Sunday 25 August 2013

ವಿಕೃತ ಯೋಚನೆಗಳಿಂದ ಅರ್ಥ ಕಳೆದುಕೊಳ್ಳದಿರಲಿ 'ಪ್ರೀತಿ’

ಪ್ರೀತಿಗೆ ಮತ್ತೊಂದು ಹೆಸರೇ ತ್ಯಾಗ, ಕಾಳಜಿ ಎನ್ನುತ್ತಾರೆ. ಯಾರ ಪ್ರೀತಿಯಲ್ಲಿ ತ್ಯಾಗ, ಕಾಳಜಿ ಹೆಚ್ಚಿರುತ್ತೋ ಅದು ನಿಜವಾದ ಪ್ರೀತಿ ಎಂದೆನಿಸಿಕೊಳ್ಳುತ್ತದೆ.  ನಾವು ಪ್ರೀತಿಸುವವರು ಸದಾ ಕಾಲ ಸುಖವಾಗಿ, ಸಂತೋಷವಾಗಿ ಇರಬೇಕೆಂದು ಬಯಸುತ್ತೇವೆ, ಬಯಸಬೇಕು ಕೂಡ, ಏಕೆಂದರೆ ಅದೇ ನಿಜವಾದ ಪ್ರೀತಿ. ನಿಜವಾದ  ಪ್ರೀತಿಗೆ ಸ್ವಾರ್ಥ ಎಂದರೆ  ಏನೆಂದು ಗೊತ್ತಿಲ್ಲ. ಪ್ರೀತಿಸುವವರೇ ಸರ್ವಸ್ವ, ಅವರ ಸಂತೋಷದಲ್ಲೇ ನಮ್ಮ ಸಂತೋಷವಿದೆ ಎಂದು ಭಾವಿಸುವುದೇ ನಿಜವಾದ ಪ್ರೀತಿ. ಆದರೆ, ಇಲ್ಲಿ ಎಷ್ಟೋ ಜನ ಪ್ರೀತಿ ಮಾಡುತ್ತಾರೆ, ಅವರಲ್ಲಿ ನಿಜವಾಗಿ ಪ್ರೀತಿಸುವವರು ಬೆರಳೆಣಿಕೆಯಷ್ಟು ಮಾತ್ರ. ಕೆಲವರ ಪ್ರೀತಿಯ ಉದ್ದೇಶವೇ ಬೇರೆಯಾಗಿರುತ್ತೆ. ಒಂದಿಷ್ಟು ಜನರು ಹಣಕ್ಕಾಗಿ ಪ್ರೀತಿಸಿದರೆ, ಇನ್ನು ಕೆಲವರು ಕ್ಷಣಿಕ ಸುಖಕ್ಕಾಗಿ ಪ್ರೀತಿಸುತ್ತಾರೆ. ಇವರ ಮಧ್ಯೆ ಪ್ರೀತಿಗಾಗಿ ಪ್ರೀತಿಸು ವವರು ತುಂಬಾ ಕಡಿಮೆ.
ನಿಜವಾದ ಪ್ರೀತಿಗೆ ಇನ್ನೊಂದು ಹೇಸರಿಡಬೇಕೆಂದರೆ ಅದು ’ತ್ಯಾಗ’ ಎಂದರೆ ತಪ್ಪಾಗಲಾರದು. ಹೌದು ಪ್ರೀತಿ ಎಂದಿಗೂ ತ್ಯಾಗದ ಪ್ರತಿರೂಪ. ಪ್ರೀತಿಸುವವರಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ ಕೆಲವರು. ಇನ್ನು ಕೆಲವರು ಪ್ರೀತಿಯ ಹೆಸರಲ್ಲಿ ಪ್ರೀತಿಸಿದವರ ಸರ್ವಸ್ವವನ್ನೂ ಕಿತ್ತುಕೊಳ್ಳುತ್ತಾರೆ. ಹಣ, ವಡವೆ, ಮಾನ, ಪ್ರಾಣ ಎಲ್ಲವನ್ನೂ. ಪ್ರೀತಿ ಎಂದರೆ ಎಂದಿಗೂ ಕೊಡುವುದೇ ಹೊರತು ಬೇಡುವುದಲ್ಲ. 
ಪ್ರೀತಿಯನ್ನು ತ್ಯಾಗಕ್ಕೆ ಹೋಲಿಸಲು ಒಂದು ಕಾರಣವಿದೆ. ಕರುಣೆಯನ್ನೇ ಕಳೆದುಕೊಂಡು ಪ್ರೀತಿಸಿದವರ ಜೀವನವನ್ನೇ ಕತ್ತಲೆಗೆ ತಳ್ಳುವಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ನಾನು ಅವಳನ್ನು ಪ್ರೀತಿಸಿದೆ, ಅವಳು ಇನ್ನೊಬ್ಬನನ್ನು ಪ್ರೀತಿಸಿದಳು ಎಂಬ ಕಾರಣಕ್ಕೆ ನಿರಾಶೆಗೊಂಡು ನಾವೇ ಪ್ರೀತಿಸಿದವರ  ಜೀವನವನ್ನು ಸುಟ್ಟು ಹಾಕುವುದು ಎಷ್ಟು ಸರಿ ಎಂಬುದೇ ನನ್ನ ಪ್ರಶ್ನೆ.
ನಾನು ಮೊದಲೇ ಹೇಳಿದ ಹಾಗೆ ಪ್ರೀತಿ ಕೊಡುವುದೇ ಹೊರತು ಪಡೆಯುವುದಲ್ಲ. ನಾವು ಒಬ್ಬರನ್ನು ಪ್ರೀತಿಸಿದಾಕ್ಷಣ ಅವರೂ ನಮ್ಮನ್ನು ಪ್ರೀತಿಸಬೇಕು ಎಂದು ಬಯಸುವುದು ಮೂರ್ಖತನ, ಹಾಗೆ ಬಯಸುವಾಗ ನಮ್ಮಲ್ಲಿ ಪ್ರೀತಿಯೇ ಇದ್ದರೂ ಅದು ತನ್ನ ಅರ್ಥವನ್ನು ಕಳೆದುಕೊಂಡು ಬಿಡುತ್ತದೆ. ಪ್ರೀತಿಸಿದವರಿಗಾಗಿ ಏನನ್ನಾದರೂ ಮಾಡಲು ನಾವು ತಯಾರಾಗಿರುತ್ತೇವೆ. ಹಾಗೆಂದ ಮಾತ್ರಕ್ಕೆ ಪ್ರೀತಿ ಸಿಗಲಿಲ್ಲವೆಂಬ ಹತಾಶೆಯಲ್ಲಿ ಪ್ರೀತಿಸಿದವರ ಜೀವನವನ್ನು ಕಿತ್ತುಕೊಳ್ಳುವುದು ಎಷ್ಟು ಸರಿ.?
ಪ್ರತಿಯೊಬ್ಬರ ಮನಸ್ಥಿತಿಗಳು ಬೇರೆ ಬೇರೆಯಾಗಿರುತ್ತವೆ. ಅವರವರ ಇಷ್ಟಗಳು ಬೇರೆ ಬೇರೆಯಾಗಿರುತ್ತವೆ. ತಮಗಿಷ್ಟವಾಗುವ ಮನಸ್ಸುಗಳನ್ನು  ಮುಗ್ಧ ಮನಸ್ಸುಗಳು ಹಂಬಲಿಸುತ್ತಿರುತ್ತವೆ. ಆ ಮುಗ್ಧ ಮನಸ್ಸು ನಿಮ್ಮಲ್ಲಿಲ್ಲವಾದರೆ ನೀವು ಅವರ ಪ್ರೀತಿಗೆ ಹೇಗೆ ತಾನೇ ಅರ್ಹರಾಗುತ್ತೀರಿ.? ಹಾಗೆಂದು ಪ್ರೀತಿಸುವುದೇ ತಪ್ಪೆಂದುಹೇಳುತ್ತಿಲ್ಲ. ಮನಸ್ಸಿಗೆ ಸಂಬಂಧಿಸಿದ ಪ್ರೀತಿಯನ್ನು ದೈಹಿಕವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಆ ಪ್ರೀತಿ ತನಗ್ಯಾರು ಇಷ್ಟವೋ ಅಲ್ಲಿಯೇ ಉಳಿದುಬಿಡುತ್ತೆ ಹೊರತು ಬಲವಂತದಿಂದ ಅದನ್ನು ಪಡೆದುಕೊಳ್ಳುವ ಕೀಳು ಮಟ್ಟದ ಕೆಲಸಕ್ಕೆ ಕೈಹಾಕಬಾರದು.
ಪ್ರೀತಿಸಿದವರು ನಮ್ಮ ಪ್ರೀತಿಯನ್ನು ತಿರಸ್ಕರಿಸಿದಾಗ ಆ ವಿಷಯ ನಮ್ಮನ್ನು ಎಷ್ಟೇ ಚುಚ್ಚಿದರೂ ಸಹಿಸಿಕೊಳ್ಳಲೇಬೇಕು. ನಿರಾಸೆ ತಂದ ಆ ಕ್ಷಣದಲ್ಲಿ    ದು:ಖವಾಗುವುದು ಸಹಜ. ಆದರೆ ಅದೇ ಕ್ಷಣದಲ್ಲಿ ನಿಮ್ಮ ಬುದ್ದಿಯನ್ನು ಕೋಪದ ಕೈಗೆ ಕೊಟ್ಟರೆ. ನೀವು ಪ್ರೀತಿಸಲು ಇದ್ದ ಅರ್ಹತೆಯನ್ನೂ ಆಗ ಕಳೆದುಕೊಂಡುಬಿಡುತ್ತೀರಿ. ಏಕೆಂದರೆ ಬಲವಂತದಿಂದ ಪಡೆದುಕೊಂಡರೆ ಅದು ಎಂದೂ ಪ್ರೀತಿ ಎಂದೆನಿಸುವುದಿಲ್ಲ.  ಹಾಗೆಯೇ ಕೊಪದಲ್ಲಿ ಆಸಿಡ್ ಹಾಕಿ ಮುದ್ದು ಮುಖಗಳನ್ನು ವಿರೂಪಗೊಳಿಸುವ ವಿಕೃತ ಮನಸ್ಸಿನ ಪ್ರೀತಿಯನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ.  ಹೀಗೆ ದೇಶದಲ್ಲಿ ಅದೆಷ್ಟೋ ಮುದ್ದು ಮುಖಗಳು ವಿಕೃತ ಪ್ರೀತಿಗೆ ಬಲಿಯಾಗಿ ತಮ್ಮ ಮುದ್ದು ಮುಖಗಳೊಂದಿಗೆ ಸುಂದರ ಕನಸುಗಳನ್ನು ಕಟ್ಟಿಕೊಂಡ ಜೀವನವನ್ನೇ ಸುಟ್ಟುಕೊಂಡು ನಳುತ್ತಿವೆ. ಆ ನರಳಾಟದಲ್ಲಿನ ನೋವು ಪ್ರೀತಿಸಿದ ಮನಸ್ಸುಗಳಿಗೆ ತಟ್ಟುತ್ತಿಲ್ಲವೇ? ಪ್ರೀತಿಯನ್ನು ರಕ್ಷಿಸುವವರೇ ರಾಕ್ಷಸರಾದರೆ ಪ್ರೀತಿಗೆ ರಕ್ಷಣೆ ಇನ್ನೆಲ್ಲಿಂದ ಸಾಧ್ಯ. ಆದ್ದರಿಂದ ಒಲಿದು ಬಂದ ಪ್ರೀತಿಗೆ ಬೆಲೆ ಕೊಡಿ. ಪ್ರೀತಿ ಸಿಗದೇ ಇದ್ದ ಕ್ಷಣದಲ್ಲಿ ನೀವು ನಡೆದುಕೊಳ್ಳುವ ರೀತಿ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಆ ಕ್ಷಣದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ  ಅಮಾಯಕ ಮನಸ್ಸುಗಳನ್ನು ಸುಟ್ಟುಹಾಕದಂತಿರಲಿ. ಸ್ವಚ್ಚವಾದ ಪ್ರೀತಿಯನ್ನು ನೀವು ಬಯಸಿದಲ್ಲಿ ತುಚ್ಛ ಕೃತ್ಯಗಳ ಬಗೆಗಿನ ಆಲೋಚನೆಯನ್ನು ಬಿಟ್ಟು ಒಮ್ಮೆ ಒಳ್ಳೆಯ ಪ್ರೇಮಿಯಾಗಿ ಯೋಚಿಸಿ. ಹಾಗೆ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಿ ಬಲವಂತದಿಂದ ಏನನ್ನಾದರೂ ಪಡೆದುಕೊಳ್ಳಬಹುದು ಆದರೆ ಶುದ್ಧ ಪ್ರೀತಿಯೊಂದನ್ನು ಬಿಟ್ಟು.

No comments:

Post a Comment