Tuesday 19 November 2013

ಭರವಸೆಗಳ ಬದುಕಿಗೆ ಬೆಳಕಾಗಲಿ ದೀಪಾವಳಿ



ದಾಪುಗಾಲಿಟ್ಟು ದೀಪಗಳ ಬೆಳಕನ್ನು ಹೊತ್ತು ಮತ್ತೆ ಬಂದಿದೆ ದೀಪಾವಳಿ. ಸಂಭ್ರಮ ತುಂಬಿಕೊಂಡು ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳು ಇನ್ನೇನು ಮೆರವಣಿಗೆ ಹೊರಡುತ್ತವೆ. ಆ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗೆ ಆವರಿಸಿದ್ದ ಕತ್ತಲೆಯನ್ನು ಬೆಳಕು ಬಂದು ಹೊಡೆದೊಡಿಸಿದಂತಹ ಅನುಭವ.   ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳದೇ, ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಕಷ್ಟದ ಕತ್ತಲನ್ನು ಧೈರ್ಯದ ಜ್ಯೋತಿಯಿಂದ  ದೂರವಾಗಿಸಿಕೊಂಡು. ಹೊಸ ಬಾಳಿಗೆ ಹೊಸದೊಂದು ಮುನ್ನುಡಿ ಬರೆಯುವ ಪ್ರಯತ್ನವೇ ಈ ದೀಪಾವಳಿ ತಾತ್ಪರ್ಯ.   ಜೀವನದಲ್ಲಿ ಏಳುಬೀಳುಗಳು ಸಹಜ. ಹಗಲು-ರಾತ್ರಿಗಳ ಹಾಗೆ.  ಒಮ್ಮೆ ರಾತ್ರಿಯಾದರೆ ನಿರಾಸೆಗೊಳ್ಳದೆ ಬೆಳಕನ್ನು ಹೊತ್ತು ತರುವ ಸೂರ್ಯನಿಗೆ ಎದುರು ನೋಡುವ ಪ್ರಯತ್ನದಲ್ಲೇ ಜೀವನದ ಸಂತೋಷದ ಗುಟ್ಟು ಅಡಗಿರುತ್ತೆ. ಅದಕ್ಕೇ ಇರಬೇಕು, ದೀಪಾವಳಿಯೊಂದಿಗೆ ದೀಪಗಳನ್ನು ಗಂಟು ಹಾಕಿರುವುದು. ದೀಪಗಳ ಕಾಂತಿಯಲ್ಲೇ ಬದುಕಿನ ದೀಪದ ಉತ್ಸಾಹದ ಬತ್ತಿಗೆ ಸಂತೋಷದ ಕಾಂತಿ ಹಚ್ಚಿಕೊಂಡು ಕಂಗೊಳಿಸುವುದು. ದೀಪಾವಳಿ ಬರಿ ಉಂಡು ಕಳೆಯುವ ಹಬ್ಬವಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಸಂಭ್ರಮವನ್ನು  ಮನಸ್ಸಿನ ಉಗ್ರಾಣದೊಳಗೆ ತುಂಬಿಕೊಳ್ಳುವ ಕ್ಷಣ. ಮನೆಯಲ್ಲಿ ಎಲ್ಲರೂ ಇದ್ದರೆ ಭವ್ಯ ಬೆಳಕು ಹೊತ್ತಿಕೊಂಡಂತೆಯೇ. ಹಾಗಾಗಿಯೇ ಈ ಹಬ್ಬಕ್ಕೆಂದರೆ ಎಲ್ಲರೂ ಮನೆಗೆ ಬಂದು ಸೇರುತ್ತಾರೆ. ನಮ್ಮಲ್ಲಿಯ ಕುಟುಂಬ ಪರಿಕಲ್ಪನೆಯಲ್ಲಿ ಹೀಗೆ ಎಲ್ಲರೂ ಕೂಡಿ-ಆಡಿ ನಲಿದರೆ ಸಂತೋಷದ ಹೊಳೆಯೇ ಹರಿದುಬಿಡುತ್ತದೆ. ಆ ಬೆಳಕಿನಿಂದಲೇ ಭರವಸೆಗಳು ಹುಟ್ಟುತ್ತವೆ. ಆ ಭರವಸೆಗಳೇ ಬದುಕಿಗೆ ಆಧಾರ ಸ್ಥಂಭಳಿದ್ದಂತೆ.

ಈ ಬಾರಿಯ ದೀಪಾವಳಿಯಿಂದ ಬಾಳಿನಲ್ಲ್ಲಿ ತುಂಬಿಕೊಂಡ ಬೆಳಕು ಮುಂದಿನ ದೀಪಾಳಿಯವರೆಗೂ ನಿಮ್ಮ ಬದುಕಿನ ಹಾದಿಗೆ ದಾರಿ ತೋರಿಸಲಿ. ಕಷ್ಟಗಳು ದೇವತೆಗಳನ್ನೇ ಬಿಟ್ಟಿಲ್ಲ. ಇಂದಿಗೂ ಜಗತ್ತನ್ನೇ ಬೆಳಗುವ ಸೂರ್ಯನಿಗೂ ಕೂಡ ಗ್ರಹಣದ ಹೆಸರಲ್ಲಿ ಅಂಧಕಾರ ಕವಿದುಕೊಳ್ಳುತ್ತದೆ. ಆದರೆ ಅದು ಕ್ಷಣಮಾತ್ರ. ತದನಂತರ ಸೂರ್ಯ ಮತ್ತೆ ತಾನು ಪ್ರಕಾಶಿಸಿ ಜಗತ್ತನ್ನು ಬೆಳಗುತ್ತಾನೆ.

ಕಷ್ಟಗಳು ಹುಟ್ಟುವಾಗ ಅದರ ಜೊತೆ ಪರಿಹಾರವೂ ಜನ್ಮತಾಳಿರುತ್ತೆ. ಆ ಪರಿಹಾರವನ್ನೂ ಹುಡುಕಿಕೊಳ್ಳುವ ಸಮಾಧಾನದ ನಡವಳಿಕೆ ನಮ್ಮಲ್ಲಿರಬೇಕು ಅಷ್ಟೇ. ಕಷ್ಟ-ಸುಖಗಳು ಒಂದೇ ನಾಣ್ಯದ ಎರಡು ಮುಖಗಳು. ಕಷ್ಟದ ಹಿಂದೆಯೇ ಸುಖ ಅಡಗಿರುತ್ತದೆ. ನಾಣ್ಯದ ಮುಖ ಬದಲಾಗುವವರೆಗೂ ಕಾಯುವವರಿಗೆ ಮಾತ್ರ ಸುಖದ ದರ್ಶನವಾಗೋದು. ಆ ತಾಳ್ಮೆ, ನೆಮ್ಮದಿ, ಆರೋಗ್ಯ, ಚೈತನ್ಯ  ಐಶ್ವರ್ಯಗಳ ಪ್ರತೀಕವಾಗಲಿ ಈ ದೀಪಾವಳಿ. ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಲು ಪ್ರತಿ ದಿನವೂ ಪ್ರಯತ್ನಿಸಿ. ಈ ದೀಪಾವಳಿ ತಂದಿರುವ ದಿವ್ಯ ದೀಪದಲ್ಲಿ ನಮ್ಮ ಮನೆ-ಮನಗಳ ದೀಪಗಳನ್ನು ಹಚ್ಚಿಕೊಳ್ಳಬೇಕು. ಆ ಬೆಳಕಿನಲ್ಲಿ ನಾವು ನಮ್ಮ ಬದುಕಿನ ಭರವಸೆಗಳನ್ನು ಬೆಳೆಸಿಕೊಳ್ಳಬೇಕು.  ಮಧುರ ಬಾಂಧವ್ಯದ ಎಣ್ಣೆ ಸುರಿದು ನಂದಾದೀಪವಾಗುವಂತೆ ಮಾಡಿಕೊಳ್ಳಬೇಕು. ಅಂಥ ಕ್ಷಣ ಎದುರಾಗಿದೆ. ಬನ್ನಿ ಎಲ್ಲರೂ ದೀಪ ಹಚ್ಚೋಣ, ಹಚ್ಚಿಕೊಳ್ಳೋಣ, ಬೆಳಗೋಣ, ನಮ್ಮೊಳಗೂ ಬೆಳಗಿಕೊಳ್ಳೋಣ. ಬದುಕಿಗೆ ಭರವಸೆಗಳನ್ನು ಬೆಳೆಸಿಕೊಳ್ಳೋಣ. ಬದುಕೋಣ.

ಸಂಬಂಧಗಳ ಮೇಲೊಂದು ಸಮೀಕ್ಷೆ




ಓದಲು ಮುಜುಗರವೆನಿಸಿದರೂ ಓದಲೇಬೇಕಾದ ಕೆಲವೊಂದು ಬೆತ್ತಲಾದ ಸತ್ಯಗಳಿವು. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಂದು ದಿನದಲ್ಲಿ ಸಾವಿರಾರು ಸಮೀಕ್ಷೆಗಳು ನಡೆಯುತ್ತವೆ. ಪ್ರತಿಯೊಂದು ಸಮೀಕ್ಷೆಯೂ ಒಂದೊಂದು ಅಚ್ಚರಿಯನ್ನು ಹೊರಹಾಕುತ್ತವೆ.. ಹಾಗೆಯೇ ಇಲ್ಲಿ ಕೆಲವು ಪತ್ರಿಕೆಗಳು, ಸಂಸ್ಥೆಗಳು, ಎನ್‌ಜಿಓಗಳು ನಡೆಸಿದ ಆಯ್ದ ಕುತೂಹಲ ಕೆರಳಿಸುವ ಕೆಲವು ಸಮೀಕ್ಷೆಗಳು ನಿಮ್ಮ ಮುಂದಿವೆ. ನಿಜಕ್ಕೂ ಅವು ನಿಮ್ಮನ್ನು ದಂಗಾಗಿಸುತ್ತವೆ. ಏಕೆಂದರೆ ಈ ಸಮೀಕ್ಷೆಗೆ ಆಯ್ದುಕೊಂಡ ವಿಷಯವೇ ಅಂತಹದ್ದು. ಸೂಕ್ಷ್ಮ ಸಂಬಂಧಗಳ ನಡುವಿನ ಸಂಘರ್ಷಗಳ ಪರಿಣಾಮವೇ ಈ ಸಮೀಕ್ಷೆಯ ಮೂಲ.

ನಿಮಗೆ ಗೊತ್ತು, ಒಂದು ಸುಂದರ ಸಂಸಾರದಲ್ಲಿ ಹುಳಿ ಹಿಂಡುವ ವಿಷಯವೊಂದಿದ್ದರೆ ಅದು ಅಕ್ರಮ ಸಂಬಂಧದ ಸಂಶಯದ ಗಾಳಿ. ಒಂದು ಹಂತದಲ್ಲಿ ವಯಸ್ಸೆಂಬುದು ನಮ್ಮ ಜೀವನದಲ್ಲಿ ಬಹು ಆಯ್ಕೆ ಪ್ರಶ್ನೆಯಾಗಿ ಎದುರು ನಿಂತುಬಿಡುತ್ತದೆ. ಆ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬ ಗೊಂದಲದಲ್ಲಿ ನಾನಾ ತಪ್ಪುಗಳು ಅರಿವಿಗೆ ಬರದೇ ನಡೆದು ಹೋಗಬಹುದು. ಇನ್ನೂ ಕೆಲವು ತಪ್ಪುಗಳು ನಮ್ಮ ಅವಸರ, ಆತುರದಿಂದ ನಡೆದು ಹೋಗಿಬಿಡುತ್ತವೆ. ನಂಬಿದವರ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಂಡು ನಮ್ಮ ಮುಖವೇ ನಮಗೆ ವಿಕಾರವಾಗಿ ಕಾಣಸಲಾರಂಭಿಸುತ್ತದೆ.

ಜಗತ್ತಿನಲ್ಲಿ ಅತಿ ಹೆಚ್ಚು ಅಪರಾಧ ಕೃತ್ಯಗಳು ನಡೆಯಲು ಕಾರಣವೇ ಪ್ರೇಮ ಮತ್ತು ಕಾಮ ಎಂಬುವ ಎರಡು ಕೊನೆ ಇಲ್ಲದ ಸಮಸ್ಯೆಗಳು. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ನಡೆದ ಕೆಲವು ಸಮೀಕ್ಷೆಗಳ  ಕೂತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

ಮೊದಲನೆಯ ಸಮಿಕ್ಷೆ ನಿಮಗೆ ಶಾಕ್ ನೀಡಬಹುದು. ಆದರೆ ಅದೇ ಸತ್ಯವಂತೆ. ಇಂದು ಒಬ್ಬ ವ್ಯಕ್ತಿಯು ಮದುವೆಯ ಸಂದರ್ಭದಲ್ಲಿ ಪರ್ಯಾಯ ಸಂಬಂಧವೊಂದನ್ನು ಹೊಂದಿರುವ  ಶೇ.೫೦-೫೦ ಸಂಭವವಿರುತ್ತದೆ ಎಂದು ಕೆಲವು ಸಂಶೋಧಕರು ಹೇಳುತ್ತಾರೆ. ಇದು ದೈಹಿಕ ಮತ್ತು ದೈಹಿಕವಲ್ಲದ ಸಂಬಂಧಗಳನ್ನು ಒಳಗೊಂಡಿರುತ್ತದೆ. ಸುಮಾರು ೩೦ರಿಂದ ೬೦%ರಷ್ಟು ವಿವಾಹಿತರು (ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ) ಅವರ ಮದುವೆಗೆ ಮುಂಚಿನ ಯಾವುದೊದರೊಂದು ಸಂದರ್ಭದಲ್ಲಿ ದಾಂಪತ್ಯ ದ್ರೋಹದಲ್ಲಿ ತೊಡಗಿರುತ್ತಾರೆ ಎಂದು ಅಂದಾಜಿಸಲಾಗಿದೆ. ಕೆಲವು ತಜ್ಞರು (ಉದಾಹರಣೆಗಾಗಿ, ಗ್ರೊ ಅಪ್ ಗೋಲ್ಡನ್ ಬುಕ್ಸ್‌ನ ಫ್ರ್ಯಾಂಕ್ ಪಿಟ್‌ಮ್ಯಾನ್) ೯೦%ರಷ್ಟು ಮೊದಲ ಬಾರಿಯ ವಿವಾಹ-ವಿಚ್ಛೇದನಗಳಿಗೆ ದಾಂಪತ್ಯ ದ್ರೋಹವು ಕಾರಣವಾಗಿರುತ್ತದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕ್ರಿಸ್ಟಿನ್ ಗಾರ್ಡನ್ ೧೯೯೭ರಲ್ಲಿ ಮಾಡಿದ ಅಧ್ಯಯನವು, “ದಾಂಪತ್ಯ ದ್ರೋಹವನ್ನು ಅನುಭವಿಸುವ ಅರ್ಧಕ್ಕಿಂತಲೂ ಹೆಚ್ಚಿನ ಮದುವೆಗಳು ವಿವಾಹ-ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ ಎಂದು ಪತ್ತೆಯಾಗಿದೆ. ಮದುವೆಯಾಗಿ ಸಂತೋಷವಾಗಿರುವ ೨೭%ರಷ್ಟು ಮಂದಿ ಒಂದು ಪರ್ಯಾಯ ಸಂಬಂಧವನ್ನು ಹೊಂದಿರುತ್ತಾರಂತೆ..!  ೧೬,೦೦೦ ವಿಶ್ವವಿದ್ಯಾನಿಲಯದ-ವಿದ್ಯಾರ್ಥಿಗಳ ೫೩ ರಾಷ್ಟ್ರಗಳಲ್ಲಿನ ಒಂದು ಇತ್ತೀಚಿನ ಸಮೀಕ್ಷೆಯಲ್ಲಿ, ೨೦%ರಷ್ಟು ದೀರ್ಘ-ಕಾಲದ ಸಂಬಂಧಗಳು ಒಬ್ಬ ಅಥವಾ ಇಬ್ಬರೂ ಸಂಗಾತಿಗಳು ಮತ್ತೊಬ್ಬರೊಂದಿಗೆ ಪರ್ಯಾಯ-ಸಂಬಂಧ ಹೊಂದಿದ್ದಾಗ ಇದು ಆರಂಭವಾಗುತ್ತವೆ ಎಂದು ಹೇಳಲಾಗಿದೆ.  ಸುಮಾರು ೩೦-೪೦%ನಷ್ಟು ಡೇಟಿಂಗ್ ಸಂಬಂಧಗಳು ಹಾಗೂ ೧೮-೨೦%ನಷ್ಟು ಮದುವೆಗಳು ಕನಿಷ್ಠ ಒಂದು ಲೈಂಗಿಕ ದಾಂಪತ್ಯ ದ್ರೋಹದ ಸಂಗತಿಯನ್ನು ಹೊಂದಿರುತ್ತವೆ ಎಂದು ಈ ಅಧ್ಯಯನಗಳು ಸೂಚಿಸುತ್ತವೆ. ವಿವಾಹಿತ ಅಥವಾ ಡೇಟಿಂಗ್ ಸಂಬಂಧದಲ್ಲಿ ಮಹಿಳೆಯರಿಗಿಂತ ಹೆಚ್ಚು ಪುರುಷರು ಪರ್ಯಾಯ ಲೈಂಗಿಕ ಸಂಬಂಧವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ.

ಯುನೈಟೆಡ್ ಕಿಂಗ್‌ಡಮ್‌ನ ಐವತ್ತು ವಿವಾಹ-ವಿಚ್ಛೇದನ ವಕೀಲರಲ್ಲಿ, ೨೦೦೩ರಲ್ಲಿ ಅವರ ಪ್ರಕರಣಗಳಿಗೆ ಹೆಚ್ಚು ಸಾಮಾನ್ಯ ಕಾರಣಗಳು ಯಾವೆಂದು ಕೇಳಲಾಯಿತು. ವಿವಾಹೇತರ ಸಂಬಂಧಗಳು ಕಾರಣವೆಂದು ಸೂಚಿಸಿದವರಲ್ಲಿ ೫೫%ನಷ್ಟು ಮಂದಿ ಇದಕ್ಕೆ ಸಾಮಾನ್ಯವಾಗಿ ಪತಿ ಕಾರಣವೆಂದು ಹಾಗೂ ೪೫%ನಷ್ಟು ಮಂದಿ ಪತ್ನಿಯರು ಕಾರಣವೆಂದು ಹೆಚ್ಚಿನ ತಜ್ಞರು ನಂಬಿದ್ದಾರೆ.

   * ದಾಂಪತ್ಯ ದ್ರೋಹ :

“ಸಾಂದರ್ಭಿಕ ಲೈಂಗಿಕತೆಗೆ ಲಿಂಗ ಭಿನ್ನತೆಯು ಕಾರಣವಾಗಿರುತ್ತದೆ. ದಾಂಪತ್ಯ ದ್ರೋಹವು ವಿವಿಧ ರೀತಿಯ ಕಾರಣಗಳಿಂದ ಬರುತ್ತದೆ, ಕೆಲವೊಮ್ಮೆ ಸಂಕೀರ್ಣವಾಗಿಯೂ ಇರುತ್ತದೆ. ಅದು ಪುರುಷ, ಸ್ತ್ರೀ ಮತ್ತು ಪುರುಷರೂ-ಸ್ತ್ರೀಯರೂ ಅಲ್ಲದ ಲಿಂಗಗಳಲ್ಲಿ ಭಿನ್ನವಾಗಿರುತ್ತವೆ. ಮೈಕೆಲ್ ಎ. ಫಾರ್ಮಿಕಾನ “ಸೈಕಾಲಿಜಿ ಟುಡೆ ಬ್ಲಾಗ್‌ನ ಪ್ರಕಾರ, “ಲೈಂಗಿಕತೆ ಮತ್ತು ಭಾವನಾತ್ಮಕತೆ ಮಧ್ಯೆ ಒಂದು ಅನ್ಯೋನ್ಯ ಸಂಬಂಧವಿದೆ. ಪುರುಷರು ಮತ್ತು ಮಹಿಳೆಯರು ಆ ಸಂಬಂಧವನ್ನು ವ್ಯಾಪಕವಾಗಿ ಭಿನ್ನ ಸೂಚನೆಗಳ ಮೂಲಕ ಸಾಧಿಸುತ್ತಾರೆ. ಆ ಭಿನ್ನತೆಗಳು ಸ್ಪಷ್ಟವಾಗಿ ಪ್ರತಿಯೊಂದು ಲಿಂಗದ ದಾಂಪತ್ಯ ದ್ರೋಹದ ಮೇಲೆ ಪರಿಣಾಮ ಬೀರುತ್ತವೆ, ದಾಂಪತ್ಯ ದ್ರೋಹವು ಭಾವನಾತ್ಮಕವಾಗಿರಲಿ ಅಥವಾ ಲೈಂಗಿಕವಾಗಿರಲಿ.

ಆನೆಟ್ಟ್ ಲಾವ್ಸನ್‌ಳ “ಅಡಲ್ಟರಿ ಆನ್ ಅನಾಲಿಸಿಸ್ ಆಫ್ ಲವ್ ಆಂಡ್ ಬೆಟ್ರಾಯಲ್ನಲ್ಲಿ ಆಕೆ ಹೀಗೆಂದು ವಿಚಾರ ಮಾಡುತ್ತಾಳೆ - ಪುರುಷರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ, ಅವರು ತಮ್ಮನ್ನು ತಾವು ಖಂಡನೆಗೆ ಒಳಪಡಿಸಲು ಮತ್ತು ಅವಲಂಬಿತರಾಗಲು ಬಯಸುತ್ತಾರೆ. ಅದೇ ಮಹಿಳೆಯರು ಪರ್ಯಾಯ-ಸಂಬಂಧಗಳನ್ನು ಹೊಂದಿರುವಾಗ ಹೆಚ್ಚು ಪ್ರಬಲರಾಗಬೇಕೆಂದು ಮತ್ತು ಸ್ವತಂತ್ರರಾಗಬೇಕೆಂದು ಬಯಸುತ್ತಾರೆ.

* ಕೆಲಸದಲ್ಲಿ ದಾಂಪತ್ಯ ದ್ರೋಹ :

ಕಛೇರಿಯಲ್ಲಿನ ರೊಮಾನ್ಸ್ , ಕೆಲಸದಲ್ಲಿನ ರೊಮಾನ್ಸ್ ಅಥವಾ ಸಂಸ್ಥೆಯಲ್ಲಿನ ಪರ್ಯಾಯ-ಸಂಬಂಧ ಎಂದರೆ ಒಂದೇ ಕಛೇರಿ, ಉದ್ಯೋಗದ-ಸ್ಥಳ ಅಥವಾ ವ್ಯವಹಾರದಲ್ಲಿ ಒಟ್ಟಿಗೆ ಕೆಲಸ ಮಾಡುವ ಇಬ್ಬರು ಮಧ್ಯೆ ಕಂಡುಬರುವ ರೊಮಾನ್ಸ್ ಆಗಿದೆ.   ಕಛೇರಿಯಲ್ಲಿನ ರೊಮಾನ್ಸ್‌ಗಳು ಬೆಳೆಯಲು ಮತ್ತೊಂದು ಕಾರಣವೆಂದರೆ ಸಹೋದ್ಯೋಗಿಗಳು ಒಟ್ಟಿಗೆ ಹೆಚ್ಚು ಸಮಯ ಕಳೆಯುವುದು. ಇಂದು ದಂಪತಿಗಳು ಪರಸ್ಪರ ಒಟ್ಟಿಗೆ ಇರುವುದಕ್ಕಿಂತ ಹೆಚ್ಚು ಕಾಲ ಸಹೋದ್ಯೋಗಿಗಳೊಂದಿಗೆ ಇರುತ್ತಾರೆ. ಲೀಸಾ ಮಿಲ್ಲರ್ ಮತ್ತು ಲೊರೈನ್ ಅಲಿ ನ್ಯೂಸ್‌ವೀಕ್‌ನ ಲೇಖನ “ದಿ ನ್ಯೂ ಇನ್ಫಿಡೆಲಿಟಿಯಲ್ಲಿ ಹೀಗೆಂದು ಸೂಚಿಸಿದ್ದಾರೆ - “ಸುಮಾರು ಶೇಕಡಾ ೬೦ರಷ್ಟು ಅಮರಿಕನ್ ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ಈ ಪ್ರಮಾಣವು ೧೯೬೪ರಲ್ಲಿದ್ದ ಶೇಕಡಾ ೪೦ರಷ್ಟಕ್ಕಿಂತ ಹೆಚ್ಚಾಗಿದೆ. ಶೇವ್ ಮ್ಯಾಗಜಿನ್‌ಗಾಗಿ ಡಾ. ಡೆಬ್ರಾ ಲೈನೊ ಬರೆದ ಲೇಖನದ ಪ್ರಕಾರ, ಮಹಿಳೆಯರು ಉದ್ಯೋಗದ-ಸ್ಥಳದಲ್ಲಿ ವಂಚಿಸಲು ಕಾರಣವೆಂದರೆ ಅವರು ಕೆಲಸದ-ಸ್ಥಳದಲ್ಲಿ ಪುರುಷರೊಂದಿಗೆ ಮಿತಿತಪ್ಪಿ ವ್ಯವಹರಿಸುವುದು ಹಾಗೂ ಅದರ ನೇರ ಪರಿಣಾಮವಾಗಿ ಹೆಚ್ಚಿನವರು ವಂಚಿಸುವ ಅವಕಾಶಗಳನ್ನು ಹೊಂದಿರುತ್ತಾರೆ.

* ದಾಂಪತ್ಯ ದ್ರೋಹ ಮತ್ತು ಇಂಟರ್ನೆಟ್

ಇಂಟರ್ನೆಟ್ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಸಾಮಾನ್ಯವಾಗಿ ಆಧುನಿಕ ಜೋಡಿಗಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ೨೦೦೩ರ ಗ್ಲೋಬಲ್ ಇಂಟರ್ನೆಟ್ (ಅಂಕಿಅಂಶ) ಸ್ಟ್ಯಾಟಿಸ್ಟಿಕ್ಸ್‌ನ ಪ್ರಕಾರ, ಪ್ರಪಂಚದಾದ್ಯಂತ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು ಒಂದು ದಶಕದೊಳಗೆ ಅಸಾಧಾರಣ ರೀತಿಯಲ್ಲಿ ಅತಿ ವೇಗವಾಗಿ ಬೆಳೆದಿದೆ, ೧೯೯೫ರಲ್ಲಿ ೧೬ ದಶಲಕ್ಷದಷ್ಟಿದ್ದ ಬಳಕೆದಾರರ ಸಂಖ್ಯೆಯು ೨೦೦೩ರ ಉತ್ತರಾರ್ಧದಲ್ಲಿ ಸರಿಸುಮಾರು ೬೮೦ ದಶಲಕ್ಷಕ್ಕೆ ಏರಿದೆ. ಅದು೨೦೧೨ ಶೇ.೧೦ ರಷ್ಟು ಹೆಚ್ಚಾಗಿದೆ. ಈಗಂತೂ ಇನ್‌ಟರ್‌ನೆಟ್ ಇಲ್ಲದೇ ಜೀವನವೇ ಇಲ್ಲ ಎಂಬಂತಾಗಿದೆ.  ಅಂತಹ ದಶಲಕ್ಷದಷ್ಟು ಬಳಕೆದಾರರು ಅಪರಿಚಿತರನ್ನು ಭೇಟಿಯಾಗಲು, ಪ್ರೇಮದ ಚೆಲ್ಲಾಟವಾಡಲು ಮತ್ತು ಹೆಚ್ಚಾಗಿ ಲೈಂಗಿಕತೆಯ ಬಗ್ಗೆ ಮಾತಕತೆಯಾಡಲು ಇಂಟರ್ನೆಟ್‌ನ್ನು ಬಳಸುವವರಹ ಹೆಚ್ಚಾಗಿದ್ದಾರೆ.

ಇಂಟರ್ನೆಟ್ ದಾಂಪತ್ಯ ದ್ರೋಹದ ಬಗೆಗಿನ ಸಂಶೋಧನೆಯು ಹೆಚ್ಚುಕಡಿಮೆ ಹೊಸ ಆಸಕ್ತಿಯ ವಿಷಯವಾಗಿದೆ. ಇಂಟರ್ನೆಟ್ ಮೂಲಕ ಯಾವುದೇ ರೀತಿಯ ಲೈಂಗಿಕ ಮಾತುಕತೆಯನ್ನು ದಾಂಪತ್ಯ ದ್ರೋಹವೆಂದು ಹೇಳಲಾಗುವುದಿಲ್ಲ ಏಕೆಂದರೆ ಇದರಲ್ಲಿ ದೈಹಿಕ ಸಂಪರ್ಕವಿರುವುದಿಲ್ಲ. ಅಲನ್ ಸಾಬಲ್ ಮತ್ತು ನಿಕೋಲಸ್ ಪವರ್ “ದಿ ಫಿಲಾಸಫಿ ಆಫ್ ಸೆಕ್ಸ್ ಪುಸ್ತಕದಲ್ಲಿ ಈ ವಿಷಯ ದಾಖಲಿಸಿದ್ದಾರೆ.

ಇಂದಿನ ಮೊಬೈಲ್, ಇನ್‌ಟರ್‌ನೆಟ್,  ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಅಪ್, ವೀಚಾಟ್, ಗೂಗಲ್ ಚಾಟ್ ಸೇರಿದಮತೆ ಹಲವು ಉಪಯುಕ್ತ ತಂತ್ರಜ್ಞಾನಗಳೂ ಸಹ ಇತ್ತೀಚೆಗೆ ಅಕ್ರಮ ಸಂಬಂಧಗಳಿಗೆ ಕೊಂಡಿ ಬೆಸೆಯುವ ಕಾರ್ಯ ಮಾಡಲು ಸಹಕಾರಿಯಾಗುತ್ತವೆ ಎಂದು ಸಮೀಕ್ಷೆಯೊಂದು ಸ್ಪಷ್ಟಪಡಿಸಿದೆ. ಆದಷ್ಟೂ ಚಾಟಿಂಗ್‌ನಿಂದ ದೂರವಿರುವುದು ಸೇಫ್ ಜೀವಕ್ಕೆ ಸಹಕಾರಿಯೆಂದೂ ಸಹ ತಿಳಿಸಲಾಗಿದೆ.


ಯಶಸ್ವೀ ಪ್ರೀತಿಗೆ ಮೂರು ಮೆಟ್ಟಿಲುಗಳು


“I love you” takes 3 seconds to say, 3 hours to explain and a lifetime to prove.


ಹೌದು, ಪ್ರೀತಿ ಎಂದರೆ ಒಂದರ್ಥದಲ್ಲಿ ಬೇಧಿಸಿಕೊಂಡು ಹೊರ ಬರಲಾಗದಂತಹ ಚಕ್ರವ್ಯೂಹ. ಇದರಲ್ಲ್ಲಿ ಎಲ್ಲವೂ ಇದೆ. ಸ್ಪಲ್ಪ ಖುಷಿ ಇದ್ದರೆ, ಹೆಚ್ಚು ನೋವಿದೆ. ಆ ನೋವಿನಲ್ಲೇ ಎನೋ ಒಂದು ತರಹದ ಸುಖವಿದೆ. ಅದು ಸುಖವೋ, ನೋವೋ ಎಂದು ಅರಿಯುವುದು ಕಷ್ಟಸಾಧ್ಯ. Once you start loving someone, it’s hard to stop.. ಎಂದು ಹೇಳಿರುವುದು ಇದಕ್ಕೆ.

 ಪ್ರೀತಿ ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು. ಅದರಲ್ಲೂ ನಿಜವಾದ ಪ್ರೀತಿ ಅಂದರೆ ಯಾವುದು? ನಿಜವಾದ ಪ್ರೀತಿ ಅಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ, ಮನದಲ್ಲಿ ಮೂಡುವುದು ಸಹಜ.

ಪ್ರೀತಿಸುವ ಪ್ರತಿಯೊಬ್ಬರಿಗೂ ಮೂರು ಮುಖ್ಯ ಹಂತಗಳಲ್ಲಿ ಪ್ರೀತಿ ತನ್ನನ್ನು ತಾನು ಪರೀಕ್ಷಿಸಿಕೊಳ್ಳುತ್ತೆ. ಪ್ರೀತಿ ತನ್ನ ಪ್ರಭಾವ ತೋರಿಸೋದೆ ಮೂರನೇ ಹಂತದಲ್ಲಿ..! ಯಾವುವು ಆ ಮೂರು ಹಂತಗಳು ಎಂದು ಆಲೋಚಿಸುತ್ತಿದ್ದೀರಾ?

ಮೊದಲನೆಯದು ಹಾಗೋ ಹೀಗೋ ಕಳೆದುಹೋಗಿಬಿಡುತ್ತೆ. ಇಷ್ಟಪಟ್ಟವರಿಗೆ ಕಷ್ಟಪಟ್ಟು ಹೇಗೋ ಐ ಲವ್ ಯೂ ಎಂದು ಹೇಳಿಬಿಡುತ್ತೀರಿ. ಆ ಕ್ಷಣ ಬದುಕಿನ ಒಂದನೇ ಹಂತವನ್ನು ನೀವು ದಾಟಿ ಹೋಗಿರುತ್ತೀರಿ.   ಎಡನೇ ಹಂತಕ್ಕೆ ನೀವು ಬಂದು ತಲುಪಿದಾಗ ಮೊದಲನೇ ಹಂತದಲ್ಲಿದ್ದ ನಿಮ್ಮ ಉತ್ಸಾಹ ಹಾಗೆಯೇ ಉಳಿದಿರುವುದಿಲ್ಲ. ಇಲ್ಲಿ ಅನುಮಾನ, ಹಠ, ತಾಳ್ಮೆ ಮತ್ತು ಅರ್ಥ ಮಾಡಿಕೊಳ್ಳುವಿಕೆ ಎಂಬುದು ನಿಮ್ಮ ಪ್ರೀತಿಯನ್ನು ಪರೀಕ್ಷಿಸಲು ನಿಲ್ಲುತ್ತವೆ. ಇದರಲ್ಲಿ ನಿಮ್ಮ ಗೆಲುವು ನೀಮ್ಮ ಪ್ರೀತಿಯ ಪಾವಿತ್ರ್ಯತೆ ಮತ್ತು ದೃಢತೆಯನ್ನು ಅವಲಂಬಿಸಿರುತ್ತೆ. ನಿಮ್ಮ ಪ್ರೀತಿ ನಿಜವೇ ಆಗಿದ್ದರೆ ಮೂರನೇ ಮೆಟ್ಟಿಲೇರಲು ನೀವು ಅರ್ಹರಾಗುತ್ತೀರಿ. ಇಲ್ಲದಿದ್ದರೆ. ಪ್ರೀತಿ ಒಂದು ಮಕ್ಕಳಾಟ, ವಯಸ್ಸಿನ ಆಸೆಗಳ  ಈಡೇರಿಕೆಗೆ  ಉಪಯೋಗಿಸುವ ಒಂದು ಶಬ್ದವೇ ಪ್ರೀತಿ ಎಂದೆನಿಸಿಬಿಡುತ್ತೆ.

ಕರಗಿಸದೇ ಚಿನ್ನದ ಗುಣಮಟ್ಟ ಅಳೆಯಲು ಸಾಧ್ಯವಿಲ್ಲ. ಶಿಲ್ಪಿಯ ಕೈಯಿಂದ ಉಳಿಯೇಟು ಬೀಳದೇ ಶಿಲೆ ಶಿಲ್ಪವಾಗುವುದಿಲ್ಲ. ಎರಡನೇ ಹಂತದಲ್ಲಿ ಪ್ರೀತಿಯ ಪರೀಕ್ಷೆ ನಡೆದರೆ  ಇನ್ನು ಮೂರನೇ ಹಂತದಲ್ಲಿ ತಾಳ್ಮೆಯ ಪರೀಕ್ಷೆ. ಇಲ್ಲಿ ತಾಳ್ಮೆ,  ನಂಬಿಕೆ ಮುಖ್ಯ, ಕಷ್ಟಗಳನ್ನು ಎದುರಿಸಿ ಜಯಿಸುವ ಮನಸ್ಸು ಮುಖ್ಯ. ಮನೆಯವರನ್ನು, ಸಮಾಜವನ್ನು ಎದುರಿಸಿ ಬದುಕಿ ತೋರಿಸಲು ನಿಮ್ಮಿಂದಾದರೆ, ನಿಮ್ಮವರೇ ನಿಮ್ಮನ್ನು ಕೊನೆಗೊಂದು ದಿನ ಒಪ್ಪಿಕೊಂಡು, ನೀವು ಮಾಡಿದ ತಪ್ಪು ನಿಮ್ಮವರಿಗೆಲ್ಲ ತಪ್ಪಲ್ಲ ಎಂದೆನಿಸಿದರೆ,  ನಿಮ್ಮ ಬದುಕಿನ ಪಯಣದಲ್ಲಿ ಪ್ರೀತಿಯ ಪರೀಕ್ಷೆಯಲ್ಲಿ ನೀವು ಪಾಸಾದಂತೆಯೇ. ಅದರೆ, ಅಸಲಿ ಸತ್ವಪರೀಕ್ಷೆಗಳು ಎದುರಾಗುವುದು ಈ ಹಂತದಲ್ಲೇ.

ಒಂದೆಡೆ ಸಮಾಜ ಕೇಳುವ ಪ್ರಶ್ನೆಗೆ ಉತ್ತರಿಸುವ ಅನಿವಾರ್ಯತೆ,  ಬದುಕಿನಲ್ಲಿ ಬದುಕಲಿಕ್ಕಾಗಿ ಕೆಲಸ ಹಿಡಿದು ಕನಸು ಕಟ್ಟಿ ಹೋರಾಡುವ ಹಂತ. ನಿಮ್ಮನ್ನು ನೀವು ಅರ್ಪಿಸಿಕೊಳ್ಳುವ ಹಂತ. ನಿಮ್ಮ ತಾಳ್ಮೆಗೆ ಆಗಾಗ ಉಳಿ ಏಟುಗಳು ಬೀಳುವ ಹಂತ. ಈ ಎಲ್ಲ ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯ ನಿಮಗಿದ್ದು, ಏನೇ ಮಾಡಿದರೂ  ಪ್ರೀತಿಸಿದವರನ್ನು ಸಹಿಸಿಕೊಳ್ಳುವ ತಾಳ್ಮೆ ನಿಮಗಿದ್ದರೆ ಒಂದು ಹಂತಕ್ಕೆ ಪ್ರೀತಿಯಲ್ಲಿ ನೀವು ಪಾಸಾದಂತೆಯೇ. ನಿಮ್ಮ ಪ್ರೀತಿಯನ್ನು ನಿರೂಪಿಸಿದಂತೆಯೇ.

ನಿಜವಾದ ಪ್ರೀತಿ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಅಗತ್ಯ. ಪ್ರೀತಿಯ ಸಂಬಂಧವನ್ನು ಬೆಳೆಸುವಾಗ ನಿಜವಾದ ಪ್ರೀತಿ ಹೌದೋ ಅಲ್ಲವೋ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕು. ಹಾಗಾಗಿ ಪ್ರೀತಿಯ ಸಂಬಂಧ ಬೆಳೆಸುವಾಗ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.