Sunday 29 September 2013

ಕದ್ದು ನೋಡುವ ಖಯಾಲಿ...!


ಸಂಬಂಧಗಳು ನಂಬಿಕೆಯ ಆಧಾರದ ಮೇಲೆ ನಿಂತಿರುತ್ತವೆ. ಆ ನಂಬಿಕೆ ಎಂಬ ತಳಪಾಯದಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಗಳ ಗೋಪುರ ಕುಸಿದು ಬೀಳುವುದು ಸತ್ಯ. ನಿಮ್ಮ ಸಂಗಾತಿ ಬಗ್ಗೆ ನಿಮ್ಮಲ್ಲಿ ಅನುಮಾನವೆಂಬ ವಾಸಿಯಾಗದ ಕಾಯಿಲೆ ಹುಟ್ಟಿಕೊಂಡಿತೆಂದರೆ ಅದನ್ನು ಹೊಡೆದೋಡಿಸುವುದು ಸಾಧ್ಯವಿಲ್ಲ. ಅದು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತದೆ. ಸಂಬಂಧಗಳಲ್ಲಿ ಅನುಮಾನದ ಕರಿನೆರಳು ಕಂಡ ಕೂಡಲೇ ಅದನ್ನು ಆ ಕ್ಷಣವೇ ಸರಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಆ ಸಂಶಯದ ದಾರಿಯಲ್ಲಿ ನಿಮಗೆ ಗೊತ್ತಿಲ್ಲದೇ ನೀವೇ ನಡೆಯಲಾರಂಭಿಸುತ್ತೀರಿ. ಸಂಶಯವೆಂಬುದು ನಿಮ್ಮಿಂದ ಮಾಡಬಾರದ ಕೆಲಸಗಳನ್ನೆಲ್ಲ ಮಾಡಿಸಲಾರಂಭಿಸುತ್ತದೆ.
 ಮೊದಮೊದಲು ನಿಮ್ಮ ಸಂಗಾತಿಯ ಮೊಬೈಲ್‌ನ ಇನ್‌ಬಾಕ್ಸ್, ಔಟ್‌ಬಾಕ್ಸ್, ಇನ್‌ಕಮಿಂಗ್ ಕಾಲ್, ಔಟ್‌ಗೋಯಿಂಗ್ ಕಾಲ್ ಮತ್ತು ಫೇಸ್‌ಬುಕ್ ಅಪ್‌ಡೇಟ್‌ಗಳನ್ನು ಕದ್ದು ನೋಡುವುದು. ಅವರು ಎಲ್ಲೇ ಹೋದರೂ ಅವರನ್ನು ಹಿಂಬಾಲಿಸುವುದು. ಅವರ ಪ್ರತಿಯೊಂದು ನಡವಳಿಕೆಯ ಮೇಲೆ ನಿಗಾ ಇಡುವುದು ಹೀಗೆ ಅಮೂಲ್ಯವಾದ ಸಮಯವನ್ನು ಅನುಮಾನಗಳ ಹುಡುಕಾಟದಲ್ಲೇ ಕಳೆದುಬಿಡುತ್ತೀರಿ.
ಇತ್ತೀಚೆಗಂತೂ ಮೊಬೈಲ್ ಸಂಬಂಧಗಳನ್ನು ಕತ್ತರಿಸುವ ಒಂದು ಆಯುಧವಾಗಿ ಮಾರ್ಪಟ್ಟಿದೆ. ಹೆಚ್ಚಿನ ಸಂಬಂಧಗಳು ಮೊಬೈಲ್‌ನಲ್ಲಿಯೇ ಶುರುವಾದರೆ ಅದರೆರಡರಷ್ಟು ಸಂಬಂಧಗಳು ಮೊಬೈಲ್‌ನಿಂದಲೇ ಮುರಿದುಬೀಳುತ್ತಿವೆ. ಮತ್ತೊಬ್ಬರ ಮೊಬೈಲ್‌ನ್ನು ಕದ್ದು ನೋಡುವುದು ಅಪರಾಧ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಕಾಮನ್‌ಸೆನ್ಸ್ ಇರುವವರ‍್ಯಾರೂ ಬೇರೋಬ್ಬರ ಮೊಬೈಲ್‌ನ್ನು ಕದ್ದು ನೋಡುವುದಿಲ್ಲ. ಒಂದು ವೇಳೆ ಅನಿವಾರ್ಯವಾಗಿ ನೋಡಲೇಬೇಕಾಗಿ ಬಂದರೆ. ಎಸ್‌ಎಂಎಸ್ ಹಾಗೂ ಕಾಲ್‌ಲಾಗ್ ಗಳ ವಿಷಯಕ್ಕೆ ಕೈ ಹಾಕಬಾರದು. ಅದು ನಿಮಗೆ ಶೋಭೆ ತರುವುದಿಲ್ಲ.
   ಕದ್ದು  ನೋಡದಿರಿ ನಿಮ್ಮ ಸಂಗಾತಿ ಮೊಬೈಲ್ :
ನಂಬಿಕೆಯ ಕನ್ನಡಿ ಒಡೆದು ಹೋಗುತ್ತೆ. :
ಹೌದು ಅನುಮಾನ ಹುಟ್ಟೋದೇ ಸಣ್ಣ ಸಣ್ಣ ವಿಷಯಗಳಿಂದ, ಸಂಗಾತಿ ಮೇಲೆ ನಿಮ್ಮ ಅಧಿಕಾರ ಚಲಾಯಿಸುವ ಮೊದಲ ಹಂತವಾಗಿ ಅವರ ಮೊಬೈಲ್‌ಗೆ ಬಂದಿರುವ ಕರೆಗಳನ್ನು ಪರಿಶೀಲಿಸುವುದು. ಎಸ್‌ಎಂಎಸ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು. ಇದು ಯಾರ ನಂಬರ್?, ಅವರು ನಿನಗ್ಯಾಕೆ  ಮೇಸೇಜ್ ಮಾಡಿದ್ದಾರೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ನಿಮ್ಮ ಸಂಗಾತಿಯಲ್ಲಿ ಕೇಳಬೇಕೆನಿಸುತ್ತದೆ. ಹಾಗೆ ಈ ಪ್ರಶ್ನೆಗಳನ್ನು ನೀವು ಕೇಳಿದ್ದೇ ನಿಜವಾದರೆ ನಂಬಿಕೆಯ ಕನ್ನಡಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ನಿಮಗೇ ಗೊತ್ತಲ್ಲ ಬಿರುಕು ಬಿಟ್ಟಿರುವ ಕನ್ನಡಿಯಲ್ಲಿ ಕಾಣೋದೆಲ್ಲ ವಿಕಾರವಾಗೇ ಇರುತ್ತೆ. ಇಷ್ಟು ಸಾಕಲ್ಲವೇ ಅನುಮಾನಕ್ಕೆ ಹಾಲೆರೆದು ಬೆಳೆಸಲು.
ಸಣ್ಣ ಅನುಮಾನ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತೆ. :
ಪ್ರೀತಿ, ಪ್ರೇಮದಂತಹ ಸಂಬಂಧಗಳಲ್ಲಿ ನಂಬಿಕೆಯೇ ಜೀವಾಳ. ಆಗಾಗ ಹುಟ್ಟಿಕೊಳ್ಳುವ ಸಣ್ಣ ಸಂಶಯ ನಿಮ್ಮ ಮನಸ್ಸಿನ ಒಳಹೊಕ್ಕರೆ ಅದು ಎಡೆಬಿಡದೇ ನಿಮ್ಮನ್ನು ಕೊರೆಯುತ್ತಿರುತ್ತದೆ ಹಾಗೇ ಇನ್ನಷ್ಟು ಸತ್ಯಗಳನ್ನು ಕೆದಕಲು ಪ್ರೇರೇಪಿಸುತ್ತದೆ. ನೆಮ್ಮದಿಯನ್ನು ತಿಂದುಹಾಕುತ್ತದೆ. ಇದಕ್ಕೆ ಬ್ರೇಕ್ ಬೀಳಬೇಕೆಂದರೆ ನಿಮ್ಮವರ , ನೀವು ನಂಬಿದವರ ಮೊಬೈಲ್‌ಗಳನ್ನು ಎಂದೂ ಪರಿಶೀಲಿಸಬೇಡಿ. ಹಾಗೆಮಾಡಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ.
ನೀವು ನೋಡಿದ್ದೆಲ್ಲ ಸತ್ಯವಾಗಿರದೇ ಇರಬವುದು :
 ಹೌದು, ದೊಡ್ಡವರು ಅದಕ್ಕೆ ಹೇಳೋದು, ’ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂದು. ತಾಳ್ಮೆಯಿಂದ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದು. ಮೊಬೈಲ್‌ನಲ್ಲಿ ಯಾವುದೋ ಹೊಸದೊಂದು ನಂಬರ್ ನೋಡಿದಾಕ್ಷಣ ಇದು ಯಾರ ನಂಬರ್? ನಿನಗೆ ಯಾರು ಕಾಲ್ ಮಾಡಿದ್ದರು? ಏನು ಮಾತನಾಡಿದಿ? ಹೀಗೆ ಪ್ರಶ್ನೆಗಳನ್ನು ಕೇಳಿದರೆ  ಎದುರಿಗಿರುವವರಿಗೆ ಮುಜುಗರವಾಗದೇ ಇರಲಾರದು. ನಿಮ್ಮ ಬಗ್ಗೆ ಅವರ ಯೋಚನೆಯ ದಿಕ್ಕು ಆಗ ಬದಲಾಗತೊಡಗುತ್ತದೆ. ಆ ಕ್ಷಣ ಅವರು ಏನೇ ಹೇಳಿದರೂ ಅದನ್ನು ನಿಮ್ಮ ಮನಸ್ಸು ಒಪ್ಪದೇ ಹೋಗಬಹುದು. ಮತ್ತಷ್ಟು ಸಂಶಯದ ವಾಸನೆ ನಿಮ್ಮನ್ನಾವರಿಸಿಕೊಳ್ಳಬಹುದು. ಹೀಗೆ ಮೊಬೈಲ್‌ನ್ನು ಕದ್ದು ನೋಡುವುದರಿಂದ ನಾನಾ ಅನುಮಾನದ ಬೀಜಗಳು ಮೊಳಕೆಯೊಡೆಯತೊಡಗುತ್ತವೆ. ಸಂಬಂಧಗಳ ಮಧ್ಯದ ನಂಬಿಕೆಗೆ ಹೊಡೆತ ಬಿದ್ದರೆ ಅದು ದಾರಿ ತಪ್ಪುವುದು ನಿಶ್ಚಿತ.  ಅದರಲ್ಲೂ ಇತ್ತೀಚೆಗಂತೂ ಫೇಸ್‌ಬುಕ್‌ನಂತಹ ಸಮಾಜಿಕ ತಾಣಗಳನ್ನು ಮೊಬೈಲ್‌ನಲ್ಲೇ ಅಪ್‌ಡೇಟ್ ಮಾಡುವ ಸೌಲಭ್ಯವಿರುವುದರಿಂದ ಮೊಬೈಲ್ ಸಂಬಂಧಗಳಿಗೆ ಮತ್ತಷ್ಟು ಡೇಂಜರಸ್ ಎನಿಸತೊಡಗಿದೆ. ಒಂದು ನೆನಪಿಡಿ,  ಸಂಬಂಧಗಳಿಗೆ ನಂಬಿಕೆಯೇ ಜೀವಾಳ. ಫೇಸ್‌ಬುಕ್‌ನಲ್ಲಿ ಇರುವ ಎಲ್ಲಾ ಮುಖಗಳು  ಸತ್ಯವಾದವು ಎಂದು ನಂಬುವವರು ಮೂರ್ಖರು. ಏಕೆಂದರೆ ’ಫೇಸ್’ಬುಕ್ ಹೆಸ ರೇ ಹೇಳುವ ಹಾಗೆ ಫೇಸ್‌ಗೆ ಅದೆಷ್ಟು ಜನ ಮುಖವಾಡ ಧರಿಸಿಕೊಂಡು ಫೇಸ್‌ಬುಕ್ ಅಪ್‌ಡೇಟ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಹೀಗೆ ಮಾಯಾ ಮುಖಗಳ ಮೋಹಕ್ಕೆ ಬಲಿಯಾಗಿ ನಿಮ್ಮ ಒಳ ಹೊರ ಗುಟ್ಟುಗಳನ್ನೆಲ್ಲಾ ರಟ್ಟುಮಾಡಿಕೊಳ್ಳುವ ಮುನ್ನ ಎಚ್ಚರದಿಂದಿರಿ. ಮೊಬೈಲ್ ನಿಂದ ಹುಟ್ಟುವ ಸಂಶಯಗಳಿಗೆ ಸಂಬಧಗಳನ್ನು ಬಲಿ ಕೊಡುವ ಮೊದಲು. ಒಮ್ಮೆ ಪ್ರಮಾಣಿಸಿ ನೋಡಿ.

No comments:

Post a Comment