Tuesday 19 November 2013

ಭರವಸೆಗಳ ಬದುಕಿಗೆ ಬೆಳಕಾಗಲಿ ದೀಪಾವಳಿ



ದಾಪುಗಾಲಿಟ್ಟು ದೀಪಗಳ ಬೆಳಕನ್ನು ಹೊತ್ತು ಮತ್ತೆ ಬಂದಿದೆ ದೀಪಾವಳಿ. ಸಂಭ್ರಮ ತುಂಬಿಕೊಂಡು ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳು ಇನ್ನೇನು ಮೆರವಣಿಗೆ ಹೊರಡುತ್ತವೆ. ಆ ವೈಭವವನ್ನು ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗೆ ಆವರಿಸಿದ್ದ ಕತ್ತಲೆಯನ್ನು ಬೆಳಕು ಬಂದು ಹೊಡೆದೊಡಿಸಿದಂತಹ ಅನುಭವ.   ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳದೇ, ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಕಷ್ಟದ ಕತ್ತಲನ್ನು ಧೈರ್ಯದ ಜ್ಯೋತಿಯಿಂದ  ದೂರವಾಗಿಸಿಕೊಂಡು. ಹೊಸ ಬಾಳಿಗೆ ಹೊಸದೊಂದು ಮುನ್ನುಡಿ ಬರೆಯುವ ಪ್ರಯತ್ನವೇ ಈ ದೀಪಾವಳಿ ತಾತ್ಪರ್ಯ.   ಜೀವನದಲ್ಲಿ ಏಳುಬೀಳುಗಳು ಸಹಜ. ಹಗಲು-ರಾತ್ರಿಗಳ ಹಾಗೆ.  ಒಮ್ಮೆ ರಾತ್ರಿಯಾದರೆ ನಿರಾಸೆಗೊಳ್ಳದೆ ಬೆಳಕನ್ನು ಹೊತ್ತು ತರುವ ಸೂರ್ಯನಿಗೆ ಎದುರು ನೋಡುವ ಪ್ರಯತ್ನದಲ್ಲೇ ಜೀವನದ ಸಂತೋಷದ ಗುಟ್ಟು ಅಡಗಿರುತ್ತೆ. ಅದಕ್ಕೇ ಇರಬೇಕು, ದೀಪಾವಳಿಯೊಂದಿಗೆ ದೀಪಗಳನ್ನು ಗಂಟು ಹಾಕಿರುವುದು. ದೀಪಗಳ ಕಾಂತಿಯಲ್ಲೇ ಬದುಕಿನ ದೀಪದ ಉತ್ಸಾಹದ ಬತ್ತಿಗೆ ಸಂತೋಷದ ಕಾಂತಿ ಹಚ್ಚಿಕೊಂಡು ಕಂಗೊಳಿಸುವುದು. ದೀಪಾವಳಿ ಬರಿ ಉಂಡು ಕಳೆಯುವ ಹಬ್ಬವಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಸಂಭ್ರಮವನ್ನು  ಮನಸ್ಸಿನ ಉಗ್ರಾಣದೊಳಗೆ ತುಂಬಿಕೊಳ್ಳುವ ಕ್ಷಣ. ಮನೆಯಲ್ಲಿ ಎಲ್ಲರೂ ಇದ್ದರೆ ಭವ್ಯ ಬೆಳಕು ಹೊತ್ತಿಕೊಂಡಂತೆಯೇ. ಹಾಗಾಗಿಯೇ ಈ ಹಬ್ಬಕ್ಕೆಂದರೆ ಎಲ್ಲರೂ ಮನೆಗೆ ಬಂದು ಸೇರುತ್ತಾರೆ. ನಮ್ಮಲ್ಲಿಯ ಕುಟುಂಬ ಪರಿಕಲ್ಪನೆಯಲ್ಲಿ ಹೀಗೆ ಎಲ್ಲರೂ ಕೂಡಿ-ಆಡಿ ನಲಿದರೆ ಸಂತೋಷದ ಹೊಳೆಯೇ ಹರಿದುಬಿಡುತ್ತದೆ. ಆ ಬೆಳಕಿನಿಂದಲೇ ಭರವಸೆಗಳು ಹುಟ್ಟುತ್ತವೆ. ಆ ಭರವಸೆಗಳೇ ಬದುಕಿಗೆ ಆಧಾರ ಸ್ಥಂಭಳಿದ್ದಂತೆ.

ಈ ಬಾರಿಯ ದೀಪಾವಳಿಯಿಂದ ಬಾಳಿನಲ್ಲ್ಲಿ ತುಂಬಿಕೊಂಡ ಬೆಳಕು ಮುಂದಿನ ದೀಪಾಳಿಯವರೆಗೂ ನಿಮ್ಮ ಬದುಕಿನ ಹಾದಿಗೆ ದಾರಿ ತೋರಿಸಲಿ. ಕಷ್ಟಗಳು ದೇವತೆಗಳನ್ನೇ ಬಿಟ್ಟಿಲ್ಲ. ಇಂದಿಗೂ ಜಗತ್ತನ್ನೇ ಬೆಳಗುವ ಸೂರ್ಯನಿಗೂ ಕೂಡ ಗ್ರಹಣದ ಹೆಸರಲ್ಲಿ ಅಂಧಕಾರ ಕವಿದುಕೊಳ್ಳುತ್ತದೆ. ಆದರೆ ಅದು ಕ್ಷಣಮಾತ್ರ. ತದನಂತರ ಸೂರ್ಯ ಮತ್ತೆ ತಾನು ಪ್ರಕಾಶಿಸಿ ಜಗತ್ತನ್ನು ಬೆಳಗುತ್ತಾನೆ.

ಕಷ್ಟಗಳು ಹುಟ್ಟುವಾಗ ಅದರ ಜೊತೆ ಪರಿಹಾರವೂ ಜನ್ಮತಾಳಿರುತ್ತೆ. ಆ ಪರಿಹಾರವನ್ನೂ ಹುಡುಕಿಕೊಳ್ಳುವ ಸಮಾಧಾನದ ನಡವಳಿಕೆ ನಮ್ಮಲ್ಲಿರಬೇಕು ಅಷ್ಟೇ. ಕಷ್ಟ-ಸುಖಗಳು ಒಂದೇ ನಾಣ್ಯದ ಎರಡು ಮುಖಗಳು. ಕಷ್ಟದ ಹಿಂದೆಯೇ ಸುಖ ಅಡಗಿರುತ್ತದೆ. ನಾಣ್ಯದ ಮುಖ ಬದಲಾಗುವವರೆಗೂ ಕಾಯುವವರಿಗೆ ಮಾತ್ರ ಸುಖದ ದರ್ಶನವಾಗೋದು. ಆ ತಾಳ್ಮೆ, ನೆಮ್ಮದಿ, ಆರೋಗ್ಯ, ಚೈತನ್ಯ  ಐಶ್ವರ್ಯಗಳ ಪ್ರತೀಕವಾಗಲಿ ಈ ದೀಪಾವಳಿ. ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಲು ಪ್ರತಿ ದಿನವೂ ಪ್ರಯತ್ನಿಸಿ. ಈ ದೀಪಾವಳಿ ತಂದಿರುವ ದಿವ್ಯ ದೀಪದಲ್ಲಿ ನಮ್ಮ ಮನೆ-ಮನಗಳ ದೀಪಗಳನ್ನು ಹಚ್ಚಿಕೊಳ್ಳಬೇಕು. ಆ ಬೆಳಕಿನಲ್ಲಿ ನಾವು ನಮ್ಮ ಬದುಕಿನ ಭರವಸೆಗಳನ್ನು ಬೆಳೆಸಿಕೊಳ್ಳಬೇಕು.  ಮಧುರ ಬಾಂಧವ್ಯದ ಎಣ್ಣೆ ಸುರಿದು ನಂದಾದೀಪವಾಗುವಂತೆ ಮಾಡಿಕೊಳ್ಳಬೇಕು. ಅಂಥ ಕ್ಷಣ ಎದುರಾಗಿದೆ. ಬನ್ನಿ ಎಲ್ಲರೂ ದೀಪ ಹಚ್ಚೋಣ, ಹಚ್ಚಿಕೊಳ್ಳೋಣ, ಬೆಳಗೋಣ, ನಮ್ಮೊಳಗೂ ಬೆಳಗಿಕೊಳ್ಳೋಣ. ಬದುಕಿಗೆ ಭರವಸೆಗಳನ್ನು ಬೆಳೆಸಿಕೊಳ್ಳೋಣ. ಬದುಕೋಣ.

1 comment:

  1. The Casino in Las Vegas, NV - Mapyro
    The Casino in 인천광역 출장샵 Las Vegas, NV. 1.4 mi (2 km) from Mandalay Bay. This casino is located in 제천 출장안마 Las Vegas and is close to the 충청남도 출장안마 Venetian 김해 출장안마 Las Vegas.3 의왕 출장안마 miles to

    ReplyDelete