದೆ ನನ್ನೆಲ್ಲ ಬಯಕೆಗಳನ್ನೆಲ್ಲ     ಪೂರೈಸಿದವನು ನೀನು,
ಧೃತಿಗೆಟ್ಟಾಗ  ನನ್ನೊಳಗೆ ಧೈರ್ಯತುಂಬಿ ಜೊತೆಗಿದ್ದವನು ನೀನು.
ನನಗಾಗಿ, ನನ್ನ ಭವಿಷ್ಯಕ್ಕಾಗಿ       ಬದುಕಿದವನು ನೀನು.
ಬಳಲಿ, ಬೆವರಿಳಿಸಿ ನನಗೆ  ಬೇಕಾದುದನ್ನೆಲ್ಲ ತಂದು ಕೊಟ್ಟವನು ನೀನು,
ನಿನ್ನ ಅಷ್ಟೆಲ್ಲ ಋಣವನ್ನು ‘ಅಪ್ಪಾ’ ಎಂದೊಮ್ಮೆ ಕೂಗುವ ಮೂಲಕ ತೀರಿಸಲಾದೀತೇ?