Saturday 14 September 2013

ಮ್ಯಾರೀಡ್ ಲೈಫ್ 'ಹ್ಯಾಪಿ' ಆಗೋದು ಯಾವಾಗ...?

’ಹ್ಯಾಪಿ ಮ್ಯಾರೀಡ್ ಲೈಫ್?, ಹೌದು, ಹೀಗೆ, ಸಾವಿರಾರು ಜನ ಸೇರಿ, ಹರಸಿ ನೂರು ಕಾಲ ಸಂತೋಷದಿಂದಿರಿ ಎಂದು ಆಶೀರ್ವದಿಸಿ. ಬದುಕಿನ ಹೊಸ ತಿರುವಿಗೆ ಮನಮೆಚ್ಚಿದವರನ್ನು ಜೋಡಿ ಮಾಡಿ. ಬದುಕಿನ ಹಾದಿಯಲ್ಲಿ ಸ್ವತಂತ್ರ್ಯರಾಗಿ ಸಾಗಲು ಅನುವು ಮಾಡಿಕೊಡುವ ಆ ಕ್ಷಣ ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ಮಧುರ ಕ್ಷಣ. ಈ ಕ್ಷಣದ ವರೆಗೂ ಹೇಗೋ ಬದುಕಿದೆವು, ಇನ್ನು ನಿನಗೆ ನಾನು, ನನಗೆ ನೀನು ಎಂದು ಪಂಚಭೂತಗಳ ಸಾಕ್ಷಿಯಾಗಿ, ಬಂಧು ಬಳಗದವರ ಸಮ್ಮುಖದಲ್ಲಿ ಒಬರನ್ನೊಬ್ಬರು ಅರಿತು, ಬೆರೆತು ಬದುಕಲು, ಒಂಟಿ ಜೀವಕ್ಕೆ ಜಂಟಿಮಾಡಿ ಜೀವನದ ಪಯಣಕ್ಕೆ ಬೇಸರವಾಗದೆ, ಒಬ್ಬರಿಗೊಬ್ಬರು ಆಸರೆಯಾಗಿರಲಿ ಎಂದು ನಡೆಯುತ್ತಿದ್ದ ಮದುವೆಗಳ ಕಾಲ ಇಗೀಲ್ಲ. ಈಗಿನವರು ಈ ಮದುವೆಯನ್ನು  ಇಷ್ಟಪಡುವುದೂ ಇಲ್ಲ. ಕಾಲಕ್ಕೆ ತಕ್ಕಂತೆ ಜನ ಬದಲಾಗುತ್ತಾರೆ ಎನ್ನುತ್ತಾರೆ ಆದರೆ ಇಲ್ಲಿ ಕಾಲ ಬದಲಾಗಿಲ್ಲ ಜನರು ಬದಲಾಗಿದ್ದಾರೆ. ತಾವು ಬದಲಾಗುವುದರೊಂದಿಗೆ ಕಾಲ. ಆಚಾರ. ವಿಚಾರ, ಸಂಸ್ಕೃತಿಯನ್ನೇ ಬದಲಾಯಿಸುತ್ತಿದ್ದಾರೆ.
ಒಂದು ತಿಂಗಳುಗಟ್ಟಲೆ ನಡೆಯುತ್ತಿದ್ದ ಒಂದು ಮದುವೆ ಇಂದು ಒಂದೇ ಒಂದು ಸಹಿಯಲ್ಲಿ ಮುಗಿದುಹೋಗುತ್ತಿದೆ. ಹಾಗೆಯೇ ಬೇಡವಾದಾಗಲೆಲ್ಲ ಅದೇ ಒಂದು ಸಹಿಯಿಂದ ಡಿವೋರ್ಸ್ ಪಡೆದು ಬೇರಾಗುತ್ತಿದ್ದಾರೆ. ಹೀಗಾದರೆ ಮ್ಯಾರೀಡ್ ಲೈಫ್ ’ಹ್ಯಾಪಿ’ ಆಗೋದಾದರೂ ಹೇಗೆ?
 ಕಾರಣ ಇಷ್ಟೇ, ಈ 'ಸಹಿ' ಮದುವೆಗಳಲ್ಲಿ ಜವಾಬ್ದಾರಿಗಳ ಬಗೆಗಿನ ಅರಿವು ಇರುವುದಿಲ್ಲ. ಮನೆಯವರ ವಿರೋಧದ ನಡುವೆಯೂ ಮದುವೆಯಾದರೆ ಯಾವ ರೀತಿಯ ಸಹಕಾರಗಳೂ ಸಿಗುವುದಿಲ್ಲ. ನಿಮ್ಮ ಜೀವನವನ್ನು ನೀವೇ ನಿಭಾಯಿಸಿ ಕೊಳ್ಳಬೇಕಾಗುತ್ತದೆ. ಬದುಕಿನ ಅಸಲಿ ದರ್ಶನ ಆಗೋದೇ ಆಗ. ಸಮಸ್ಯೆಗಳು ಒಂದೊಂದಾಗಿ ಹಿತ ಶತ್ರ್ರುಗಳಂತೆ ಕಾಡಲಾರಂಭಿಸುತ್ತವೆ. ಆಗ ಲವ್ ಮ್ಯಾರೇಜ್‌ಗೂ, ಅರೇಂಜ್ ಮ್ಯಾರೇಜ್‌ಗೂ ಇರುವ ವ್ಯತ್ಯಾಸ ಕಣ್ಣೆದುರು ಕುಣಿದಾಡತೊಡಗುತ್ತೆ. ಎಲ್ಲವೂ ಸರಿಯಾಗಿಯೇ ಇದೇ,  ಮನೆಯವರನ್ನು ಎದುರಿಸಿ ಇಷ್ಟಬಂದವರನ್ನು ಮದುವೆಯಾಗಿ ಬದುಕಬಲ್ಲೇ ಎಂಬ ನಂಬಿಗೆ ನಿಮ್ಮಲ್ಲಿದ್ದು, ಅದೃಷ್ಟ ನಿಮ್ಮ ಕೈ ಹಿಡಿದರೆ ನೀವು ಬಚಾವ್, ಇಲ್ಲದಿದ್ದರೇ ನಿಮ್ಮೊಂದಿಗೆ ನಿಮ್ಮನ್ನು ನಂಬಿದವರೂ ಕೂಡ ಬೀದಿ ಪಾಲಾಗೋದು ಖಚಿತ. ಸಂಸಾರದ ನೌಕೆಯಲ್ಲಿ ಬಿರುಕು ಕಾಣಿಸಿಕೊಂಡು ಒಂದು ದಿನ, ಜೀವನವೇ ಮುಳುಗುವುದು ಸತ್ಯ.. ಇದೇ ಎಷ್ಟೋ ಲವ್ ಮ್ಯಾರೇಜ್‌ಗಳ ದುರಂತ ಅಂತ್ಯ.
ಒಂದು ಮದುವೆಗೆ ಪೂರ್ಣ ಅರ್ಥ ಸಿಗುವುದು. ಹಿರಿಯರ ಆಶೀರ್ವಾದದಿಂದ ಮಾತ್ರ. ಏಕೆಂದರೆ, ಎಲ್ಲರಿಂದಲೂ, ಎಲ್ಲ್ಲಾ ತರಹದ ಸಹಕಾರಗಳೂ ಸಿಗುತ್ತವೆ. ಹೇಗೋ ಬದುಕನ್ನು   ಟ್ರ್ಯಾಕ್‌ಗೆ ತಂದುಕೊಳ್ಳಬಹುದು. ಬದುಕಿನಲ್ಲಿ ಗೊತ್ತಿಲ್ಲದೇ ಇಡುವ ತಪ್ಪು ಹೆಜ್ಜೆಗಳನ್ನು ಸರಿ ದಾರಿಗೆ ತರುವಲ್ಲಿ ನಮ್ಮ ಸುತ್ತಲೂ ಇರುವ ದೊಡ್ಡವರು, ಅನುಭವಸ್ಥರು ನೆರವಾಗುತ್ತಾರೆ. ಜೊತೆಗೆ ಆರ್ಥಿಕ ದೃಷ್ಟಿಯಿಂದ ಯೋಚಿಸಿದರೆ ’ಅರೇಂಜ್ ಮ್ಯಾರೇಜ್ ಬೆಟರ್? ಎಂದೆನಿಸುತ್ತದೆ. ಅದರಲ್ಲೂ ಲವ್ ಕಂ ಅರೇಂಜ್ ಮ್ಯಾರೇಜ್ ಆದರೆ ಸ್ವರ್ಗಕ್ಕೇ ಮೂರೇ ಗೇಣು. ಆದರೆ, ಈ ದುಬಾರಿ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆಗೋದು ಸುಲಭದ ಮಾತಲ್ಲ. ಯಾವ ವಯಸ್ಸಿನಲ್ಲಿ? ಹೇಗೆ ಮದುವೆಯಾಗಬೇಕು ಎಂಬುದನ್ನು ಒಮ್ಮೆ ಯೋಚಿಸಲೇಬೇಕು.  ಹಾಗಾದರೆ  

* ಮ್ಯಾರೀಡ್ ಲೈಫ್ ಹ್ಯಾಪಿ ಆಗೋದು ಯಾವಾಗ? ಹೇಗೆ? 
    ಈ ಕಾಲದಲ್ಲಿ ಮದುವೆ ಅಂದರೆ ಸುಮ್ಮನೆ ಅಲ್ಲ. ಮದುವೆಯಾದ ನಂತರದ ಆರ್ಥಿಕ ಬದುಕನ್ನು ಮೊದಲೇ ಯೋಜಿಸಬೇಕು. ಹಿಂದೆ ಅವಿಭಕ್ತ ಕುಟುಂಬಗಳಿರುತ್ತಿದ್ದವು, ಎಲ್ಲರೂ ದುಡಿಯುತ್ತಿದ್ದರು, ಎಲ್ಲರೂ ತಿನ್ನುತ್ತಿದ್ದರು. ಹತ್ತರಲ್ಲಿ ಇನ್ನೊಂದು ಅನ್ನೋ ರೀತಿ ಮದುವೆ ಆದರೂ ಅರ್ಥಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಇರುತ್ತಿರಲಿಲ್ಲ. ಆದರೆ ಈಗ ಅವಿಭಕ್ತ ಕುಟುಂಬಗಳೆಲ್ಲವೂ ಛಿದ್ರವಾಗಿರುವುದರಿಂದ ಮದುವೆ ಎನ್ನುವುದು ಹೊರೆ, ಜವಾಬ್ದಾರಿ ಎನಿಸಲು ಶುರುವಾಗಿದೆ. ಈ ಕಾರಣಕ್ಕೆ ಮದುವೆ ಮುನ್ನ ಹಾಗೂ ನಂತರದ ಹಣಕಾಸಿನ ನಿರ್ವಹಣೆಯ ಬಗ್ಗೆ ಮೊದಲೇ ಲೆಕ್ಕ ಹಾಕುವುದು ಒಳಿತು. 

  * ಬದುಕಿಗೂ ಒಂದು ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ಇರಲಿ : 
    ಬ್ಯಾಚುಲರ್ ಲೈಫ್ ಈಸ್ ಗೋಲ್ಡನ್ ಲೈಫ್? ಅನ್ನೋ ಮಾತಿದೆ. ಹೌದು. ಇದು ನಿಜ. ಸಂಪಾದನೆ ಮಾಡಿದ್ದನ್ನೆಲ್ಲಾ ಖರ್ಚು ಮಾಡಬಹುದು. ಐಷಾರಾಮಿ ಪಾರ್ಟಿಗಳಲ್ಲಿ ಕುಡಿದು ತೇಗಬಹುದು. ತಿಂಗಳಿಗೆ ಇಷ್ಟೇ ಖರ್ಚು ಮಾಡಬೇಕು ಎಂಬ ಬೇಲಿ ಹಾಕಿ ಕೊಳ್ಳದೇ ಇರಬಹುದು. ಇದು ಒಂದು ರೀತಿ ಫ್ರೀಡಂ ಎಂದೆನಿಸಿದರೂ ಮದುವೆ ಆದಾಗ ಇವುಗಳಲ್ಲಿ ಶೇ. ೮೦ರಷ್ಟು ಫ್ರೀಡಂಗೆ ಬ್ರೇಕ್ ಬೀಳುತ್ತದೆ. ಬ್ಯಾಚುಲರ್ ಆಗಿದ್ದಾಗ ಮದುವೆಯ ನಂತರದ ಖರ್ಚುಗಳ ಬಗ್ಗೆ ಯೋಚನೆಯೇ ಬರುವುದಿಲ್ಲ. ಇದೊಂದು ರೀತಿ ಜಗತ್ತನ್ನೇ ಗೆಲ್ಲುವ ಹುಮ್ಮಸ್ಸು ಕೊಡುವ ಅವಧಿ. ಮದುವೆ ಎನ್ನುವ ಆಕರ್ಷಣೆಯಲ್ಲಿ ಮುಳುಗಿ ಬಹುತೇಕರು ಭವಿಷ್ಯದ ಆರ್ಥಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೇಗೋ ನಿಭಾಯಿಸಿದರಾಯಿತು ಅನ್ನೋ  ಉಡಾಫೆಯೇ ಹೆಚ್ಚು. ಭಾವನಾತ್ಮಕ, ದೈಹಿಕ ಹಿತ ಎಷ್ಟು ಮುಖ್ಯವೋ ಆರ್ಥಿಕ ಸಬಲತೆಯೂ ಅಷ್ಟೇ ಮುಖ್ಯ. ಆರ್ಥಿಕ ಸಮಸ್ಯೆ ಉಲ್ಬಣವಾದರೆ ಬದುಕಿನ ಉತ್ಸಾಹವನ್ನೇ ಇಂಗಿಸಿಹಾಕುತ್ತದೆ. ಅದಕ್ಕಾಗಿ ಮದುವೆ ಮೊದಲೇ ಇದಕ್ಕೆ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಂ ತರಹ ಮಳೆ ಬಂದಾಗಲೇ ನೀರನ್ನು ಶೇಖರಿಸಿಟ್ಟುಕೊಳ್ಳಬೇಕು. ದುಡಿಯುವ ಶಕ್ತಿ ಇದ್ದಾಗಲೇ ಹಣವನ್ನು ಸೇವ್ ಮಾಡಿಟ್ಟುಕೊಳ್ಳಬೇಕು.

* ಏನು ಮಾಡಬೇಕು?
    ಮೊದಲು ನೀವು ಮಾಡಬೇಕಾದದ್ದು ಇಷ್ಟೇ. ಎಲ್ಲಾ ಆದಾಯಗಳ ಮೂಲವನ್ನು ಕಲೆಹಾಕಿ. ತಿಂಗಳಿಗೆ ಎಷ್ಟು ಕೈಗೆ ಬರುತ್ತಿದೆ. ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ಪಟ್ಟಿ ಮಾಡಿ. ಇಲ್ಲಿ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು. ಬ್ಯಾಚುಲರ್ ಬದುಕು ಉಳಿತಾಯಕ್ಕೆ ಸೂಕ್ತ ಸಮಯ.  ಶೇ.೮೦ರಷ್ಟು ಉಳಿತಾಯ ಮಾಡಿ, ಶೇ.೨೦ರಷ್ಟು ಖರ್ಚು ಮಾಡಬಹುದಾದ ಕಾಲ ಇದು. ಮದುವೆ ಆಗುವ ತನಕ ನೀವು ಎಷ್ಟು ಹಣ ಉಳಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮದುವೆ ನಂತರದ ಬದುಕು ನೆಮ್ಮದಿಯಿಂದ ಇರುತ್ತದೆ.
ಈ ಕಾರಣಕ್ಕಾಗಿಯೇ ಕೆಲಸಕ್ಕೆ ೨೪ರ ವಯಸ್ಸಿಗೆ ಸೇರಿ, ೨೮ರಿಂದ ೩೦ ವರ್ಷದ ತನಕ ಮದುವೆ ಆಗದೇ ಇದ್ದರೆ- ೫-೬ ವರ್ಷದ ತನಕ ನೀವು ಹಣ ಉಳಿಸಬಹುದು. ಇಂದಿನ ಕಾಲದಲ್ಲಿ ಮದುವೆ ಎಂದರೆ ಸುಮ್ಮನೆ ಅಲ್ಲ. ಪ್ರೆಸ್ಟೀಜ್‌ಗಾಗಿ ದಾಂ, ಧೂಂ ಅಂತ ಮದುವೆ ಮಾಡುವುದು ಮುಖ್ಯ ಅಷ್ಟೇ. ಇದು ಹೆಚ್ಚಾಗಿ ಗ್ರಾಮೀಣ ಪ್ರದೇಶದವರ ಮೆಂಟಾಲಿಟಿ. ಒಂದು ವಿಷಯ ಗೊತ್ತಿರಲಿ- ಮದುವೆಯಲ್ಲಿ ತಿಂದು ಹೋದವರೆಲ್ಲಾ ಕಷ್ಟಕ್ಕೆ ಆಗುವುದಿಲ್ಲ. ಅದಕ್ಕೆ ಮೊದಲು ನಿಮ್ಮ ಆದಾಯ ಪಟ್ಟಿ ಮಾಡಿ. ನಿಮ್ಮೊಂದಿಗೆ ಮದುವೆ ಆಗುವವಳ/ ಆಗುವವರ ಅಭಿರುಚಿಗಳನ್ನು ಲೆಕ್ಕ ಹಾಕಿ. ಅಭಿರುಚಿಗಳ ಮೇಲೆ ಖರ್ಚು ನಿರ್ಧಾರಮಾಡಿ.


* ಉಳಿತಾಯದ ಬಹುದೊಡ್ದ ಮೂಲ ಆರೋಗ್ಯ :
    ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯದ ಮಹತ್ವ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ.  ಅದಕ್ಕಾಗಿಯೇ  ಆರೋಗ್ಯವೇ ಭಾಗ್ಯ?ವೆನ್ನುವುದು. ಹಣ, ಆಸ್ತಿ ಸಂಪಾದಿಸಿದ ಮಾತ್ರಕ್ಕೆ ಸುಖವಾಗಿ ಬದುಕಬಹುದು ಎಂದು ಭಾವಿಸುವುದು ದಡ್ಡತನ. ಒತ್ತಡದ ಮಧ್ಯೆ ಕೆಲಸ ಮಾಡುವಾಗ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಇಲ್ಲದಿದ್ದರೆ ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತನ್ನು ನಿಮ್ಮ ಆರೋಗ್ಯವೇ ಕಿತ್ತುಕೊಂಡುಬಿಡುತ್ತದೆ. ಜೊತೆಗೆ ಒಂದು ಆರೋಗ್ಯ ವಿಮೆ ಇರಲಿ. ಗಂಡ ಹೆಂಡತಿಯರ ಒಟ್ಟಾರೆ ಸಂಬಳದ ಮೂರು ತಿಂಗಳ ಸಂಬಳವನ್ನು ಪ್ರತ್ಯೇಕ ಅಕೌಂಟ್‌ನಲ್ಲಿ ಎತ್ತಿ ಇಡಿ. ಇದನ್ನು ತುರ್ತು ಅಗತ್ಯಕ್ಕೆ ಮಾತ್ರ ಬಳಸುವ ಶಪಥ ಮಾಡಿ. ತುರ್ತು ಎಂದರೆ ಒಂದು ಪಕ್ಷ ಕೆಲಸ ಕಳೆದು ಕೊಂಡ ಸಂದರ್ಭ ಎದುರಾದರೆ, ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿದರೆ ಆಗ ಬಳಸಬಹುದು. ಕೆಲವು ವಿಮೆಯಲ್ಲಿ ಪ್ರೆಗ್ನೆನ್ಸಿ ಖರ್ಚುಗಳೆಲ್ಲವೂ ಸೇರುತ್ತವೆ. ಅಂಥದ್ದನ್ನು ಆಯ್ದುಕೊಳ್ಳುವುದೇ ಬುದ್ಧಿವಂತಿಕೆ.  ಇನ್ನೊಂದು ಸಂಗತಿಯೇನೆಂದರೆ ಜೀವ ವಿಮೆ ಈ ಕಾಲದಲ್ಲಿ ಬಹಳ ಮುಖ್ಯ. ನಮ್ಮಲ್ಲಿ ಶೇ. ೪೦ರಷ್ಟು ಜನರ ಬ್ಯಾಂಕ್ ಖಾತೆ ಇಲ್ಲ. ಶೇ. ೬೦ರಷ್ಟು ಜನರು ವಿಮೆ ಮಾಡಿಸಿಯೇ ಇಲ್ಲ ಎಂದರೆ ನೀವು ನಂಬಲೇಬೇಕು.. ಈ ಸಾಲಿಗೆ ಹೊಸದಾಗಿ ಮದುವೆ ಆಗುವವರು ಸೇರಬಾರದು. ಒಂದು ಪಕ್ಷ ಗಂಡ ಹೆಂಡತಿಯರಲ್ಲಿ ಇಬ್ಬರಲ್ಲಿ ಒಬ್ಬರು ಮರಣ ಹೊಂದಿದರೆ- ಉಳಿದವರ ಜೀವನ ನಿರ್ವಹಣೆಗೆ ತೊಂದರೆಯಾದಾಗ ಹಾಗೇ ಪ್ಲಾನ್ ಮಾಡಬೇಕು. ಇದಕ್ಕಾಗಿ ವರ್ಷದ ಒಟ್ಟು ಆದಾಯದ ೧೦ಪಟ್ಟು ದುಡ್ಡು ಬರುವಂತೆ ವಿಮೆ ಪಾಲಿಸಿ ಮಾಡಿಸಿದರೆ ಒಳಿತು.


* ಗೂಡು ಕಟ್ಟುವ ಗುರಿಯಿರಲಿ :
ಒಂದು ಸಾಮಾನ್ಯ ಗುಬ್ಬಚ್ಚಿ ತನ್ನ ಜೀವಿತಾವಧಿಯಲ್ಲಿ ೩-೪ ಗೂಡುಗಳನ್ನು ಕಟ್ಟುತ್ತದೆಯಂತೆ. ಯಾವುದೇ ಪ್ರಾಣಿಯಾಗಲಿ, ಪಕ್ಷಿಯಾಗಲಿ ತನ್ನದೇ ಆದ ಗೂಡು ನಿರ್ಮಿಸಿಕೊಳ್ಳುವುದು ಪ್ರಕೃತಿಯ ನಿಯಮ. ಏಕೆಂದರೆ ಮನೆ ನೆಮ್ಮದಿಯ ಸಂಕೇತ. ಆದರೆ ಯಾವುದೇ ಮನುಷ್ಯ ತನ್ನ  ಜೀವಿತಾವಧಿಯಲ್ಲಿ ಒಂದೇ ಒಂದು ಮನೆಯನ್ನು ನಿರ್ಮಿಸಲು ಜೀವನವಿಡೀ ಕಷ್ಟಪಡಬೇಕಾಗುತ್ತೆ. ಈ ಕಾಲದಲ್ಲಿ ಮನೆ ಕಟ್ಟಿಕೊಳ್ಳುವುದು ಸಾಧಾರಣ ವಿಷಯವಲ್ಲ. ಅದೊಂದು ಸಾಧನೆ. ಸ್ವಂತ ಮನೆ ಕೊಳ್ಳಲು ಮದುವೆಯ ಮೊದಲೇ ಪ್ಲಾನ್ ಮಾಡಬೇಕು. ಮನೆಗಾಗಿಯೇ ಇಷ್ಟು ಅಂಥ ಉಳಿಸಬೇಕು. ಇದಕ್ಕೂ ಮೊದಲು ಉಳಿತಾಯಕ್ಕೆ ಲೆಕ್ಕ ಮಾಡಿ. ಏಕೆಂದರೆ ಈಗ ಪ್ರತಿ ವರ್ಷ ಮನೆ ಮಾರುಕಟ್ಟೆ ಬೆಲೆ ಶೇ.೧೦ ರಿಂದ ೧೫ರಷ್ಟು  ಹೆಚ್ಚಳವಾಗುತ್ತಿದೆ ಎನ್ನುವುದು ನಿಮ್ಮ ನೆನಪಿನಲ್ಲಿರಲಿ.  ಅದಕ್ಕೆ, ಹಿರಿಯರು ಹೇಳಿರೋದು 'ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು' ಎಂದು.

* ದುಡ್ಡು ಉಳಿಸುವ ಭರದಲ್ಲಿ ಸಂತೋಷಕ್ಕೆ ಭಗ್ನ ಬರದಿರಲಿ :
ಬಿಡುವಿಲ್ಲದ ದುಡಿಮೆ, ಬದುಕು ಕಟ್ಟಿಕೊಳ್ಳುವ ತವಕ, ಹೆಜ್ಜೆ ಹೆಜ್ಜೆಗೂ ಲೆಕ್ಕ. ಹೀಗೆ ದುಡ್ಡು ಉಳಿಸುವ ಭರದಲ್ಲಿ ಇರುವ ಸಂತೋಷದ ಕ್ಷಣಗಳನ್ನು ಹಾಳು ಮಾಡಿಕೊಳ್ಳದಿರಿ. ಸಾಮಾನ್ಯವಾಗಿ ಮದುವೆಯ ನಂತರ ಮನಸ್ಸು, ಮತ್ತು ದೇಹ ಸಂತೋಷವನ್ನು ಹೆಚ್ಚು ಇಷ್ಟಪಡುತ್ತವೆ. ಆ ಸಂತೋಷದ ಕ್ಷಣಗಳಿಗೆ ಎಂದೂ ಬ್ರೇಕ್ ಹಾಕಬೇಡಿ. ಏಕೆಂದರೆ, ಆ ಕ್ಷಣಗಳು ಮತ್ತೆ ಜೀವನದಲ್ಲಿ ಮರುಕಳಿಸುವುದಿಲ್ಲ. ಜತೆಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇದು ಸೂಕ್ತ ಸಮಯ. ಆದ್ದರಿಂದ ವಾರಂತ್ಯದ ಔಟಿಂಗ್ ಅಥವಾ ತಿಂಗಳಾಂತ್ಯದ ಔಟಿಂಗ್ ಹೋಗಬೇಕಾ? ಹೋದರೆ ಎಲ್ಲಿಗೆ, ಹೇಗೆ? ಯಾವಾಗ, ಎಷ್ಟು ದುಡ್ಡು ಖರ್ಚಾಗುತ್ತೆ ಎನ್ನುವ ಪ್ಲಾನ್ ಮೊದಲೇ ಮಾಡಿಟ್ಟುಕೊಳ್ಳಿ. ಈ ಸಂತೊಷದ ಕ್ಷಣಗಳಿಗೂ ನಿಮ್ಮ ಲೆಕ್ಕದಲ್ಲಿ ಸ್ವಲ್ಪ ಪಾಲಿರಲಿ. ಮುಖ್ಯವಾಗಿ ಒಂದು ನೆನಪಿಡಿ. ಜೀವನಕ್ಕಾಗಿ ಉಳಿತಾಯ ಅನಿವಾರ್ಯ, ಆದರೆ ಉಳಿತಾಯವೇ ಜೀವನವಲ್ಲ.!