Monday 2 September 2013

ಬದುಕನ್ನೇ ಬದಲಿಸುವ ಒಂದು ಆಯ್ಕೆ

ವಯಸ್ಸು ಹದಿನಾರು ಕಳೆದು ಹದಿನೇಳಕ್ಕೆ ಕಾಲಿಡುತ್ತಿದ್ದಂತೆ ಮನಸ್ಸು ಇಲ್ಲಸಲ್ಲದ್ದನ್ನೆಲ್ಲಾ ಬೇಡಲು ಶುರುವಿಟ್ಟುಕೊಳ್ಳುತ್ತದೆ. ಕಾಲೇಜ್ ಕ್ಯಾಂಪಸ್‌ನಲ್ಲಿ ಕುಳಿತು ಮನಸ್ಸು ಮಂಗನಂತಾ ಡಲಾರಂಭಿಸುತ್ತೆ. ಬೇಡಿಕೆಗಳು ಬೆಂಬಿಡದೇ ಕಾಡತೊಡಗುತ್ತವೆ. ಆ ಸಾಲಿನಲ್ಲಿ ಮೊಬೈಲ್‌ಗೆ ಮೊದಲ ಸ್ಥಾನ. ಏಕೆಂದರೆ ಇಡೀ ಪ್ರಪಂಚವನ್ನೇ ಬೆರಳ ತುದಿಯಲ್ಲಿ ತಡಕಾಡುವ ತವಕ. ಬದುಕಿನ ಅಂತರಾಳವನ್ನು ಅರಿಯುವ ಆತುರ. ಹರೆಯದ ಬಯಕೆಗಳನ್ನು ತೀರಿಸಿಕೊಳ್ಳುವ ಕಾತುರ.
ಈ ಕಾಲೇಜ್ ಎನ್ನುವ ಏಜಿನಲ್ಲಿ ಸಾಮಾನ್ಯವಾಗಿ ಹದಿಹರೆಯದವರನ್ನು ಇ-ಮೇಲ್, ಫೇಸ್‌ಬುಕ್, ಟ್ವಿಟರ್, ಚಾಟಿಂಗ್ ಅನ್ನುವ ಚಟಗಳು ಸದ್ದಿಲ್ಲದೇ ಅಂಟಿಕೊಂಡು ಬಂಗಾರದಂತೆ ಬೆಲೆ ಬಾಳುವ ಸಮಯವನ್ನು ತಿಂದುಹಾಕುತ್ತವೆ. ಪುಸ್ತಕದ ಜಾಗದಲ್ಲಿ ಮೊಬೈಲ್ ಬಂದು ಪುಸ್ತಕದ ಅಂತರವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಕಾಲೇಜ್ ಕಾಲದಲ್ಲಿ ಬೇಕಾಗಿರುವುದು ಪುಸ್ತಕ ಎಂಬ ಗುಡ್ ಫ್ರೆಂಡೇ ಹೊರತು. ಮೊಬೈಲ್ ಎಂಬ ಬ್ಯಾಡ್ ಪ್ರೆಂಡ್ ಅಲ್ಲ.
ಬುದ್ಧಿ ಹೆಚ್ಚಲು ಪುಸ್ತಕದ ಓದು ನಮ್ಮದಾಗಬೇಕು. ನಮ್ಮ ಮೊದಲ ಸ್ನೇಹಿ ಅದಾಗಿದ್ದರೆ ಜೀವನವೇ ಗೆದ್ದಂತೆ. ಕೈಯಲ್ಲೊಂದು ಪುಸ್ತಕ ಹಿಡಿದುಕೋ ಆಗ ನಿನಗಾಗುವ ಅರಿವೇ ಬೇರೆ. ನಿನ್ನೆಡೆಗೆ ಒದಗಿ ಬರುವ ಗೌರವವೇ ಬೇರೆ ಎಂದು ಪ್ರಾಧ್ಯಾಪಕರು, ಪೋಷಕರು ಯುವ ಮನಸ್ಸುಗಳಿಗೆ ಹೇಳುತ್ತಲೇ ಇರುತ್ತಾರೆ. ಆದರೆ ಸ್ಮಾರ್ಟ್ ಜಗತ್ತಿನ ಸ್ಮಾರ್ಟ್ ಫೋನ್ ಬಳಕೆಯ ಈ ಯುಗದಲ್ಲಿ ನಮಗ್ಯಾಕೆ ಬೇಕು ಪುಸ್ತಕ? ಕೈಯಲ್ಲಿ ಹೊರಳಾಡಿಸುವ ಸೆಲ್ ನಲ್ಲೇ ಮಾಹಿತಿಯನ್ನೆಲ್ಲ್ಲಾ ತುಂಬಿಕೊಂಡು ಆರಾಮವಾಗಿದ್ದುಬಿಡುತ್ತೇವೆ ಎನ್ನುತ್ತವೆ ಇಂದಿನ ಯುವ ಮನಸ್ಸುಗಳು.
ಹೌದು ಬದಲಾಗುತ್ತಿದೆ ಇಂದಿನ ಟ್ರೆಂಡ್ ಎನ್ನುವ ಮಾತಿನ ಮೊದಲ ಸೂಚ್ಯಂಕವೇ ಎಲ್ಲಾ ಯುವಕ-ಯುವತಿಯರ ಕೈಯಲ್ಲಿ ಕಂಡುಬರುತ್ತಿರುವ ಸೆಲ್ ಫೋನ್. ಕ್ಯಾಂಪಸ್‌ನಲ್ಲಿ ಇದರ ಹಾವಳಿ ಅಷ್ಟಿಷ್ಟಲ್ಲ. ಇದು ಒಬ್ಬರಿಗೊಬ್ಬರು ತಮ್ಮ ಸಾಮರ್ಥ್ಯ ಹೇಳಿಕೊಂಡಂತೆ. ಸೆಲ್ ಫೋನ್‌ನಲ್ಲಿರುವ ಮಟೀರಿಯಲ್‌ಗಳು ಇಲ್ಲಿ ಅಗಾಧ ಚರ್ಚೆಗೆ ಗ್ರಾಸವಾಗಿವೆ. ಇದೊಂದು ಆಧುನಿಕ ಜಗತ್ತಿನ ಮನಸ್ಸುಗಳನ್ನು ಹೆಣೆದುಕೊಂಡಿರುವುದರ ಜತೆಗೆ ಅಷ್ಟೇ ವೇಗವಾಗಿ ಒಬ್ಬರಿಗೊಬ್ಬರನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ.  ಕಾರಿಡಾರ್ ಮುಂದೆ ಬಂದ ದೊಡ್ಡವರನ್ನು ಕಂಡಾಗ ಅವರಿಗೆ ನಾವು ಗೌರವವನ್ನು ಸೂಚಿಸುತ್ತೇವೆ ಎಂದಾದರೆ ಕಿವಿಯಲ್ಲಿ ಇಟ್ಟುಕೊಂಡ ಇಯರ್‌ಫೋನ್ ಆಚೆ ತೆಗೆದಿದ್ದೇವೇ ಎಂದರ್ಥ. ಇದು ಕ್ಯಾಂಪಸ್‌ನ ಮಾಡ್ರನ್ ಸೆಲ್ಯೂಟ್.
ಸೆಲ್ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂದರೆ ಪುಸ್ತಕವನ್ನಿಟ್ಟುಕೊಳ್ಳುವ ಭರಾಟೆ ಇಲ್ಲ. ಅತ್ಯಂತ ದೊಡ್ಡ ಜಗತ್ತನ್ನು ಪುಟ್ಟ ಪ್ರಪಂಚದಲ್ಲಿ ನೋಡಬಹುದಾದರೆ ಅದು ಸೆಲ್ ನಲ್ಲಿ ಮಾತ್ರ. ಹಾಗಾಗಿ ಇ-ಬುಕ್, ಮತ್ತು ಅವರವರ ಮನಸ್ಥಿತಿಗೆ ಇಷ್ಟವಾಗುವ ಅಪ್ಲಿಕೇಷನ್‌ಗಳು ಸುಲಭವಾಗಿ ಸೆಳೆದುಕೊಂಡು ಬಿಡುತ್ತವೆ. ಕಾಲೇಜು ಮೆಟ್ಟಿಲು ಏರಬಯಸುವ ಪ್ರತಿಯೊಂದು ಯುವ ಮನಸ್ಸಿನ ಮೊದಲ ಆಯ್ಕೆ ಇಂದು ಸೆಲ್‌ಫೋನ್ ಆಗಿದೆ. ಅತ್ಯಂತ ಸಹಾಯಕಾರಿ ಯುವ ಬಂಧುವಾದ ಇದು ಅಷ್ಟೇ ನಿಖರವಾಗಿ ಹಾದಿ ತಪ್ಪಿಸುತ್ತಿರುವ ಕೆಟ್ಟ ಚಟವೂ ಹೌದು.
 ಇಂದು ಮೊಬೈಲ್ ಫೋನ್‌ಗಳ ಬಳಕೆ ಅನಿವಾರ್ಯವೂ ಹೌದು. ಆದರೆ ಅದು ಅನಿವಾರ್ಯ ಕಾರ್ಯಗಳಿಗೆ ಬಳಕೆಯಾದಾಗ ಮಾತ್ರ ಅದರ ಸದುಪಯೋಗವಾಗುತ್ತೆ. ಇಲ್ಲದಿದ್ದರೆ ಮೊಬೈಲ್‌ನ ಪುಟ್ಟ ಸ್ಕ್ರೀನ್ ಕೆಟ್ಟ ಚಟಗಳಿಗೆದಾರಿ ಮಾಡಿಕೊಡುತ್ತದೆ. ಮೊಬೈಲೋ, ಪುಸ್ತಕವೂ ಆಯ್ಕೆ ನಿಮಗೆ ಬಿಟ್ಟಿದ್ದು ಏಕೆಂದರೆ ನಿಮ್ಮ ಭವಿಷ್ಯ ನಿಮ್ಮ ಆಯ್ಕೆಯಲ್ಲಿಯೇ ಇದೆ.


No comments:

Post a Comment